ಸಿಜೆಪಿಯ ಭಾರತ ವಿರೋಧಿ ಅಭಿಯಾನಕ್ಕೆ ವಿದೇಶಿ ಹಣಕಾಸು ನೆರವು, ಪಾಕಿಸ್ತಾನದ ನಂಟು: ಸಾಕ್ಷಿ ಇದೆ ಎಂದ ಕೇಂದ್ರ
Anti-India Funding: "ಸಿಜೆಪಿ ನಾಯಕರಿಗೆ ಅನಧಿಕೃತ ಮೂಲಗಳಿಂದ, ಭಾರತ ವಿರೋಧಿ ಎನ್ಜಿಒಗಳಿಂದ ಹಾಗೂ ದೇಶದ ಒಳಗಿನ ಮತ್ತು ಹೊರಗಿನ ಭಾರತ ವಿರೋಧಿ ಸಂಘಟನೆಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಅಭಿಜಿತ್ ದೀಪ್ಕೆ ಅವರಿಗೆ ಅಮೆರಿಕ ಮೂಲದ ದಾನಿಗಳಿಂದ ಹಣ ಸಿಗುತ್ತಿದ್ದರೆ, ಅಶುತೋಷ್ ರಂಕಾ ಅವರಿಗೆ ಪಾಕಿಸ್ತಾನಿ ರಾಜಕಾರಣಿಗಳು ಹಣ ಪಾವತಿಸುತ್ತಿದ್ದಾರೆ" ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.
ಅಭಿಜಿತ್ ದೀಪ್ಕೆ ಮತ್ತು ಅಶುತೋಷ್ ರಾಂಕಾ (ಸಂಗ್ರಹ ಚಿತ್ರ) -
ಬೆಂಗಳೂರು, ನ. 5: ಕಾಕ್ರೋಚ್ ಜನತಾ ಪಾರ್ಟಿಯ (CJP) ಭಾರತ ವಿರೋಧಿ ಅಭಿಯಾನಕ್ಕೆ ವಿದೇಶದಿಂದ ಹಣಕಾಸಿನ ನೆರವು ಹರಿದು ಬಂದಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಅಭಿಜಿತ್ ದೀಪ್ಕೆ ಮತ್ತು ಅಶುತೋಷ್ ರಾಂಕಾ ಅವರಿಗೆ ವಿದೇಶದ ಹಣಕಾಸು ಸಂಸ್ಥೆಗಳೊಂದಿಗೆ ನಂಟಿರುವುದಕ್ಕೆ ಅಧಿಕಾರಿಗಳ ಬಳಿ ಖಚಿತ ಸಾಕ್ಷ್ಯಗಳಿವೆ ಎಂದು ತಿಳಿಸಿದ್ದಾರೆ. ಇದೀಗ ಅವರ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
"ಸಿಜೆಪಿ ನಾಯಕರಿಗೆ ಅನಧಿಕೃತ ಮೂಲಗಳಿಂದ, ಭಾರತ ವಿರೋಧಿ ಎನ್ಜಿಒಗಳಿಂದ ಹಾಗೂ ದೇಶದ ಒಳಗಿನ ಮತ್ತು ಹೊರಗಿನ ಭಾರತ ವಿರೋಧಿ ಸಂಘಟನೆಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ವಿದೇಶಿ ಅನುದಾನ ಪಡೆಯುವ ಎನ್ಜಿಒಗಳು ಮತ್ತು ಭಾರತ ವಿರೋಧಿ ಶಕ್ತಿಗಳು ದೇಶದೊಳಗೆ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ. ಅಭಿಜಿತ್ ದೀಪ್ಕೆ ಅವರಿಗೆ ಅಮೆರಿಕ ಮೂಲದ ದಾನಿಗಳಿಂದ ಹಣ ಸಿಗುತ್ತಿದ್ದರೆ, ಅಶುತೋಷ್ ರಂಕಾ ಅವರಿಗೆ ಪಾಕಿಸ್ತಾನಿ ರಾಜಕಾರಣಿಗಳು ಹಣ ಪಾವತಿಸುತ್ತಿದ್ದಾರೆ" ಎಂದು ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಸಿಜೆಪಿ ವಿರುದ್ಧ ಸಚಿವ ಜಿತೇಂದ್ರ ಸಿಂಗ್ ಆರೋಪ:
#WATCH | Bengaluru | Union Minister Dr Jitendra Singh says, "There is enough evidence to show that they are being funded by unauthorised sources, by anti-India NGOs, and anti-India organisations within and outside the country. The foreign-funded NGOs, deep state operatives and anti-Indiaforces are manufacturing this narrative...Abhijeet Dipke has been receiving funds from USA-based donors, Ashutosh Ranka, paid by Pakistani politicians..." (03.11)
— ANI (@ANI) November 4, 2026
ಆರೋಪ ನಿರಾಕರಿಸಿದ ಸಿಜೆಪಿ
ವಿದೇಶಿ ನಿಧಿಯ ಆರೋಪಗಳನ್ನು ಸಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. "ಅವರನ್ನು ಕೇಳಿ, ಒಂದು ವೇಳೆ ವಿದೇಶಿ ನಿಧಿ (ಫಾರಿನ್ ಫಂಡಿಂಗ್) ಇದ್ದಿದ್ದೇ ಆಗಿದ್ದರೆ ಅವರು ನಮ್ಮೊಂದಿಗೆ ಏಕೆ ಸಮಾಲೋಚನೆ ನಡೆಸಿದರು? ನಮ್ಮೊಂದಿಗೆ ಊಟ ಮಾಡಿದ್ದು ಯಾಕೆ? ಮತ್ತು ನಮ್ಮೊಂದಿಗೆ ಚಹಾ ಸೇವಿಸಿದ್ದೇಕೆ? ಅವರು ಮೂಲ ವಿಷಯಗಳನ್ನು ಕಡೆಗಣಿಸಿ ವಿದೇಶಿ ನಿಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸಿಜೆಪಿಯ ಬಹುತೇಕ ಖಾತೆಗಳು ಪಾಕಿಸ್ತಾನದಿಂದ ಬಂದಿವೆ ಎಂದು ಅವರು ಈ ಹಿಂದೆ ಹೇಳಿದ್ದರು. ಈ ಬಗ್ಗೆ ಅವರ ಬಳಿ ಯಾವುದೇ ಪುರಾವೆ ಇಲ್ಲʼʼ ಎಂದು ಸಿಜೆಪಿ ನಾಯಕ ಸೌರವ್ ದಾಸ್ ವಾಗ್ದಾಳಿ ನಡೆಸಿದ್ದಾರೆ.
ಬ್ಯಾರಿಕೇಡ್ ಮುರಿಯುವುದೇಕೆ? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತರಾಟೆ
ಬಿಜೆಪಿಯಿಂದ ಸಾಲು ಸಾಲು ಆರೋಪ
ಹಬ್ಬದ ಋತುವಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೊಂದಲ ಮತ್ತು ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದಲೇ ಸಿಜೆಪಿ ಇತ್ತೀಚಿನ ಪ್ರತಿಭಟನೆ ಆಯೋಜಿಸಿತ್ತು ಎಂದು ಬಿಜೆಪಿ ವಕ್ತಾರ ತುಹಿನ್ ಎ. ಸಿನ್ಹಾ ಎನ್ಡಿಟಿವಿಗೆ ತಿಳಿಸಿದ್ದಾರೆ. "ಒಂದು ತಿಂಗಳಿಂದ ಸಿಜೆಪಿ ನಾಯಕರು ಅನುಸರಿಸಿದ ತಂತ್ರಗಳು ದಂಗೆಯನ್ನು ಸೃಷ್ಟಿಸುವಂತಿದ್ದವು. ಹಬ್ಬದ ಋತುವಿನಲ್ಲಿ ದೇಶದ ರಾಜಧಾನಿಯಲ್ಲಿ ಅರಾಜಕತೆಯನ್ನು ಉಂಟುಮಾಡುವುದೇ ಅವರ ಗುರಿಯಾಗಿತ್ತು. ಇದರಲ್ಲಿ ಸ್ಪಷ್ಟವಾಗಿ ದುರುದ್ದೇಶಗಳಿದ್ದವು. ಇದೊಂದು ದುರುದ್ದೇಶಪೂರಿತ ಪ್ರಯತ್ನವಾಗಿತ್ತು" ಎಂದು ಆರೋಪಿಸಿದ್ದಾರೆ.
ಸಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು ಎಂದ ಅವರು, ಈ ಎರಡೂ ಸಂಘಟನೆಗಳು ಒಂದೇ ಸಮಯದಲ್ಲಿ ನ್ಯಾಯಾಂಗವನ್ನು ಗುರಿಯಾಗಿಸಿಕೊಂಡು ಕಾರ್ಯ ನಿವರ್ಹಿಸುತ್ತಿರುವುದಾಗಿ ಹೇಳಿದ್ದಾರೆ. ʼʼಸಿಜೆಪಿ ಆಗಲಿ ಅಥವಾ ಕಾಂಗ್ರೆಸ್ ಆಗಲಿ ಈ ಬಾರಿ ನ್ಯಾಯಾಂಗದ ವಿರುದ್ಧವೇ ಸಮರ ಸಾರಿದಂತೆ ಕಾಣುತ್ತಿದೆ. ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ತೆರಳಿದ ರೀತಿಯನ್ನೇ ನೋಡಿ. ಅತ್ಯಂತ ಪ್ರಮುಖವಾದ ವಿಚಾರಣೆಯೊಂದು ನಡೆಯಲಿರುವ ಹೊತ್ತಿನಲ್ಲೇ ನಕಲಿ ಮಹಾಭಿಯೋಗ ಪ್ರಕ್ರಿಯೆ ನಡೆಸಿದ್ದು ಕಾನೂನು ಬಾಹಿರʼʼ ಎಂದು ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಈ ಸಂಘಟಿತ ಪ್ರತಿಭಟನೆಗಳನ್ನು ರೂಪಿಸಲಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ! ಸಿಜೆಪಿ ಕಿಡಿ
ಸಮನ್ಸ್ ಜಾರಿ
ದೆಹಲಿ ಪೊಲೀಸರ ಅಪರಾಧ ವಿಭಾಗವು ವಿಚಾರಣೆಗಾಗಿ ಸೌರವ್ ದಾಸ್ ಮತ್ತು ರಂಕಾ ಅವರಿಗೆ ಸಮನ್ಸ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಧಿಕೃತ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದು, ಅನುಮತಿಯಿಲ್ಲದೆ ಜಂತರ್ ಮಂತರ್ಗೆ ಪ್ರವೇಶಿಸಿದ್ದು ಮತ್ತು ಅನ್ಯರ ಆಸ್ತಿಯೊಳಗೆ ಅತಿಕ್ರಮಣ ಪ್ರವೇಶ ನಡೆಸಿದ ಆರೋಪಗಳ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.