ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aurangzeb Tomb Row: ಔರಂಗಜೇಬ್‌ ಸಮಾಧಿ ವಿವಾದ; ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರ

ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್‌ನ ಸಮಾಧಿಯನ್ನು ತೆರವುಗೊಳಿಸುವಂತೆ ನಾಗ್ಪುರದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಕುರಾನ್‌ ಅನ್ನು ಸುಡಲಾಗಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಮಹಲ್ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸದ್ಯ ಪರಿಸ್ಥಿತಿ ತಿಳಿಯಾಗಿದೆ.

ನಾಗ್ಪುರದಲ್ಲಿ ನಿಯಂತ್ರಣಕ್ಕೆ ಬಂದ ಹಿಂಸಾಚಾರ

Profile Ramesh B Mar 17, 2025 11:18 PM

ಮುಂಬೈ: ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್‌ನ ಸಮಾಧಿಯನ್ನು (Aurangzeb Tomb Row) ತೆರವುಗೊಳಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಮುಸ್ಲಿಂ ಪವಿತ್ರ ಗ್ರಂಥ ಕುರಾನ್ ಅಪವಿತ್ರಗೊಳಿಸಲಾಗಿದೆ ಎಂಬ ವದಂತಿ ಹರಡಿದ ಹಿನ್ನಲೆಯಲ್ಲಿ ನಾಗ್ಪುರದಲ್ಲಿ ಸೋಮವಾರ (ಮಾ. 17) ಘರ್ಷಣೆ ಭುಗಿಲೆದ್ದಿದೆ. ಈ ವೇಳೆ ಹಿಂದೂಪರ ಸಂಘಟನೆಯ ವಿರುದ್ಧ ಮತ್ತೊಂದು ಗುಂಪು ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಹಿಂಸಾಚಾರ ಉಂಟಾಗಿ ಕನಿಷ್ಠ 4 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಶಾಂತಿ ಕಾಪಾಡುವಂತೆ ಸಾವರ್ಜನಿಕರಲ್ಲಿ ಮನವಿ ಮಾಡಿದ್ದಾರೆ.

ನಾಗ್ಪುರದ ಕೇಂದ್ರ ಭಾಗದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟ ನಡೆಸಲಾಗಿದ್ದು, ಅಗ್ನಿಶಾಮಕ ದಳಕ್ಕೆ ಸೇರಿದ ಕೆಲವು ವಾಹನಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರ ಮಧ್ಯ ಪ್ರವೇಶದ ನಂತರ ಇದೀಗ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ.



ಘಟನೆ ಹಿನ್ನೆಲೆ

ಸಂಭಾಜಿ ನಗರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಹಲ್ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಯ ಬಳಿ ಬಜರಂಗದಳದ ಸದಸ್ಯರು ಪ್ರತಿಭಟನೆ ನಡೆಸಿದ ಸ್ವಲ್ಪ ಸಮಯದ ನಂತರ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನೆಯ ವಿಡಿಯೊಗಳು ಶೀಘ್ರದಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ ಕುರಾನ್ ಅನ್ನು ಸುಡಲಾಗಿದೆ ಎಂದು ವದಂತಿ ಕೇಳಿ ಬಂತು. ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು.



ಮಹಲ್, ಕೊಟ್ವಾಲಿ, ಚಿಟ್ನಿಸ್ ಪಾರ್ಕ್, ಗಣೇಶಪೇತ್ ಮತ್ತು ಶುಕ್ರವಾರಿ ತಲಾವ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಜನಸಮೂಹ ಜಮಾಯಿಸಿದ್ದರಿಂದ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು ಮತ್ತು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Assault Case: ಪಾರ್ಕಿಂಗ್‌ ವಿಚಾರಕ್ಕಾಗಿ ಸೇನಾಧಿಕಾರಿ ಮೇಲೆ ನಡೆಸಿದ ಪೊಲೀಸರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮನೆಗಳ ಮೇಲೂ ದಾಳಿ

ದುಷ್ಕರ್ಮಿಗಳು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ತ್ವರಿತ ಪ್ರತಿಕ್ರಿಯೆ ತಂಡಗಳು (QRT), ಗಲಭೆ ನಿಯಂತ್ರಣ ಪೊಲೀಸ್ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆ (SRPF) ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನಗರದಾದ್ಯಂತ ನಿಯೋಜಿಸಲಾಗಿದೆ. ಕುರಾನ್ ಅಪವಿತ್ರಗೊಳಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ಬಜರಂಗದಳದ ನಾಯಕರು, ತಾವು ಔರಂಗಜೇಬನ ಪ್ರತಿಕೃತಿಯನ್ನು ಮಾತ್ರ ದಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.



"ನಾಗ್ಪುರ ಯಾವಾಗಲೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುತ್ತದೆ. ಪರಿಶೀಲಿಸದೆ ಯಾವುದೇ ಹೇಳಿಕೆಗಳನ್ನು ನಂಬಬೇಡಿ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿಯೂ ಹೇಳಿದ್ದಾರೆ. ನಾಗ್ಪುರ ಸಂಸದ, ಕೇಂದ್ರ ಸಚಿವ ನಿತಿನ್‌ ಘಡ್ಕರಿ ಕೂಡ ಶಾಂತಿ ಕಾಪಾಡುವಂತಿ ಮನವಿ ಮಾಡಿದ್ದಾರೆ. ಗಾಳಿ ಸುದ್ದಿ ಹರಡಿದ ಕಾರಣ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದೂ ಭರವಸೆ ನೀಡಿದ್ದಾರೆ.