ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಲೆಗೆ 10 ನಿಮಿಷ ತಡವಾಗಿ ಬಂದ ಬಾಲಕಿಗೆ ಘೋರ ಶಿಕ್ಷೆ; ನೋವಿನಿಂದ ಒದ್ದಾಡಿ ಪ್ರಾಣಬಿಟ್ಟ ವಿದ್ಯಾರ್ಥಿನಿ: ಮಕ್ಕಳ ದಿನಾಚರಣೆಯಂದೇ ದುರಂತ

Maharashtra News: ಕೇವಲ 10 ನಿಮಿಷ ತಡವಾಗಿ ಶಾಲೆಗೆ ಆಗಮಿಸಿದ 12 ವರ್ಷದ ವಿದ್ಯಾರ್ಥಿನಿಗೆ 100 ಬಸ್ಕಿ ಹೊಡೆಯುವ ಕಠಿಣ ನೀಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು 6ನೇ ತರಗತಿಯ ವಿದ್ಯಾರ್ಥಿನಿ ಕಾಜಲ್‌ ಗೊಂಡ ಆಲಿಯಾಸ್‌ ಅಂಶಿಕಾ ಎಂದು ಗುರುತಿಸಲಾಗಿದೆ. ವಸಾಯಿಯ ಶ್ರೀ ಹನುಮಂತ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ.

ಬಸ್ಕಿ ಹೊಡೆಯುವ ಶಿಕ್ಷೆಯಿಂದ ಮೃತಪಟ್ಟ 12 ವರ್ಷದ ಬಾಲಕಿ (ಎಐ ಚಿತ್ರ).

ಮುಂಬೈ, ನ. 15: ಮಕ್ಕಳ ದಿನವನ್ನು ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್‌ 14ರಂದು ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆದರೆ ಮಹಾರಾಷ್ಟ್ರದ ಶಾಲೆಯೊಂದರಲ್ಲಿ ಮಾತ್ರ ಮಹಾ ದುರಂತವೊಂದು ನಡೆದಿದೆ. ಮಕ್ಕಳನ್ನು ಎಚ್ಚರಿಕೆಯಿಂದ ನೋಡಬೇಕಾದ ಶಿಕ್ಷಕರೇ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾಗಿರುವ ಘಟನೆ ನಡೆದಿದೆ. ಕೇವಲ 10 ನಿಮಿಷ ತಡವಾಗಿ ಶಾಲೆಗೆ ಆಗಮಿಸಿದ 12 ವರ್ಷದ ವಿದ್ಯಾರ್ಥಿನಿಗೆ ಕಠಿಣ ಶಿಕ್ಷೆ ನೀಡಿದ್ದು, ಇದನ್ನು ತಡೆಯಾರದೆ ಆ ಬಾಲಕಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ (Maharashtra News). ಮೃತ ಬಾಲಕಿಯನ್ನು 6ನೇ ತರಗತಿಯ ವಿದ್ಯಾರ್ಥಿನಿ ಕಾಜಲ್‌ ಗೊಂಡ (Kajal Gond) ಆಲಿಯಾಸ್‌ ಅಂಶಿಕಾ ಎಂದು ಗುರುತಿಸಲಾಗಿದೆ.

ವಸಾಯಿಯ ಶ್ರೀ ಹನುಮಂತ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ನವೆಂಬರ್‌ 8ರಂದು ಕಾಜಲ್‌ ಗೊಂಡ ಶಾಲೆಗೆ 10 ನಿಮಿಷ ತಡವಾಗಿ ಆಗಮಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ಆಕೆಗೆ 100 ಬಾರಿ ಕೂತು ನಿಲ್ಲುವ (ಬಸ್ಕಿ ಹೊಡೆಯುವ) ಶಿಕ್ಷೆ ನೀಡಿದರು. ಇದನ್ನು ಪೂರ್ಣಗೊಳಿಸುತ್ತಿದ್ದಂತೆ ಆಕೆಗೆ ಅಸಾಧ್ಯ ಬೆನ್ನು ನೋವು ಕಾಣಿಸಿಕೊಂಡಿತು.

ಮನೆಗೆ ಮರಳಿದ ಬಳಿಕ ಆಕೆಯ ಆರೋಗ್ಯ ಕ್ಷೀಣವಾಯಿತು. ಮನೆಯವರು ಗಾಬರಿಯಿಂದ ಕೂಡಲೇ ಆಕೆಯನ್ನು ನಲಸೊಪಾರ ಆಸ್ಪತ್ರೆಗೆ ದಾಖಲಿಸಿದರು. ಅದಾಗ್ಯೂ ಕಾಜಲ್‌ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮುಂಬೈಯ ಜೆ.ಜೆ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ನವೆಂಬರ್‌ 14ರಂದು ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Road Accident: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; 9 ವರ್ಷದ ಬಾಲಕಿ ಸಾವು

ಮನೆಯವರ ಆರೋಪ

ಕಾಜಲ್ ಕುಟುಂಬವು ಶಿಕ್ಷಕರು ನೀಡಿದ ಈ ಕಠಿಣ ಶಿಕ್ಷೆಯಿಂದಾಗಿ ಆಕೆಯ ಆರೋಗ್ಯ ಹದಗೆಟ್ಟು ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದೆ. ಅಲ್ಲದೆ ಬಸ್ಕಿ ಹೊಡೆಯುವಾಗ ಬ್ಯಾಗ್‌ ಆಕೆಯ ಹೆಗಲ ಮೇಲೆಯೇ ಇತ್ತು. ಇದು ನೋವನ್ನು ಇನ್ನಷ್ಟು ಹೆಚ್ಚಿಸಿತು ಎಂದು ಮನೆಯವರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಶಾಲೆಗೆ ಆಗಮಿಸಿ ಬಾಲಕಿಗೆ ಶಿಕ್ಷೆ ನೀಡಿದ ಶಿಕ್ಷಕರ ವಿರುದ್ದ ಕಠಿಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಸಾಯಿಯ ಎಂಎನ್‌ಎಸ್ ನಾಯಕ ಸಚಿನ್ ಮೋರೆ ಮಾತನಾಡಿ, ʼʼಮೊದಲೇ ಆರೋಗ್ಯ ಸಮಸ್ಯೆಗಳಿದ್ದರೂ ಬಾಲಕಿಗೆ ಶಿಕ್ಷೆ ವಿಧಿಸಲಾಗಿದೆʼʼ ಎಂದು ಹೇಳಿದ್ದಾರೆ. ಶಿಕ್ಷೆಯ ನಂತರ ಕಾಜಲ್‌ಗೆ ಕುತ್ತಿಗೆ ಮತ್ತು ಬೆನ್ನಿನಲ್ಲಿ ತೀವ್ರ ನೋವು ಉಂಟಾಗಿದ್ದು ಎದ್ದೇಳಲು ಸಾಧ್ಯವಾಗಲಿಲ್ಲ ಎಂದು ಮೃತ ಬಾಲಕಿಯ ತಾಯಿ ತಿಳಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (Maharashtra Navnirman Sena) ಈ ಬಗ್ಗೆ ಆಘಾತ ವ್ಯಕ್ತಪಡಿಸಿ, ಘಟನೆಗೆ ಕಾರಣರಾದ ಶಿಕ್ಷಕರ ವಿರುದ್ಧ ದೂರು ದಾಖಲಿಸದೆ ಶಾಲೆಯನ್ನು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಸದ್ಯ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.