ಶ್ರೀನಗರ, ಜು.22: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಪಾಕಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದಕ್ಕಾಗಿ ಮುಸ್ಲಿಂ ಧರ್ಮಗುರುವನ್ನು ಬಂಧಿಸಲಾಗಿದೆ. ಕಿಶ್ತ್ವಾರ್‌ನ ಛತ್ರು ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಹಾಗೂ ಅಗತ್ಯ ಸಹಾಯ ಒದಗಿಸಿದ ಆರೋಪದ ಮೇಲೆ ಪೊಲೀಸರು ಧರ್ಮಗುರುವನ್ನು ಬಂಧಿಸಿದ್ದಾರೆ (Cleric arrested).
ಆರೋಪಿಯನ್ನು ಕಿಶ್ತ್ವಾರ್‌ನ ಸಿಂಗ್‌ಪೋರಾದ ದ್ವಥೇರ್ ನಿವಾಸಿ ಮೊಹಮ್ಮದ್ ರಫೀಕ್ ನಾಯಕ್ ಎಂದು ಗುರುತಿಸಲಾಗಿದೆ. ಈತ ಕಲಾಸೋಯ್ ಪ್ರದೇಶದ ಮಸೀದಿಯಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ. ಸೈಫುಲ್ಲಾ ಮತ್ತು ಆತನ ಸಹಚರರಿಗೆ ಆಶ್ರಯ, ಆಹಾರ, ಅಗತ್ಯ ವಸ್ತುಗಳು ಹಾಗೂ ಸಮನ್ವಯದ ನೆರವು ಒದಗಿಸುವ ಮೂಲಕ, ಅವರು ಸುಮಾರು ಎರಡು ವರ್ಷಗಳ ಕಾಲ ಛತ್ರು ಕಾಡುಗಳಲ್ಲಿ ಆಸರೆ ಪಡೆಯಲು ರಫೀಕ್ ನಾಯಕ್ ಸಹಾಯ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೈಫುಲ್ಲಾ ಮತ್ತು ಅವನ ಗುಂಪನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ರಫೀಕ್ ನೀಡಿದ್ದ ಬೆಂಬಲವು ಅವರನ್ನು ಅಷ್ಟು ದಿನ ಸಕ್ರಿಯವಾಗಿರಿಸಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಕುಪ್ವಾರಾದ ಎಲ್‌ಒಸಿ ಬಳಿ ಪಾಕಿಸ್ತಾನ ಪ್ರಜೆಯ ಅರೆಸ್ಟ್
ಜಿಲ್ಲೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಈ ಬಂಧನವು ನಿರ್ಣಾಯಕ ಪ್ರಗತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮೊದಲು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನೀರ್ ಅಹ್ಮದ್ ಮತ್ತು ಮಶ್ಕೂರ್ ಅಹ್ಮದ್ ಅವರನ್ನು ಪೊಲೀಸರು ಬಂಧಿಸಿದ್ದರು. ಅದೇ ಭಯೋತ್ಪಾದಕ ಮಾಡ್ಯೂಲ್‌ಗೆ ಲಾಜಿಸ್ಟಿಕಲ್ ಮತ್ತು ಸಂವಹನ ಬೆಂಬಲವನ್ನು ಒದಗಿಸಿದ ಆರೋಪದ ಮೇಲೆ ಶಾಲಾ ಶಿಕ್ಷಕ ಮಶ್ಕೂರ್ ಅಹ್ಮದ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆಯು ಹಲವು ಆಯಾಮಗಳಲ್ಲಿ ಮುಂದುವರಿದಿದೆ. ಈ ಜಾಲದೊಂದಿಗೆ ಸಂಪರ್ಕ ಹೊಂದಿರುವ ಇತರ ಭಯೋತ್ಪಾದಕರಿಗೆ ನೆರವು ನೀಡುವವರನ್ನು ಗುರುತಿಸಿ, ಬಂಧಿಸಲು ನಿರಂತರ ಕಾರ್ಯಾಚರಣೆಗಳು ನಡೆಯುತ್ತಿವೆ. ಅಲ್ಲದೆ, ಕಿಶ್ತ್ವಾರ್‌ನಲ್ಲಿ ಈ ಜಾಲಕ್ಕೆ ಬೆಂಬಲ ನೀಡುತ್ತಿರುವ ಮೂಲ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ಕ್ರಮ ಕೈಗೊಳ್ಳಲು ಕಾರ್ಯಾಚರಣೆ ನಡೆಯುತ್ತಿದೆ.
ಭಯೋತ್ಪಾದಕರಿಗೆ ನೆರವು ನೀಡುವ ಯಾರೇ ಆಗಿರಲಿ, ಅವರ ಸ್ಥಾನ ಏನೇ ಇರಲಿ ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಬಂಧನವು ರವಾನಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.