ನವದೆಹಲಿ: ಕೇಂದ್ರ ಸರ್ಕಾರ ಮತ್ತೆ CNG ದರ ಏರಿಕೆ ಶಾಕ್ ನೀಡಿದ್ದು, ನೈಸರ್ಗಿಕ ಅನಿಲ (CNG) ಬೆಲೆ ಮತ್ತೆ 1 (CNG Prices Hiked) ರೂಪಾಯಿ ಏರಿಕೆಯಾಗಿದೆ. 2 ದಿನಗಳ ಹಿಂದಷ್ಟೇ ಕೆಜಿ CNG ದರ 2 ರೂಪಾಯಿಗೆ ಏರಿಕೆ ಕಂಡಿತ್ತು. ಆ ಬೆನ್ನಲ್ಲೇ 48 ಗಂಟೆಗಳಲ್ಲಿ 2ನೇ ಬಾರಿಗೆ CNG ದರವನ್ನು ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ದರ 80.09 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ 2 ರೂ. ಏರಿಕೆಯ ಬಳಿಕ CNG ದರ 77.09 ರೂ.ಗಳಿಂದ 79.09ಕ್ಕೆ ಏರಿಕೆಯಾಗಿತ್ತು.
ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಗ್ರಾಹಕರು ಪ್ರತಿ ಕೆಜಿಗೆ 88.70 ರೂ. ಪಾವತಿಸಬೇಕಾಗುತ್ತದೆ. ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಅಸ್ಥಿರತೆಯಿಂದ ಉಂಟಾದ ಹೆಚ್ಚಿನ ಇನ್‌ಪುಟ್ ವೆಚ್ಚವನ್ನು ಸಮತೋಲನಗೊಳಿಸಲು ಸಿಎನ್‌ಜಿ ದರ ಏರಿಕೆ ಮಾಡಲಾಗಿದೆ. ಆದರೆ, ಜಾಗತಿಕ ಇಂಧನ ಬೆಲೆ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ದರ ಹೆಚ್ಚಳವು ಅಲ್ಪ ಭಾಗವನ್ನಷ್ಟೇ ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿರೋದಾಗಿ ವರದಿಯಾಗಿದೆ.
ಇರಾನ್ ಸಂಘರ್ಷದ ನಂತರ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಮತ್ತು ಜಾಗತಿಕ ತೈಲ ಸಾಗಣೆಗೆ ನಿರ್ಣಾಯಕ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡೆತಡೆಗಳ ಮಧ್ಯೆ ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.
ಫೆಬ್ರವರಿ ಅಂತ್ಯದಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ ಜಾಗತಿಕ ಕಚ್ಚಾ ತೈಲದ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆಯಾಗಿವೆ ಎಂದು ವರದಿಯಾಗಿದೆ. ಏರಿಕೆಯ ಹೊರತಾಗಿಯೂ, ಸರ್ಕಾರವು ಗ್ರಾಹಕರನ್ನು ಹೆಚ್ಚಿನ ಇಂಧನ ವೆಚ್ಚಗಳ ಪರಿಣಾಮದಿಂದ ರಕ್ಷಿಸಲು ಪ್ರಯತ್ನಿಸಿದ್ದರಿಂದ, ಭಾರತದಲ್ಲಿ ಚಿಲ್ಲರೆ ಇಂಧನ ಬೆಲೆಗಳು ತಿಂಗಳುಗಳವರೆಗೆ ಹೆಚ್ಚಾಗಿ ಸ್ಥಗಿತಗೊಂಡಿದ್ದವು.
ಸತತವಾಗಿ ಸಿಎನ್‌ಜಿ ದರ ಏರಿಕೆಯ ಪರಿಣಾಮ ಇದನ್ನೇ ನಂಬಿಕೊಂಡಿರುವ ಆಟೋ ಮತ್ತು ಬಹುತೇಕ ಕ್ಯಾಬ್ಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದ ಸಂದರ್ಭದಲ್ಲಿಯೇ ಈ ಬಗ್ಗೆ ಚಾಲಕ ಸಂಘಟನೆಗಳು ಅಸಮಾಧಾನ ಹೊರಹಾಕಿದ್ದವು. ದರ ಹೆಚ್ಚಳದ ಪರಿಣಾಮ ಬಾಡಿಗೆ ದರವನ್ನು ಏರಿಸಲೇ ಬೇಕಾದ ಅನಿವಾರ್ಯತೆ ಉದ್ಭವಿಸಿದೆ.