ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಶಕ್ತಿ ಪ್ರದರ್ಶನ

ಸಾಮಾಜಿಕ ಮಾಧ್ಯಮದ ಮೂಲಕ ಜನ್ಮ ತಳೆದ ಕಾಕ್ರೋಚ್ ಜನತಾ ಪಕ್ಷ ದೆಹಲಿಯ ಜಂತರ್ ಮಂತರ್‌ನಲ್ಲಿ ಶಕ್ತಿ ಪ್ರದರ್ಶನವನ್ನು ನಡೆಸಿದೆ. ಮೊದಲ ಬಾರಿಗೆ ಭಾರಿ ಪ್ರಮಾಣದ ಯುವಸಮೂಹದೊಂದಿಗೆ ಬೀದಿಗೆ ಇಳಿದಿರುವ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Deepke) ಅವರು ದೆಹಲಿಗೆ ಬಂದ ತಕ್ಷಣವೇ ಶಿಕ್ಷಣ ಸಚಿವ (Union Education Minister) ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಜನ್ಮ ತಳೆದ ಕಾಕ್ರೋಚ್ ಜನತಾ ಪಕ್ಷ ಶನಿವಾರ ದೆಹಲಿಯ (Delhi) ಜಂತರ್ ಮಂತರ್‌ನಲ್ಲಿ (Jantar Mantar) ಭಾರಿ ಯುವ ಸಮೂಹದೊಂದಿಗೆ ಸೇರಿ ಶಕ್ತಿ ಪ್ರದರ್ಶನವನ್ನು ನಡೆಸಿದೆ. ಇದುವರೆಗಿನ ಅತಿದೊಡ್ಡ ಸಾರ್ವಜನಿಕ ಜನಾಂದೋಲನ ಇದು ಎಂದು ಗುರುತಿಸಲಾಗಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಶನಿವಾರ ನಡೆದ ಕಾಕ್ರೋಚ್ ಜನತಾ ಪಕ್ಷದ ಮೊದಲ ಪ್ರತಿಭಟನೆಯಲ್ಲಿ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಕೂಡ ಸೇರಿಕೊಂಡರು. ಭಾರಿ ಭದ್ರತೆಯ ನಡುವೆ ನಡೆದ ಪ್ರತಿಭಟನೆಯಲ್ಲಿ ಅಪಾರ ಪ್ರಮಾಣದಲ್ಲಿ ಯುವ ಸಮೂಹ ಪಾಲ್ಗೊಂಡಿತ್ತು.

ಸಿಂಧು ಜಲ ಒಪ್ಪಂದ ಅಮಾನತು ಮುಂದುವರಿಕೆ; ಪಾಕ್‌ಗೆ ಭಾರತದ ಖಡಕ್ ಎಚ್ಚರಿಕೆ

ಈ ಸಂದರ್ಭದಲ್ಲಿ ಮಾತನಾಡಿದ ಅಭಿಜೀತ್ ದಿಪ್ಕೆ, ಪ್ರಮುಖ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೆಹಲಿಗೆ ಬಂದು ಇಳಿದು ಕೂಡಲೇ ಜಂತರ್ ಮಂತರ್‌ಗೆ ತೆರಳಿದ ಅಭಿಜೀತ್ ಅವರನ್ನು ಸ್ವಾಗತಿಸಲು ನೂರಾರು ವಿದ್ಯಾರ್ಥಿಗಳು, ಯುವ ವೃತ್ತಿಪರರು ಮತ್ತು ಪೋಷಕರು ಜಮಾಯಿಸಿದ್ದರು. ಅನೇಕರು ಜಿರಳೆ ಮುಖವಾಡಗಳನ್ನು ಧರಿಸಿ, ಹೂವುಗಳನ್ನು ಹಿಡಿದುಕೊಂಡು, ನೀಟ್, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಸೇರಿದಂತೆ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪೋಷಕರು, ಯುವ ವೃತ್ತಿಪರರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಬರೆದಿರುವ ದೀಪ್ಕೆ, ಇದು ಶಿಕ್ಷಣ ವ್ಯವಸ್ಥೆಯ ಅಕ್ರಮಗಳನ್ನು ವಿರೋಧಿಸಿ ನಡೆಯುವ ಶಾಂತಿಯುತ ಸಾಂವಿಧಾನಿಕ ಚಳುವಳಿಯಾಗಿದೆ. ಇದರಲ್ಲಿ ಸೇರುವ ಮೊದಲು ಪ್ರತಿಭಟನಾಕಾರರು ಶಿಸ್ತನ್ನು ಕಾಪಾಡಿಕೊಳ್ಳಿ ಹಾಗೂ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಇಳಿಯಬೇಡಿ ಎಂದು ಮನವಿ ಮಾಡಿದರು.

ದೆಹಲಿಯಲ್ಲಿ ಇಳಿದಿದ್ದೇನೆ. ಜಂತರ್ ಮಂತರ್‌ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಪುಸ್ತಕ ಮತ್ತು ತಿರಂಗವನ್ನು ಜೊತೆಗೆ ತೆಗೆದುಕೊಂಡು ಬನ್ನಿ. ಕರುಣೆ ಮತ್ತು ಕೃತಜ್ಞತೆಯ ಸೂಚಕವಾಗಿ ಪೊಲೀಸರಿಗೆ ಹೂವುಗಳನ್ನು ಅರ್ಪಿಸಿ. ನಾವು ಈ ಆಂದೋಲನವನ್ನು ಪ್ರೀತಿ ಮತ್ತು ಶಾಂತಿಯಿಂದ ಮುನ್ನಡೆಸಬೇಕು ಎಂದು ಹೇಳಿದರು.

ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಬೆಂಬಲ ಸೂಚಿಸಿ, ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಪ್ರತಿಭಟನಾಕಾರರನ್ನು ಒತ್ತಾಯಿಸಿದರು. ನೀರಿನ ಬಾಟಲಿ, ಮೊಬೈಲ್ ಫೋನ್‌ಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವಂತೆ ಪ್ರತಿಭಟನಾಕಾರರಿಗೆ ಸಲಹೆ ನೀಡಿದರು.

ಪೊಲೀಸರಿಗೆ ಹೂವುಗಳನ್ನು ನೀಡಿ. ಶಸ್ತ್ರಾಸ್ತ್ರಗಳು ಅಥವಾ ಯಾವುದೇ ಅನುಮಾನಾಸ್ಪದ ವಸ್ತುಗಳಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದ ಅವರು, ಅಭಿಜೀತ್ ದಿಪ್ಕೆ ಅವರನ್ನು ಬಂಧಿಸಿದರೆ ಆರು ವಾರಗಳ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಭಾರಿ ಪ್ರಮಾಣದ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಜಂತರ್ ಮಂತರ್, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಅಂತರ-ರಾಜ್ಯ ಬಸ್ ಟರ್ಮಿನಲ್‌ಗಳು ಮತ್ತು ದೆಹಲಿಯನ್ನು ನೆರೆಯ ರಾಜ್ಯಗಳೊಂದಿಗೆ ಸಂಪರ್ಕಿಸುವ ಗಡಿ ಪ್ರದೇಶಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಪಡೆಯನ್ನು ನಿಯೋಜಿಸಲಾಗಿತ್ತು.

ವಿಶ್ವ ಪರಿಸರ ದಿನ ಕಾರ್ಯಕ್ರಮ; ಸ್ವಚ್ಛತೆ, ಹಸಿರು ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ಮಹತ್ವ ಒತ್ತಿಹೇಳಿದ ಪ್ರಧಾನಿ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯಲಾಗಿದೆ ಎಂದು ಸಿಜೆಪಿ ಘೋಷಿಸಿದೆ. ಭದ್ರತಾ ವ್ಯವಸ್ಥೆಗಾಗಿ ಸುಮಾರು 40 ಕಂಪನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಬಹು ಹಂತದ ಬ್ಯಾರಿಕೇಡಿಂಗ್ ಅಳವಡಿಸಲಾಗಿದ್ದು, ದೆಹಲಿಗೆ ಹೋಗುವ ಮಾರ್ಗಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತೆಯ ನಡುವೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author