ನವದೆಹಲಿ: ಭಾರೀ ಚರ್ಚೆಯಲ್ಲಿರುವ ಜಿರಳೆ ಜನತಾ ಪಾರ್ಟಿಯ (Cockroach Janta Party) ವೆಬ್‌ಸೈಟ್ ಅನ್ನು ರದ್ದು ಮಾಡಲಾಗಿದ್ದು, ಸಿಜೆಪಿ ಸಂಸ್ಥಾಪಕ ಈ ಕುರಿತು ಕೇಂದ್ರ ಸರ್ಕಾರದ ಕುರಿತು ಕಿಡಿ ಕಾರಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ "ಐಕಾನಿಕ್" ವೆಬ್‌ಸೈಟ್ ಅನ್ನು ಶನಿವಾರ ತೆಗೆದುಹಾಕಲಾಗಿದೆ ಎಂದು ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು "ಸರ್ವಾಧಿಕಾರಿ" ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಜಿಟಲ್ ಆಂದೋಲನದ ಸದಸ್ಯರಾಗಿ ಸುಮಾರು 10 ಲಕ್ಷ ಜನರು ಸೈನ್ ಅಪ್ ಮಾಡಿದ್ದಾರೆ ಎಂದು ದೀಪ್ಕೆ ಹೇಳಿದ್ದಾರೆ. "ಸರ್ಕಾರ ನಮ್ಮ ಐಕಾನಿಕ್ ವೆಬ್‌ಸೈಟ್ ಅನ್ನು ತೆಗೆದುಹಾಕಿದೆ. 10 ಲಕ್ಷ ಜಿರಳೆಗಳು ನಮ್ಮ ವೆಬ್‌ಸೈಟ್‌ನಲ್ಲಿ ಸದಸ್ಯರಾಗಿ ಸೈನ್ ಅಪ್ ಮಾಡಿದ್ದವು" ಎಂದು ದೀಪಿಕೆ ಪೋಸ್ಟ್ ಮಾಡಿದ್ದಾರೆ. ನೀಟ್-ಯುಜಿ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ "ಕಾಕ್ರೋಚ್ ಜನತಾ ಪಕ್ಷದ" ಆರು ಲಕ್ಷ ಸದಸ್ಯರು ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
'ಸರ್ಕಾರ ಜಿರಳೆಗಳಿಗೆ ಏಕೆ ಹೆದರುತ್ತಿದೆ?'
ಸರ್ಕಾರವು ಯುವಜನರ ಧ್ವನಿ ಮತ್ತು ಆನ್‌ಲೈನ್ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. "ಸರ್ಕಾರ ಜಿರಳೆಗಳಿಗೆ ಏಕೆ ಹೆದರುತ್ತಿದೆ? ಆದರೆ ಈ ಸರ್ವಾಧಿಕಾರಿ ನಡವಳಿಕೆಯು ಭಾರತದ ಯುವಕರ ಕಣ್ಣುಗಳನ್ನು ತೆರೆಯುತ್ತಿದೆ". "ನಮ್ಮ ಏಕೈಕ ಅಪರಾಧವೆಂದರೆ ನಾವು ನಮಗಾಗಿ ಉತ್ತಮ ಭವಿಷ್ಯವನ್ನು ಬೇಡುತ್ತಿದ್ದೆವು. ಆದರೆ ನೀವು ನಮ್ಮನ್ನು ಅಷ್ಟು ಸುಲಭವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ನಾವು ಈಗ ಹೊಸ ಮನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಜಿರಳೆಗಳು ಎಂದಿಗೂ ಸಾಯುವುದಿಲ್ಲ" ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದ ಬಗ್ಗೆ ಆಕ್ರೋಶ ಹೆಚ್ಚುತ್ತಿರುವ ಸಮಯದಲ್ಲಿ ಈ ವಿವಾದ ಬಂದಿದೆ.