ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕನ ಮೇಲೆ ಜೈಪುರದಲ್ಲಿ ಹಲ್ಲೆ: ನಿರುದ್ಯೋಗವೇ ಕಾರಣ ಎಂದ ಅಭಿಜಿತ್‌ ದೀಪ್ಕೆ

Abhijeet Dipke: ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಮೇಲಾದ ಹಲ್ಲೆ ಮತ್ತು ಕಪಾಳಮೋಕ್ಷದ ಘಟನೆಗೆ ದೇಶದ ಹೆಚ್ಚುತ್ತಿರುವ ನಿರುದ್ಯೋಗವೇ ಕಾರಣ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ದಾಳಿಕೋರರು ರಾಜಕೀಯ ಪಕ್ಷವೊಂದಕ್ಕೆ ಸೇರಿದವರು ಎಂದು ಸಿಜೆಪಿಯ ನಾಯಕರು ಆರೋಪಿಸಿದ್ದಾರೆ.

ಅಭಿಜಿತ್‌ ದೀಪ್ಕೆ ಮತ್ತು ಸಿಜೆಪಿಯ ಲೋಗೋ

ನವದೆಹಲಿ, ಜೂ. 16: ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಮೇಲಾದ ನಡೆದ ಹಲ್ಲೆ ಮತ್ತು ಕಪಾಳಮೋಕ್ಷದ ಘಟನೆಗೆ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟೇ ಮುಖ್ಯ ಕಾರಣ ಎಂದು ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಮಂಗಳವಾರ ಹೇಳಿದ್ದಾರೆ. ಕಳೆದ ತಿಂಗಳು ಈ ವ್ಯಂಗ್ಯ ರಾಜಕೀಯ ಪಕ್ಷವನ್ನು ಸ್ಥಾಪಿಸಿ ದೇಶದ ಗಮನ ಸೆಳೆದಿದ್ದ ದೀಪ್ಕೆ, ಯುವಕರಿಗೆ ಸೂಕ್ತ ಉದ್ಯೋಗಾವಕಾಶಗಳು ಇಲ್ಲದಿರುವುದೇ ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಪ್ರೇರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಜೈಪುರದಲ್ಲಿ ನಡೆದ ಘಟನೆಯು ದೇಶದ ತೀವ್ರ ನಿರುದ್ಯೋಗದ ಫಲಿತಾಂಶ. ದಾಳಿ ಮಾಡಿದ ವ್ಯಕ್ತಿಗೆ ಒಂದು ಉತ್ತಮ ಕೆಲಸವಿದ್ದಿದ್ದರೆ, ಆತ ಇಂತಹ ಕೃತ್ಯಕ್ಕೆ ಕೈಹಾಕುತ್ತಿರಲಿಲ್ಲ" ಎಂದು ದೀಪ್ಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ನೀಟ್ ಸೇರಿ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ಪ್ರತಿಭಟನೆ ನಡೆಸುತ್ತಿದ್ದರು. "ಯುವಕರಿಗೆ ಸರಿಯಾದ ಆದಾಯದ ಮಾರ್ಗಗಳಿಲ್ಲದ ಕಾರಣ, ಕೇವಲ 1,000 ರುಪಾಯಿಯಿಂದ 2,000 ರೂಪಾಯಿ ನೀಡಿ ಇಂತಹ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ ಇಂತಹ ಜನರಿಗೆ ಉದ್ಯೋಗ ನೀಡಲು ಗಮನ ಹರಿಸಲಿ" ಎಂದು ಅವರು ವಿನಂತಿಸಿದ್ದಾರೆ.

ಅಭಿಜಿತ್ ದೀಪ್ಕೆ ಅವರ ಎಕ್ಸ್‌ ಪೋಸ್ಟ್‌:



ಸೋಮವಾರ (ಜೂನ್‌ 15) ಜೈಪುರದ ಶಹೀದ್ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸ್ಥಳಕ್ಕೆ ದೀಪ್ಕೆ ಆಗಮಿಸಿದಾಗ ಈ ಘಟನೆ ನಡೆದಿತ್ತು. ಅವರ ಬೆಂಬಲಿಗರು ಅವರನ್ನು ಹೆಗಲ ಮೇಲೆ ಹೊತ್ತು ವೇದಿಕೆಯತ್ತ ಕರೆದೊಯ್ಯುತ್ತಿದ್ದಾಗ, ಇದ್ದಕ್ಕಿದ್ದಂತೆ ನುಗ್ಗಿದ 5-6 ಜನರ ಗುಂಪು ಅವರ ಮೇಲೆ ಮುಗಿಬಿದ್ದು ಕಪಾಳಮೋಕ್ಷ ಮಾಡಿದೆ. ವೈರಲ್ ಆಗಿರುವ ವಿಡಿyoಗಳಲ್ಲಿ, ವ್ಯಕ್ತಿಯೊಬ್ಬ ದೀಪ್ಕೆ ಅವರ ಕೊರಳಲ್ಲಿದ್ದ ವಸ್ತ್ರವನ್ನು ಎಳೆದು ಕೆಳಕ್ಕೆ ಹಾಕಿ ಕಪಾಳಕ್ಕೆ ಹೊಡೆಯುವುದು ಮತ್ತು ಉಳಿದ ಯುವಕರು ನಿರಂತರವಾಗಿ ಹಲ್ಲೆ ನಡೆಸುವುದು ದಾಖಲಾಗಿದೆ.

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿಚಾರಣೆ

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐದು ಜನರನ್ನು ಬಂಧಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಆರೋಪಿಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವರೆಲ್ಲರೂ ಬಿಜೆಪಿ ಗೂಂಡಾಗಳು ಎಂದು ಆರೋಪಿಸಿದ್ದಾರೆ. ದಾಳಿಕೋರರು ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದು, ಶೀಘ್ರದಲ್ಲೇ ಅವರ ಮುಖವಾಡ ಕಳಚಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜಕೀಯ ಸಿದ್ಧಾಂತಗಳ ನಡುವಿನ ಸಂಘರ್ಷವು ಇಂತಹ ದೈಹಿಕ ಹಲ್ಲೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾರಕ. ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಜೂನ್ 20ರಂದು ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ನಿರ್ಧರಿಸಿದೆ.