ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನರೇಂದ್ರ ಮೋದಿ ಪ್ರಧಾನಿಯಾಗಿದ್ದು ವಿದೇಶಿ ನೆರವಿನಿಂದ; ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿʼʼ: ರಾಹುಲ್‌ ಗಾಂಧಿ ನೇರ ಸವಾಲು

Rahul Gandhi VS Narendra Modi: ನೃಎಂದ್ರ ಮೋದಿ ಪ್ರಧಾನಿಯಾಗಿದ್ದು, ಈಗಲೂ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ವಿದೇಶಿ ನೆರವಿನಿಂದ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ತಾಕತ್ತಿದ್ದರೆ ಚರ್ಚೆ ನಡೆಸಲು ಬರುವಂತೆ ಮೋದಿಗೆ ಸವಾಲು ಹಾಕಿದ್ದಾರೆ.

ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ)

ದೆಹಲಿ, ನ. 2: ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗಗೊಂಡಿದ್ದು, ಎಸ್‌ಐಆರ್‌ (SIR) ವಿರುದ್ಧ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ (Rahul Gandhi) ಕಿಡಿಕಾರುತ್ತಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಮತಕಳ್ಳತನದಿಂದ ಎಂದಿರುವ ಅವರು ಇದೀಗ ತಮ್ಮ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ಮೋದಿ ಪ್ರಧಾನಿಯಾಗಲು, ಹುದ್ದೆಯಲ್ಲಿ ಮುಂದುವರಿಯಲು ವಿದೇಶಿ ನೆರವು ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆ ನಡೆಸಲು ಸಿದ್ಧ ಎಂದಿರುವ ರಾಹುಲ್‌ ಗಾಂಧಿ ಧೈರ್ಯವಿದ್ದರೆ ಮೋದಿ ಬರಲಿ ಎಂದು ಸವಾಲು ಹಾಕಿದ್ದಾರೆ. ಆ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ.

ರಾಷ್ಟ್ರೀಯ ಏಕತಾ ದಿವಸ್‌ನ ಅಂಗವಾಗಿ ಗುಜರಾತ್‌ನಲ್ಲಿ ನವೆಂಬರ್‌ 1ರಂದು ಮಾತನಾಡಿದ್ದ ಮೋದಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ತಮ್ಮ ಪ್ರಜಾಪ್ರಭುತ್ವ ಜವಾಬ್ದಾರಿಯನ್ನು ಕೈಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಶಕ್ತಿಯಂತೆ ವಿಪಕ್ಷಗಳು ವರ್ತಿಸುತ್ತಿವೆ ಎಂದು ಪ್ರಧಾನಿ ಆರೋಪಿಸಿದ್ದರು. ಅಲ್ಲದೆ, ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ಸಂಚು ರೂಪಿಸುತ್ತಿವೆ ಎಂದು ದೂರಿದ್ದರು. ವಿದೇಶಗಳಲ್ಲಿರುವ ಭಾರತ ವಿರೋಧಿ ಶಕ್ತಿಗಳೊಂದಿಗೆ ವಿಪಕ್ಷಗಳಿಗೆ ಇರುವ ಸಂಬಂಧದ ಬಗ್ಗೆ ಪ್ರಶ್ನಿಸಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವದಂತಿಗಳನ್ನು ಹರಡುವ ಮತ್ತು ಭಾರತದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನಗಳ ವಿರುದ್ಧ ಹರಿಹಾಯ್ದಿದ್ದರು.

ಮೋದಿಗೆ ಬಹಿರಂಗ ಸವಾಲು ಹಾಕಿದ ರಾಹುಲ್‌ ಗಾಂಧಿ:



ಈ ಎಲ್ಲ ಆರೋಪಗಳಿಗೆ ಎಕ್ಸ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ʼʼಮಿಸ್ಟರ್‌ ಮೋದಿ ಈ ದೇಶಕ್ಕೆ ಹೇಳುತ್ತಿರುವ ಸುಳ್ಳನ್ನು ನಿಲ್ಲಿಸಿ. ನೀವು ಪ್ರಧಾನಿಯಾಗಿದ್ದು ವಿದೇಶಿ ನೆರವಿನಿಂದ. ಈಗಲೂ ಪ್ರಧಾನಿಯಾಗಿ ಮುಂದುವರಿದಿರುವುದು ವಿದೇಶಿ ನೆರವಿನಿಂದಲೇʼʼ ಎಂದು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ದೆಹಲಿ ರ‍್ಯಾಲಿಗೆ ಬಿಜೆಪಿ ವ್ಯಂಗ್ಯ; ವಿಡಿಯೊ ಮೂಲಕ ಕೌಂಟರ್‌

ಭಾರತದ ಆರ್ಥಿಕತೆಯ ಸಂಪೂರ್ಣ ನಿಯಂತ್ರಣ ವಿದೇಶಿಗರ ಕೈಯಲ್ಲಿದೆ. ವಿದೇಶದ ಸೋಷಿಯಲ್‌ ಮೀಡಿಯಾ ಫ್ಲ್ಯಾಟ್‌ಫಾರ್ಮ್‌ಗಳು ಮೋದಿಯ ಬೆಂಬಲಕ್ಕೆ ನಿಂತಿವೆ ಎಂದಿದ್ದಾರೆ.

ʼʼನಿಮ್ಮ ಅರ್ಥಿಕ ವ್ಯವಸ್ಥೆ ನಿಂತಿರುವುದು, ನಿಯಂತ್ರಿಸುತ್ತಿರುವುದು ವಿದೇಶಿಗರು. ವಿದೇಶದ ಸೋಷಿಯಲ್‌ ಮೀಡಿಯಾ ನಿಮ್ಮ ಬೆನ್ನಿಗಿದೆ. ಈ ಬಗ್ಗೆ ಚರ್ಚೆ ನಡೆಸಲು ನಾನು ಸವಾಲು ಹಾಕುತ್ತೇನೆ. ನೀವು ಹೇಳುವ ಯಾವುದೇ ವೇದಿಕೆ, ಯಾವುದೇ ಸಮಯವಾದರೂ ಚರ್ಚೆ ನಡೆಸಲು ನಾನು ಸಿದ್ಧ. ನಿಮಗೆ ಧೈರ್ಯವಿದ್ದರೆ ಬನ್ನಿʼʼ ಎಂದು ಸವಾಲು ಹಾಕಿದ್ದಾರೆ. ʼʼನೀವು ಚರ್ಚೆ ಮಾಡಲು ತಯಾರಿಲ್ಲ ಎನ್ನುವುದು ನನಗೆ ಗೊತ್ತು. ಯಾಕೆಂದರೆ ನಿಮ್ಮ ಬಗ್ಗೆ ನನಗೆ ಗೊತ್ತಿರುವ ಸತ್ಯಕ್ಕೆ ಭಯಪಡುತ್ತಿದ್ದೀರಿʼʼ ಎಂದು ಹೇಳಿದ್ದಾರೆ.

''2024ರ ಲೋಕಸಭಾ ಚುನಾವಣೆ ಕಾನೂನು ಬಾಹಿರವಾಗಿತ್ತುʼʼ: ದೆಹಲಿ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಹೊಸ ಬಾಂಬ್‌

ಮೋದಿ ಹೇಳಿದ್ದೇನು?

ಭಾನುವಾರ ಮಾತನಾಡಿದ್ದ ಮೋದಿ ವಿಪಕ್ಷಗಳಿಗೆ ವಿದೇಶದೊಂದಿಗೆ ಇರುವ ಸಂಬಂಧವನ್ನು ಪ್ರಶ್ನಿಸಿದ್ದರು. "ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ನಿರಂತರವಾಗಿ ಪಿತೂರಿಗಳಲ್ಲಿ ತೊಡಗಿವೆ. ಒಂದು ದಶಕಕ್ಕೂ ಹೆಚ್ಚು ಕಾಲ ಹತಾಶೆ ಮತ್ತು ನಿರಾಶೆಯನ್ನು ಅನುಭವಿಸಿದ ನಂತರ, ಈ ಶಕ್ತಿಗಳು ಈಗ ಬಹಿರಂಗವಾಗಿ ಹೊರಬಂದಿವೆ" ಎಂದು ಅವರು ಹೇಳಿದ್ದರು.

"ವಿದೇಶದಲ್ಲಿ ಯಾರು ಯಾರನ್ನು ಗುಪ್ತವಾಗಿ ಭೇಟಿಯಾಗುತ್ತಿದ್ದಾರೆ? ಭಾರತ ವಿರೋಧಿ ಶಕ್ತಿಗಳು ಯಾರನ್ನು ಬೆಂಬಲಿಸುತ್ತಿವೆ? ಭಾರತದ ಶತ್ರುಗಳ ಭಾಷೆಯಲ್ಲಿ ಯಾರು ಮಾತನಾಡುತ್ತಿದ್ದಾರೆ? ನಾವೆಲ್ಲರೂ ಇಂತಹ ವಿದ್ಯಮಾನಗಳನ್ನು ಗುರುತಿಸಿ, ಒಟ್ಟಾಗಿ ಎದುರಿಸಬೇಕು" ಎಂದು ಕರೆ ನೀಡಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author