ನವದೆಹಲಿ: ಸಾಲು ಸಾಲು ಹಬ್ಬಗಳು ಹತ್ತಿರವಿರುವಾಗ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಅಕ್ಟೋಬರ್ 1ರಿಂದ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 62.50 (Commercial LPG Cylinder Prices Hiked) ರೂ.ನಷ್ಟು ಹೆಚ್ಚಾಗಿದೆ. ನವದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ 2,810ರೂ.ಗೆ ತಲುಪಿದೆ. ದರ ಹೆಚ್ಚಳದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳಲ್ಲಿ ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ.
ಪ್ರಮುಖ ನಗರಗಳಲ್ಲಿನ ಹೊಸ ದರಗಳ ವಿವರ ಇಲ್ಲಿದೆ:
- ನವದೆಹಲಿ: ವಾಣಿಜ್ಯ ಸಿಲಿಂಡರ್ ಬೆಲೆ 2,747.50 ರಿಂದ 2,810 ರೂ. ಕ್ಕೆ ಏರಿಕೆಯಾಗಿದೆ.
- ಮುಂಬೈ: 63 ರಷ್ಟು ಹೆಚ್ಚಳವಾಗಿದ್ದು, ಹೊಸ ದರ 2,764 ರೂ. ಆಗಿದೆ.
- ಚೆನ್ನೈ: 66.50 ರಷ್ಟು ಏರಿಕೆಯಾಗಿ, ಹೊಸ ದರ 2,983 ರೂ. ತಲುಪಿದೆ.
- ಪಾಟ್ನಾ: ದೇಶದಲ್ಲೇ ಅತಿ ಹೆಚ್ಚು ಅಂದರೆ 71.50 ಹೆಚ್ಚಳವಾಗಿದ್ದು, ಹೊಸ ದರ 3,100.50 ಆಗಿದೆ.
ಮನೆಗಳಲ್ಲಿ ಬಳಸುವ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದಾಗ್ಯೂ, ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದಿಂದಾಗಿ ಮುಂದಿನ ದಿನಗಳಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.
ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳಕ್ಕೆ ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಕಾರಣವಾಗಿವೆ. ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಆಮದಿಗೆ ಅಮೆರಿಕನ್ ಡಾಲರ್‌ನಲ್ಲಿ ಪಾವತಿಸಬೇಕಾಗುತ್ತದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಆಗುವ ಬದಲಾವಣೆಗಳು ಮತ್ತು ಹೆಚ್ಚುವರಿ ಸಾಗಣೆ ವೆಚ್ಚಗಳು ಸಹ ಸಿಲಿಂಡರ್ ದರ ಏರಿಕೆಗೆ ಕಾರಣವಾಗುತ್ತವೆ.
ಅಕ್ಟೋಬರ್ 1 ರಿಂದ, ಸಬ್ಸಿಡಿ ಪಡೆಯುವ ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದೆ. ಇ-ಕೆವೈಸಿ ಅಥವಾ ಅಗತ್ಯವಿರುವ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರು ಸರ್ಕಾರಿ ಸಬ್ಸಿಡಿಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.