Sonia Gandhi: ರಾಷ್ಟ್ರಪತಿ ವಿರುದ್ಧ ಹೇಳಿಕೆ ನೀಡಿದ ಸೋನಿಯಾ ಗಾಂಧಿಗೆ ಎದುರಾಯ್ತು ಸಂಕಷ್ಟ; ದೂರು ದಾಖಲು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದ ಮುಜಾಫರ್‌ಪುರದಲ್ಲಿ ಪ್ರಕರಣ ದಾಖಲಾಗಿದೆ. ಫೆ. 10ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಗೌರವಾನ್ವಿತ ರಾಷ್ಟ್ರಪತಿ ಅವರ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದರಿಂದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ವಕೀಲ ಸುಧೀರ್ ಓಜಾ ಆಗ್ರಹಿಸಿದ್ದಾರೆ.
ಪಾಟ್ನಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ‘ಪೂವರ್ ಲೇಡಿ’ (Poor lady) ಎಂದು ಕರೆದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಬಿಹಾರದ ಮುಜಾಫರ್‌ಪುರದಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಸುಧೀರ್ ಓಜಾ ಸಿಜಿಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಫೆ. 10ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಗೌರವಾನ್ವಿತ ರಾಷ್ಟ್ರಪತಿ ಅವರ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದರಿಂದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸುಧೀರ್ ಓಜಾ ಆಗ್ರಹಿಸಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದ್ದು ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಪಟ್ಟು ಹಿಡಿದಿದ್ದಾರೆ.
ದೂರು ದಾಖಲಿಸುವ ಮುನ್ನ ಮಾಧ್ಯಮದ ಜತೆ ಮಾತನಾಡಿದ ಓಜಾ, ʼʼಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರಾಪದಿ ಮುರ್ಮು ಅವರನ್ನು ಅವಮಾನಿಸಿದ್ದಾರೆ. ದೇಶದ ಅತ್ಯಂತ ಗೌರವಾನ್ವಿತ ಹುದ್ದೆಯಲ್ಲಿರುವವರಿಗೆ ಎಸಗಿದ ಅವಮಾನವಿದು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥರು. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಬೇಕುʼʼ ಎಂದು ತಿಳಿಸಿದ್ದಾರೆ.
"The poor lady, the President, was getting very tired at the end"
— Gaurav Bhatia गौरव भाटिया 🇮🇳 (@gauravbhatiabjp) January 31, 2025
Sonia Gandhi's insult of India's first tribal woman President, Her Excellency, Mrs. Draupadi Murmu ji, exposes the low level of gutter politics and character of the Congress.
The fake Ghandy family cannot… pic.twitter.com/C2iu4lwZdx
ಸೋನಿಯಾ ಗಾಂಧಿ ಹೇಳಿದ್ದೇನು?
ಜ. 31ರಂದು ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದರು. ಭಾಷಣದ ಬಳಿಕ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ʼʼಪೂವರ್ ಲೇಡಿ, ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟ ಆಗುತ್ತಿತ್ತುʼʼ ಎಂದು ಹೇಳಿದ್ದರು. ಜತೆಗೆ ಭಾಷಣ ಬೋರ್ ಆಗಿತ್ತು ಎಂದಿದ್ದರು. ಸೋನಿಯಾ ಜತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದರು.
ತೀವ್ರ ವಿರೋಧ
ಸೋನಿಯಾ ಗಾಂಧಿ ಅವರ ಹೇಳಿಕೆಗೆ ತೀವ್ರ ವಿರೋದ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕಿ ವಿರುದ್ಧ ಕಿಡಿ ಕಾರಿದ್ದರು. ಇದು ದುರದೃಷ್ಟಕರ ಮತ್ತು ಅವಮಾನಕರ ಹೇಳಿಕೆ ಎಂದು ರಾಷ್ಟ್ರಪತಿ ಭವನ ಕೂಡ ಹೇಳಿಕೆ ನೀಡಿತ್ತು. ರಾಷ್ಟ್ರಪತಿ ಅವರು ಯಾವುದೇ ಹಂತದಲ್ಲಿ ಸುಸ್ತಾಗಿರಲಿಲ್ಲ. ವಾಸ್ತವವಾಗಿ ಅವರು ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ರೈತರ ಬಗ್ಗೆ ಮಾತನಾಡುವಾಗ ಎಂದಿಗೂ ಸುಸ್ತಾಗುವುದಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿತ್ತು. ಜತೆಗೆ ಕಾಂಗ್ರೆಸ್ ನಾಯಕರು ಉನ್ನತ ಹುದ್ದೆಯ ಘನತೆಗೆ ಹಾನಿ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು.
ಈ ಸುದ್ದಿಯನ್ನೂ ಓದಿ: Sonia Gandhi: ರಾಷ್ಟ್ರಪತಿಗಳನ್ನು ಟೀಕಿಸುವ ಭರದಲ್ಲಿ ಸೋನಿಯಾ ಗಾಂಧಿ ಎಡವಟ್ಟು
ಕೇಂದ್ರ ಆರೋಗ್ಯ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ಅನ್ನು "ಬುಡಕಟ್ಟು ವಿರೋಧಿ" ಎಂದು ಕರೆದಿದ್ದರು. ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಕೂಡ ಕಿಡಿ ಕಾರಿದ್ದರು. ಜತೆಗೆ ಹಲವು ಬಿಜೆಪಿ ನಾಯಕರು ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದರು.