ನವದೆಹಲಿ, ಸೆ.10: ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಸೇವನೆಯಿಂದ ಮಕ್ಕಳ ಆರೋಗ್ಯದ (Children’s Health) ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಆಹಾರ ಪ್ಯಾಕೆಟ್‌ಗಳ ಮುಂಭಾಗದಲ್ಲಿ ಕಡ್ಡಾಯವಾಗಿ ಎಚ್ಚರಿಕೆ ಲೇಬಲ್‌ಗಳನ್ನು ಆಹಾರ ಸುರಕ್ಷತೆಯಲ್ಲಿ ತೊಡಗಿರುವ ಎಲ್ಲರೂ, ಉಪ್ಪು, ಸಕ್ಕರೆ ಮತ್ತು ಕೊಬ್ಬಿನಂಶ ಹೆಚ್ಚಿರುವ ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಅಳವಡಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಗಂಭೀರ ವಿಷಯದ ಕುರಿತು ವಿವರವಾದ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ. ಪ್ರಸ್ತುತ ಪ್ಯಾಕೆಟ್‌ಗಳ ಹಿಂಭಾಗದಲ್ಲಿ ಅತ್ಯಂತ ಸಣ್ಣದಾಗಿ ಮುದ್ರಿಸಲಾಗುವ ಪೌಷ್ಟಿಕಾಂಶದ ವಿವರಗಳು ಗ್ರಾಹಕರಿಗೆ ಸುಲಭವಾಗಿ ತಿಳಿಯುತ್ತಿಲ್ಲ. ಹೀಗಾಗಿ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶ ನಿಗದಿತ ಮಿತಿಗಿಂತ ಹೆಚ್ಚಿರುವ ಉತ್ಪನ್ನಗಳ ಮುಂಭಾಗದಲ್ಲೇ ಎಚ್ಚರಿಕೆ ನೀಡುವ ಮಾರ್ಗಸೂಚಿಗಳ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಿರುವ ಎಫ್‌ಎಸ್‌ಎಸ್‌ಎಐ, ಅತಿ ಹೆಚ್ಚು ಕೊಬ್ಬು, ಸಕ್ಕರೆ ಮತ್ತು ಉಪ್ಪಿನಾಂಶವಿರುವ ಆಹಾರ ಉತ್ಪನ್ನಗಳಿಗಾಗಿ ಕೆಂಪು ಬಣ್ಣದ ಷಡ್ಭುಜಾಕೃತಿಯ ಪ್ರಮುಖ ಎಚ್ಚರಿಕೆ ಲೇಬಲ್ ಅನ್ನು ಪ್ರಸ್ತಾಪಿಸಿರುವುದಾಗಿ ತಿಳಿಸಿದೆ. ಆರಂಭಿಕ ಹಂತದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಹಾನಿಕಾರಕ ಅಂಶಗಳಿರುವ ಉತ್ಪನ್ನಗಳಿಗೆ ಮತ್ತು ಸಿಹಿಗೊಳಿಸಿದ ಪಾನೀಯಗಳಿಗೆ ಇದು ಅನ್ವಯಿಸಲಿದ್ದು, ಹೆಚ್ಚಿನ ಕೊಬ್ಬು, ಹೆಚ್ಚಿನ ಸಕ್ಕರೆ ಅಥವಾ ಹೆಚ್ಚಿನ ಉಪ್ಪು ಹೊಂದಿರುವ ಉತ್ಪನ್ನಗಳಿಗೆ ಇದು ಒಳಗೊಂಡಿರಲಿದೆ.
ಇನ್ಮುಂದೆ ಜಂಕ್ ಫುಡ್ ಪ್ಯಾಕೆಟ್ ಮೇಲೆ ಲೇಬಲಿಂಗ್ ಕಡ್ಡಾಯ; ಆಹಾರ ನಿಯಂತ್ರಣ ಪ್ರಾಧಿಕಾರದಿಂದ ಹೊಸ ಮಾರ್ಗಸೂಚಿ
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಭಾರತದ ನಿಯಮಗಳನ್ನು ಮೇಲ್ದರ್ಜೆಗೆ ಏರಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವನ್ನು ಒಪ್ಪದ ಸುಪ್ರೀಂ ಕೋರ್ಟ್, ಬೆಳೆಯುತ್ತಿರುವ ಮಕ್ಕಳು ಜಂಕ್ ಫುಡ್‌ಗಳಿಗೆ ದಾಸರಾಗುತ್ತಿರುವುದನ್ನು ತಡೆಯಲು ಗ್ರಾಹಕರಿಗೆ ಈ ಮಾಹಿತಿ ಅಗತ್ಯವಾಗಿದೆ ಎಂದು ಹೇಳಿದೆ. ಎಚ್ಚರಿಕೆ ಲೇಬಲ್‌ಗಳ ಅನುಷ್ಠಾನದಲ್ಲಿನ ವಿಳಂಬಕ್ಕಾಗಿ ಎಫ್‌ಎಸ್‌ಎಸ್‌ಎಐ ಅನ್ನು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28 ಕ್ಕೆ ನಿಗದಿಪಡಿಸಿದೆ.
ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಾಂಶವು ನಿಗದಿತ ಮಿತಿಯನ್ನು ಮೀರಿದಾಗ ಅದನ್ನು ಪ್ಯಾಕೆಟ್‌ನ ಮುಂಭಾಗದಲ್ಲೇ ಪ್ರದರ್ಶಿಸಲು ಯಾವುದೇ ಮಾರ್ಗಸೂಚಿಯನ್ನು ರೂಪಿಸಲಾಗಿದೆಯೇ ಎಂದು ಪೀಠವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು (FSSAI) ಪ್ರಶ್ನಿಸಿತು.
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಒಳಗಿರುವ ಅಂಶಗಳ ವಿವರಗಳನ್ನು ಸಾಮಾನ್ಯವಾಗಿ ಪ್ಯಾಕೆಟ್‌ಗಳ ಹಿಂಭಾಗದಲ್ಲಿ ಮುದ್ರಿಸಲಾಗುತ್ತದೆ ಎಂಬುದನ್ನು ನ್ಯಾಯಾಲಯವು ಈ ವೇಳೆ ಹೇಳಿತು. ಅದನ್ನು ಮುಂಭಾಗದಲ್ಲಿ ಮುದ್ರಿಸುವಂತೆ ತಿಳಿಸಿತು.
ಹಿರಿಯ ವಕೀಲ ದೇವದತ್ ಕಾಮತ್ ಅವರು ಮಾತನಾಡಿ, ಸರ್ಕಾರವು ಕುರ್ಕುರೆ ಉತ್ಪನ್ನವನ್ನು ಮೊಟ್ಟೆ ಮತ್ತು ಉಪ್ಪು ಹಾಕಿದ ಗೋಡಂಬಿಯಂತಹ ಇತರ ಪೌಷ್ಟಿಕಾಂಶಯುಕ್ತ ಆಹಾರಗಳಂತೆಯೇ ಒಂದೇ ತಕ್ಕಡಿಯಲ್ಲಿ ಇಡುತ್ತಿದೆ ಎಂದು ಹೇಳಿದರು. ಅತ್ಯಂತ ಹೆಚ್ಚು ಸಂಸ್ಕರಿಸಿದ ಆಹಾರಗಳು ಕಡ್ಡಾಯವಾಗಿ ಹೆಚ್ಚು ಪ್ರಬಲವಾದ ಎಚ್ಚರಿಕೆಯ ಲೇಬಲ್ ಅನ್ನು ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದರು.