ದೆಹಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಇತರ ಹಿಂದುಳಿದ ವರ್ಗಗಳ (OBC) ಪಾಲಿನ ʼ2ನೇ ಅಂಬೇಡ್ಕರ್ʼ (2nd Ambedkar) ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ (BJP) ಕಿಡಿಕಾರಿದೆ. ಇದು ದಲಿತರು ಮತ್ತು ಸಂವಿಧಾನದ ಪಿತಾಮಹ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಕೇಸರಿ ಪಕ್ಷ ಹೇಳಿದೆ. ಆ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ಸಮರ್ಥಿಸಿದರೆ, ಬಿಜೆಪಿ ವ್ಯಂಗ್ಯವಾಡಿದೆ.
ಜು. 25ರಂದು ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ಗಣತಿ ತಪ್ಪಾಗಿತ್ತು. ಅದನ್ನು ಸರಿಪಡಿಸಲು ಕಾಂಗ್ರೆಸ್ ದೃಢ ನಿಶ್ಚಯ ಮಾಡಿದೆ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಉದಿತ್ ರಾಜ್ ಎಕ್ಸ್ ಮೂಲಕ ರಾಹುಲ್ ಗಾಂಧಿ ಅವರನ್ನು ಅಂಬೇಡ್ಕರ್ ಅವರಿಗೆ ಹೋಲಿಸಿದ್ದಾರೆ.
OBCs will have to think that history does not give opportunities for progress again and again. They should follow and support what Rahul Gandhi said in the Talkatora Stadium conference. If they do so, then Rahul Gandhi will prove to be the second Ambedkar for them.
— Dr. Udit Raj (@Dr_Uditraj) July 26, 2025
ಈ ಸುದ್ದಿಯನ್ನೂ ಓದಿ: Rahul Gandhi: ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಅವರು ಕೇವಲ ಪ್ರದರ್ಶನಕ್ಕಷ್ಟೇ; ರಾಹುಲ್ ಗಾಂಧಿ ವಾಗ್ದಾಳಿ
ಕಾಂಗ್ರೆಸ್ ನಾಯಕ ಹೇಳಿದ್ದೇನು?
ಎಕ್ಸ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ʼʼಇತಿಹಾಸವು ಪದೇ ಪದೆ ಅಭಿವೃದ್ಧಿ ಹೊಂದಲು ಅವಕಾಶ ನೀಡುವುದಿಲ್ಲ ಎನ್ನುವ ಬಗ್ಗೆ ಒಬಿಸಿಗಳು ಚಿಂತಿಸಬೇಕಾಗುತ್ತದೆ. ಟಾಲ್ಕಟೋರಾ ಕ್ರೀಡಾಂಗಣದ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನು ಒಬಿಸಿಗಳು ಅನುಸರಿಸಬೇಕು ಮತ್ತು ಬೆಂಬಲಿಸಬೇಕು. ಅದು ಆದಲ್ಲಿ ಒಬಿಸಿಗಳಿಗೆ ರಾಹುಲ್ ಗಾಂಧಿ 2ನೇ ಅಂಬೇಡ್ಕರ್ ಎಂಬುದಾಗಿ ಸಾಬೀತುಪಡಿಸಿದಂತಾಗುತ್ತದೆʼʼ ಎಂದು ಹೇಳಿದ್ದಾರೆ.
ಬಿಜೆಪಿ ಟೀಕೆ
ಇದೀಗ ಉದಿತ್ ರಾಜ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಉದಿತ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ʼʼದಲಿತರು ಮತ್ತು ಅಂಬೇಡ್ಕರ್ ಅವರನ್ನು ಅವಮಾನಿಸುವುದೇ ಕಾಂಗ್ರೆಸ್ ಗುರುತು. ಮೂಲ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಯಾರು? ಅವರಿಗೆ ಭಾರತ ರತ್ನವನ್ನು ಯಾರು ನೀಡಲಿಲ್ಲ? ಜಮ್ಮು ಮತ್ತು ಕಾಶ್ಮೀರದಲ್ಲಿ ಅವರ ಸಂವಿಧಾನವನ್ನು ಜಾರಿಗೆ ತರಲು ಯಾರು ಬಿಡಲಿಲ್ಲ? ಮುಸ್ಲಿಂ ಮೀಸಲಾತಿ ಬಗ್ಗೆ ಯಾರು ಮಾತನಾಡಿದರು? ಮೀಸಲಾತಿ ಕೆಟ್ಟದು ಎಂದು ಯಾರು ಹೇಳಿದರು... ಜವಾಹರಲಾಲ್ ನೆಹರು" ಎಂದು ಅವರು ಹೇಳಿದ್ದಾರೆ.
ಮುಂದುವರಿದು, "ಈಗ ಅವರು ನೆಹರೂ ಅಥವಾ ಇಂದಿರಾ ಗಾಂಧಿ ಅಲ್ಲ, ಬದಲಾಗಿ 2ನೇ ಅಂಬೇಡ್ಕರ್ ಆಗಲು ಬಯಸುತ್ತಿದ್ದಾರೆಯೇ? ಇದರರ್ಥ ಗಾಂಧಿ ಕುಟುಂಬವು ನೆಹರೂ ಮತ್ತು ಇಂದಿರಾ ಗಾಂಧಿ ತಪ್ಪು ಹಾದಿಯಲ್ಲಿದ್ದರು ಎಂಬುದನ್ನು ಒಪ್ಪಿಕೊಳ್ಳುತ್ತಿದೆ ಎಂದಾಯ್ತು. ಕಾಂಗ್ರೆಸ್ ಒಂದೇ ಕುಟುಂಬವನ್ನು ಪೂಜಿಸುವುದರಲ್ಲಿ ಮಾತ್ರ ನಂಬಿಕೆ ಇಡುತ್ತದೆ" ಎಂದು ಅವರು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಶುಕ್ರವಾರ ಮಾತನಾಡಿದ್ದ ರಾಹುಲ್ ಗಾಂಧಿ, "ನಾನು ನನ್ನ ಕೆಲಸದ ಬಗ್ಗೆ ಯೋಚಿಸುತ್ತೇನೆ. ನಾನು ಎಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ ಮತ್ತು ಎಲ್ಲಿ ವಿಫಲನಾಗಿದ್ದೇನೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಭೂಸ್ವಾಧೀನ ಮಸೂದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಆಹಾರ ಹಕ್ಕು, ಬುಡಕಟ್ಟು ಮಸೂದೆ ವಿಚಾರದಲ್ಲಿ ನಮ್ಮ ಹೋರಾಟ ಸರಿಯಾದ ಹಾದಿಯಲ್ಲಿದೆ. ಬುಡಕಟ್ಟು ಜನಾಂಗದವರು, ದಲಿತರು ಮತ್ತು ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು ಉತ್ತಮ ಕೆಲಸ ಮಾಡಬೇಕಿದೆ" ಎಂದು ಅವರು ತಿಳಿಸಿದ್ದರು.
"ಕಾಂಗ್ರೆಸ್ ಮತ್ತು ನನ್ನ ಕೆಲಸದಲ್ಲಿ ಒಂದು ನ್ಯೂನತೆ ಉಳಿದಿದೆ. ನಾನು ಒಬಿಸಿ ಸಮುದಾಯವನ್ನು ಸರಿಯಾದ ರೀತಿಯಲ್ಲಿ ರಕ್ಷಿಸಲಿಲ್ಲ. ಆ ಸಮಯದಲ್ಲಿ ನನಗೆ ಒಬಿಸಿ ಸಮಸ್ಯೆಗಳು ಆಳವಾಗಿ ಅರ್ಥವಾಗಲಿಲ್ಲ. 10-15 ವರ್ಷಗಳಿಂದ ದಲಿತರು ಎದುರಿಸುತ್ತಿರುವ ತೊಂದರೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಸಮಸ್ಯೆಗಳು ಗೋಚರಿಸುತ್ತವೆ, ಅವುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ಒಬಿಸಿಗಳ ಸಮಸ್ಯೆಗಳು ಮರೆಯಾಗಿವೆ. ಆ ಸಮಯದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದ್ದರೆ, ನಾನು ಆಗಲೇ ಜಾತಿ ಆಧಾರಿತ ಜನಗಣತಿಯನ್ನು ನಡೆಸುತ್ತಿದ್ದೆ. ಅದು ನನ್ನ ತಪ್ಪು, ಅದನ್ನು ನಾನು ಸರಿಪಡಿಸುತ್ತೇನೆ" ಎಂದು ತಪ್ಪೊಪ್ಪಿಕೊಂಡಿದ್ದರು.