Rahul Gandhi: ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಅವರು ಕೇವಲ ಪ್ರದರ್ಶನಕ್ಕಷ್ಟೇ; ರಾಹುಲ್ ಗಾಂಧಿ ವಾಗ್ದಾಳಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಪ್ರದರ್ಶನ ಎಂದು ಅವರು ಹೇಳಿದ್ದಾರೆ.


ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಪ್ರದರ್ಶನ ಎಂದು ಅವರು ಹೇಳಿದ್ದಾರೆ. ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಅವರು ಕೇವಲ ಒಂದು ದೊಡ್ಡ ಪ್ರದರ್ಶನ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ" ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರನ್ನು ಎರಡು ಮೂರು ಬಾರಿ ಭೇಟಿಯಾಗಿ "ಅವರೊಂದಿಗೆ ಒಂದೇ ಕೋಣೆಯಲ್ಲಿ ಕುಳಿತು ಅವರನ್ನು ಗಮನಿಸಿದ್ದೇನೆ ಹೀಗಾಗಿ ತನಗೆ ಈ ಕುರಿತು ಸಂಪೂರ್ಣವಾಗಿ ತಿಳಿದಿದೆ ಎಂದು ರಾಹುಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಯಾವುದೇ ಗಾಳಿ ಸುದ್ದಿ ಇಲ್ಲ. ಮಾಧ್ಯಮಗಳು ಅವರನ್ನು ಮಿತಿ ಮೀರಿ ತೋರಿಸುತ್ತವೆ. "ದಲಿತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ಒಟ್ಟಾಗಿ ದೇಶದ ಜನಸಂಖ್ಯೆಯ ಸುಮಾರು 90% ರಷ್ಟಿದ್ದಾರೆ. ಆದರೆ ಬಜೆಟ್ ಸಿದ್ಧಪಡಿಸಿದ ನಂತರ ಹಲ್ವಾ ವಿತರಿಸುವಾಗ, ಈ 90% ಜನರನ್ನು ಪ್ರತಿನಿಧಿಸುವ ಯಾರೂ ಇರಲಿಲ್ಲ. ಈ 90% ಜನಸಂಖ್ಯೆಯೇ ದೇಶದ ಉತ್ಪಾದಕ ಶಕ್ತಿಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಪಡೆದ ದತ್ತಾಂಶವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಜನರು "ತೆಲಂಗಾಣದಲ್ಲಿ ಬಹು ಲಕ್ಷ ಮತ್ತು ಬಹು ಕೋಟಿ ವೇತನ ಪ್ಯಾಕೇಜ್‌ಗಳನ್ನು ಪಡೆಯುತ್ತಿಲ್ಲ" ಏಕೆಂದರೆ ಅವರು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅವುಗಳ ನಿರ್ವಹಣೆಯ ಭಾಗವಾಗಿಲ್ಲ. ಮತ್ತೊಂದೆಡೆ, ನಾವು MGNREGA ಕಾರ್ಮಿಕರು ಅಥವಾ ಗಿಗ್ ಕಾರ್ಮಿಕರ ಪಟ್ಟಿಗಳನ್ನು ನೋಡಿದರೆ, ಅವರು ಸಂಪೂರ್ಣವಾಗಿ SC, ST ಮತ್ತು OBC ಸಮುದಾಯಗಳಿಂದ ಕೂಡಿದ್ದಾರೆ. ಈ ಸರ್ಕಾರ ಬಡವರು ಮತ್ತು ದಲಿತರ ಪರವಾಗಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ: National Herald Case: ನ್ಯಾಶನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್
2004 ರಲ್ಲಿ ಯುಪಿಎ -1 ಆಡಳಿತದ ಅವಧಿಯಲ್ಲಿ ರಾಜಕೀಯಕ್ಕೆ ಸೇರಿದಾಗಿನಿಂದ ನಾನು ಒಬಿಸಿಯವರನ್ನು ಮೇಲೆತ್ತಲು ಪ್ರಯತ್ನಿಸಿದೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನಿಮ್ಮ (ಒಬಿಸಿ) ಇತಿಹಾಸದ ಬಗ್ಗೆ, ನಿಮ್ಮ ಸಮಸ್ಯೆಗಳ ಬಗ್ಗೆ, ಇನ್ನೂ ಸ್ವಲ್ಪ ಹೆಚ್ಚು ತಿಳಿದಿದ್ದರೆ, ಆ ಸಮಯದಲ್ಲಿ ನಾನು ಜಾತಿ ಜನಗಣತಿಯನ್ನು ನಡೆಸುತ್ತಿದ್ದೆ. ಅದಕ್ಕೆ ಈಗಲೂ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.