ಜೈಪುರ: ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ರಾಜ್) ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಬಿಜೆಪಿಗೆ ತೀವ್ರ ( Rajasthan Panchayat elections) ಮುಖಭಂಗವಾಗಿದೆ. ನವೆಂಬರ್ 20ರಂದು ಪ್ರಕಟವಾದ ಫಲಿತಾಂಶಗಳಲ್ಲಿ ರಾಜ್ಯದ 37 ಜಿಲ್ಲೆಗಳ ಪೈಕಿ ಬಹುತೇಕ ಕಡೆಗಳಲ್ಲಿ 'ಕೈ' ಪಾಳಯ ಮೇಲುಗೈ ಸಾಧಿಸುವ ಮೂಲಕ, ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗ್ರಾಮೀಣ ಮತದಾರರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ (SEC) ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ, 37 ಜಿಲ್ಲೆಗಳ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಬಹುದೊಡ್ಡ ಅಂತರದಲ್ಲಿ ಮುಂದಿದೆ. ಒಟ್ಟು 7,543 ಸ್ಥಾನಗಳ ಪೈಕಿ ಘೋಷಣೆಯಾದ 7,393 ಸ್ಥಾನಗಳಲ್ಲಿ ಕಾಂಗ್ರೆಸ್ 3,701 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 2,181 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 37 ಜಿಲ್ಲೆಗಳ ಪೈಕಿ 33 ಜಿಲ್ಲೆಗಳ ಪಂಚಾಯತ್ ಸಮಿತಿಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಬಿಜೆಪಿ ಕೇವಲ ನಾಲ್ಕು ಜಿಲ್ಲೆಗಳಲ್ಲಿ (ಅಜ್ಮೀರ್, ಬಲೋತ್ರಾ, ಸಲಂಬರ್ ಮತ್ತು ಉದಯಪುರ) ಮಾತ್ರ ಮುನ್ನಡೆ ಸಾಧಿಸಲು ಶಕ್ತವಾಗಿದೆ.
ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಒಟ್ಟು 1,275 ಸ್ಥಾನಗಳ ಪೈಕಿ ಪ್ರಕಟವಾದ 981 ಫಲಿತಾಂಶಗಳಲ್ಲಿ ಕಾಂಗ್ರೆಸ್ 599 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ 301 ಸ್ಥಾನಗಳನ್ನು ಪಡೆದಿದೆ. ಒಟ್ಟು 37 ಜಿಲ್ಲಾ ಪರಿಷತ್‌ಗಳ ಪೈಕಿ 27 ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ ಕೇವಲ 6 ಜಿಲ್ಲೆಗಳಲ್ಲಿ ಬಹುಮತ ಗಳಿಸಿದೆ. ನಾಗೌರ್ ಸಂಸದ ಹನುಮಾನ್ ಬೇನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) ಪಂಚಾಯತ್ ಸಮಿತಿಯ 496 ಮತ್ತು ಜಿಲ್ಲಾ ಪರಿಷತ್‌ನ 37 ಸ್ಥಾನಗಳನ್ನು ಗೆದ್ದುಕೊಂಡಿದ್ದು, ನಾಗೌರ್ ಜಿಲ್ಲಾ ಪರಿಷತ್‌ನಲ್ಲಿ ಬಹುಮತ ಪಡೆದಿದೆ. ಭಾರತ್ ಆದಿವಾಸಿ ಪಕ್ಷ (BAP) ಪಂಚಾಯತ್ ಸಮಿತಿಯಲ್ಲಿ 276 ಹಾಗೂ ಜಿಲ್ಲಾ ಪರಿಷತ್‌ನಲ್ಲಿ 22 ಸ್ಥಾನಗಳನ್ನು ಗಳಿಸಿದೆ. ಉಳಿದಂತೆ ಬಿಎಸ್‌ಪಿ 60, ಸಿಪಿಐ(ಎಂ) 50 ಹಾಗೂ ಪಕ್ಷೇತರರು 627 ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಘಟಾನುಘಟಿಗಳ ಕ್ಷೇತ್ರದಲ್ಲೇ ಬಿಜೆಪಿಗೆ ಆಘಾತ
ರಾಜಧಾನಿ ಜೈಪುರದಲ್ಲಿ ಬಿಜೆಪಿಗೆ ಅತ್ಯಂತ ದೊಡ್ಡ ಹಿನ್ನಡೆಯಾಗಿದೆ. ಜೈಪುರ ಜಿಲ್ಲಾ ಪರಿಷತ್‌ನ 57 ಸ್ಥಾನಗಳಲ್ಲಿ ಕಾಂಗ್ರೆಸ್ 41 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 12 ಸ್ಥಾನಗಳಿಗೆ ಸೀಮಿತವಾಗಿದೆ. ಅಲ್ಲದೆ, ಜೈಪುರದ 22 ಪಂಚಾಯತ್ ಸಮಿತಿಗಳ ಪೈಕಿ ಕಾಂಗ್ರೆಸ್ 14ರಲ್ಲಿ ಬಹುಮತ ಪಡೆದಿದ್ದು, ಬಿಜೆಪಿ ಕೇವಲ ಎರಡರಲ್ಲಿ (ಚೋಮು ಮತ್ತು ಸಾಂಭಾರ್) ಮಾತ್ರ ಗೆಲುವು ಸಾಧಿಸಿದೆ.
ಅಚ್ಚರಿಯ ಸಂಗತಿಯೆಂದರೆ, ಸ್ವತಃ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಪ್ರತಿನಿಧಿಸುವ ಸಾಂಗಾನೇರ್ ವಿಧಾನಸಭಾ ಕ್ಷೇತ್ರದ ಪಂಚಾಯತ್ ಸಮಿತಿಯಲ್ಲಿ ಆರ್‌ಎಲ್‌ಪಿ (RLP) 15 ವಾರ್ಡ್‌ಗಳ ಪೈಕಿ 8 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದ್ದು, ಬಿಜೆಪಿ ಕೇವಲ 3 ಸ್ಥಾನಗಳೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇತ್ತ ಸಿಕರ್‌ನಲ್ಲಿ ನಗರಾಭಿವೃದ್ಧಿ ಸಚಿವ ಝಾಬರ್ ಸಿಂಗ್ ಖರ್ರಾ ಅವರ ಪತ್ನಿ ಮತ್ತು ಇಬ್ಬರು ಪುತ್ರರು ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.