ದೆಹಲಿ, ಡಿ. 14: ರಾಷ್ಟ್ರ ರಾಜಧಾನಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮತ ಚೋರಿ ಪ್ರತಿಭಟನೆಯಲ್ಲಿ (Congress Vote Chori Rally) ನಾಯಕರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದರು. ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮಾತನಾಡಿ, ʼʼಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನವನ್ನು ಹುಟ್ಟು ಹಾಕುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಹೇಗೆ ಪಿತೂರಿ ಮಾಡಿದ್ದಾರೆಂದು ಉತ್ತರಿಸಬೇಕು. ಇವರನ್ನು ಉಳಿಸಲು ಬಿಜೆಪಿಗೂ ಸಾಧ್ಯವಾಗುವುದಿಲ್ಲʼʼ ಎಂದರು.
ʼʼದೇಶದ ಸಂಸ್ಥೆಗಳು ಪುಡಿಪುಡಿಯಾದಾಗ ಭಾರತೀಯರು ಎದ್ದು ನಿಲ್ಲಬೇಕು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದರೆ ಬಿಜೆಪಿ ಎಂದಿಗೂ ಗೆಲ್ಲುವುದಿಲ್ಲ ಎಂದು ಅವರಿಗೇ ತಿಳಿದಿದೆ" ಎಂದರು. "ಬಿಹಾರವನ್ನು ಕಳೆದುಕೊಂಡಿದ್ದಕ್ಕೆ ನೀವು ಎದೆಗುಂದಬಾರದು. ಬಿಜೆಪಿ 'ವೋಟ್ ಚೋರಿ' ಮೂಲಕ ಗೆಲ್ಲುತ್ತದೆ ಎಂದು ಇಡೀ ದೇಶಕ್ಕೆ ತಿಳಿದಿದೆ" ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಭಾಷಣ ಇಲ್ಲಿದೆ:
ʼʼಮಾದರಿ ನೀತಿ ಸಂಹಿತೆಯ ಸಮಯದಲ್ಲಿ ಬಿಹಾರದಲ್ಲಿ ಪ್ರತಿ ಮಹಿಳೆಗೆ 10,000 ರೂ. ಪಾವತಿಸುವಾಗ ಚುನಾವಣಾ ಆಯೋಗ ಕಣ್ಣು ಮುಚ್ಚಿತ್ತು. ಇದು ವೋಟ್ ಚೋರಿ ಅಲ್ಲದಿದ್ದರೆ ಮತ್ತಿನ್ನೇನು? ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತಿಲ್ಲ ಮತ್ತು ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನವನ್ನು ಹುಟ್ಟುಹಾಕುತ್ತದೆ. ದೇಶದ ಎಲ್ಲ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತಾಳಕ್ಕೆ ತಕ್ಕ ಕುಣಿಸುತ್ತಿದೆʼʼ ಎಂದು ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದರು.
ಪ್ರಿಯಾಂಕಾ ಗಾಂಧಿ ವಾಗ್ದಾಳಿ:
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಯನ್ನು ಟೀಕಿಸಿದರು. ಖರ್ಗೆ ಬಿಜೆಪಿ ನಾಯಕರನ್ನು ಗದ್ದಾರ್‌ಗಳು (ದೇಶದ್ರೋಹಿಗಳು) ಮತ್ತು ಡ್ರಮೆಬಾಜ್ (ನಾಟಕ ಕಲಾವಿದರು) ಎಂದು ಆರೋಪಿಸಿದರು. ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು ಎಂದು ಕರೆ ನೀಡಿದರು. ʼʼಕಾಂಗ್ರೆಸ್‌ನ ಹೋರಾಟವು ಕೇವಲ ರಾಜಕೀಯವಲ್ಲ, ಸೈದ್ಧಾಂತಿಕ ನಿಲುವು. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ನಮ್ಮ ನಿಲುವು ಬದಲಾಗುವುದಿಲ್ಲ. ಅವರು ಮತ ಚೋರಿಯಲ್ಲಿ ತೊಡಗಿದ್ದಾರೆʼʼ ಎಂದು ಅವರು ಆರೋಪಿಸಿದರು.
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್
ʼʼವೈಯಕ್ತಿಕ ವಿಷಯಗಳಿಗಿಂತ ರಾಷ್ಟ್ರೀಯ ಜವಾಬ್ದಾರಿಯನ್ನು ನಾನು ಹೊಂದಿದ್ದೇನೆʼʼ ಎಂದು ಅವರು ಹೇಳಿದರು. "140 ಕೋಟಿ ಜನರನ್ನು ಉಳಿಸಬೇಕಾಗಿರುವುದರಿಂದ ಇಲ್ಲಿಗೆ ಬಂದಿದ್ದೇನೆ. ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ದಾಳಿಗಳ ವಿರುದ್ಧ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸುತ್ತದೆ. ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಜನರು ಒಗ್ಗಟ್ಟಿನಿಂದ ನಿಲ್ಲಬೇಕುʼʼ ಎಂದು ಅಗ್ರಹಿಸಿದರು.
ರಾಹುಲ್ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಮಾತನಾಡಿ, "ಯಾರಿಗೆ ಅಧಿಕಾರವಿದೆಯೋ ಅವರನ್ನು ಗೌರವಿಸಲಾಗುತ್ತದೆ ಎನ್ನುವುದು ಮೋಹನ್ ಭಾಗವತ್ ಅವರ ಚಿಂತನೆ. ಈ ಸಿದ್ಧಾಂತ ಆರ್‌ಎಸ್‌ಎಸ್‌ಗೆ ಸೇರಿದೆ. ನಮ್ಮ ಸಿದ್ಧಾಂತ ಭಾರತದ ಸಿದ್ಧಾಂತ, ಹಿಂದೂ ಧರ್ಮದ ಸಿದ್ಧಾಂತ. ಜಗತ್ತಿನ ಪ್ರತಿಯೊಂದು ಧರ್ಮದ ಸಿದ್ಧಾಂತವು ಸತ್ಯವು ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳುತ್ತದೆ. ಸತ್ಯ ಅರ್ಥಹೀನ, ಅಧಿಕಾರ ಮುಖ್ಯ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಈ ಹಂತದಿಂದಲೇ ನಾನು ನಿಮಗೆ ಖಾತರಿ ನೀಡುತ್ತೇನೆ. ಸತ್ಯವನ್ನು ಎತ್ತಿಹಿಡಿಯುವ ಮೂಲಕ ನಾವು ನರೇಂದ್ರ ಮೋದಿ ಮತ್ತು ಅಮಿತ್ ಶಾ, ಆರ್‌ಎಸ್‌ಎಸ್ ಸರ್ಕಾರವನ್ನು ಭಾರತದಿಂದ ತೆಗೆದುಹಾಕುತ್ತೇವೆʼʼ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಸಚಿನ್ ಪೈಲಟ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.