ನವದೆಹಲಿ, ಅ.9: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ನಡೆದ ಇಂಡಿಯಾ ಬ್ಲಾಕ್ ಪ್ರತಿಭಟನಾ ರ್ಯಾಲಿಯಲ್ಲಿ ಇಬ್ಬರು ಮಹಿಳಾ ಕಾಂಗ್ರೆಸ್ ನಾಯಕಿಯರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ. ಮತ ಕಳ್ಳತನ ಆರೋಪದ ಮೇಲೆ ಕಾಂಗ್ರೆಸ್, ದೆಹಲಿ-ಎನ್‌ಸಿಆರ್‌ನಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು (Congress Protest), ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಫರಿದಾಬಾದ್‌ನಲ್ಲಿ ವಿರೋಧ ಪಕ್ಷದ ಮೈತ್ರಿಕೂಟ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದಾಗ, ಇಬ್ಬರು ಮಹಿಳಾ ಕಾಂಗ್ರೆಸ್ ನಾಯಕಿಯರಾದ ಪರಾಗ್ ಶರ್ಮಾ ಮತ್ತು ಗಜ್ನಾ ಲಂಬಾ ಪರಸ್ಪರ ಜಗಳವಾಡಿದರು.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ಬಲ್ಲಭಗಢ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಶರ್ಮಾ ಅವರು ಕಾಂಗ್ರೆಸ್ ಬ್ಯಾನರ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಲಂಬಾ ಅವರ ಪಕ್ಕದಲ್ಲೇ ನಡೆಯುತ್ತಿದ್ದರು. ಲಂಬಾ ಅವರು ಶರ್ಮಾ ಅವರನ್ನು ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ನಂತರ ಶರ್ಮಾ ಲಂಬಾಗೆ ಕಪಾಳಮೋಕ್ಷ ಮಾಡಿದರು. ಲಂಬಾ ಅವರ ಬೆನ್ನಿಗೆ ಹೊಡೆದರು.
ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದಾಗ, ಪಕ್ಷದ ಜಿಲ್ಲಾಧ್ಯಕ್ಷ ಬಲ್ಜಿತ್ ಕೌಶಿಕ್ ಸೇರಿದಂತೆ ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ಪರಿಸ್ಥಿತಿಯನ್ನು ಶಾಂತಗೊಳಿಸಲು ಧಾವಿಸಿದರು. ನಂತರ ಇಬ್ಬರೂ ಮಹಿಳಾ ಮುಖಂಡರು ಪರಸ್ಪರ ಪೊಲೀಸ್ ದೂರುಗಳನ್ನು ದಾಖಲಿಸಿದರು.
ಇಲ್ಲಿದೆ ವಿಡಿಯೊ:
ಘಟನೆಯನ್ನು ದೃಢಪಡಿಸಿದ ಸ್ಟೇಷನ್ ಹೌಸ್ ಆಫೀಸರ್ ವಿಷ್ಣು ಮಿತ್ತರ್, ಫೋಟೋ ತೆಗೆಯುವ ವಿಚಾರದಲ್ಲಿ ಇಬ್ಬರು ನಾಯಕರ ನಡುವೆ ವಿವಾದ ಭುಗಿಲೆದ್ದಿತು ಎಂದು ಹೇಳಿದರು. “ಇಬ್ಬರು ಮಹಿಳಾ ರಾಜಕಾರಣಿಗಳಿಂದ ಪ್ರತ್ಯೇಕ ದೂರುಗಳು ಬಂದಿವೆ. ಒಬ್ಬರು ಗಜ್ನಾ ಲಂಬಾ ಮತ್ತು ಇನ್ನೊಬ್ಬರು ಪರಾಗ್ ಶರ್ಮಾ. ರ‍್ಯಾಲಿಯಲ್ಲಿ ಫೋಟೋ ತೆಗೆಯುವ ಬಗ್ಗೆ ಅವರ ನಡುವೆ ವಿವಾದ ಭುಗಿಲೆದ್ದಿತು. ನಂತರ ಇದು ಮೌಖಿಕ ನಿಂದನೆ ಮತ್ತು ದೈಹಿಕ ಹಲ್ಲೆಗೆ ಕಾರಣವಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಹರಿಯಾಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪರ್ಲ್ ಚೌಧರಿ ಮತ್ತು ಕೌಶಿಕ್ ಅವರ ನೇತೃತ್ವದಲ್ಲಿ ಓಲ್ಡ್ ಫರಿದಾಬಾದ್‌ನ ಚಂಡಿ ವಾಲಿ ಧರ್ಮಶಾಲಾದಿಂದ ಪಠ್ವಾರಿ ಮಂದಿರದವರೆಗೆ ಪಾದಯಾತ್ರೆ ಆಯೋಜಿಸಲಾಗಿತ್ತು. ಜನಸಂದಣಿಯಲ್ಲಿ ಒಟ್ಟಿಗೆ ನಡೆಯುವಾಗ ಆಕಸ್ಮಿಕವಾಗಿ ದೈಹಿಕ ಸ್ಪರ್ಶವಾಗುವುದು ಸಹಜ ಎಂದು ಕೌಶಿಕ್ ಹೇಳಿದ್ದಾರೆ. ಈ ವಿಚಾರವನ್ನು ಬಗೆಹರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಶರ್ಮಾ ಅವರೊಂದಿಗೆ ನಡೆದ ಗಲಾಟೆ ದೈಹಿಕ ಹಲ್ಲೆಯ ಹಂತಕ್ಕೆ ಹೇಗೆ ತಲುಪಿತು ಎಂಬುದೇ ತನಗೆ ತಿಳಿದಿಲ್ಲ ಎಂದು ಲಂಬಾ ಹೇಳಿದ್ದಾರೆ. ಈ ಘಟನೆ ಏಕೆ ನಡೆಯಿತು ಮತ್ತು ಪರಾಗ್ ಶರ್ಮಾ ಯಾರು ಎಂಬುದೂ ತನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಅಲ್ಲದೆ, ಈ ಘಟನೆ ಆಕಸ್ಮಿಕವಾಗಿ ನಡೆದದ್ದಲ್ಲ, ಇದರ ಹಿಂದೆ ಯಾರದ್ದೋ ಪಿತೂರಿ ಇದೆ ಎಂದು ಅವರು ಆರೋಪಿಸಿದ್ದಾರೆ.