ಕೇರಳ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ (Heavy rain) ಉಂಟಾಗಿರುವ ಭೂಕುಸಿತ (Landslides), ಪ್ರವಾಹದಿಂದಾಗಿ (flood) ಕೇರಳದಲ್ಲಿ 15 ಮಂದಿ ಸಾವನ್ನಪ್ಪಿದ್ದು, 8 ಮಂದಿ ನಾಪತ್ತೆಯಾಗಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 27 ಮನೆಗಳು ನಾಶವಾಗಿದ್ದು, 196 ಮನೆಗಳಿಗೆ ಭಾಗಶಃ ಹಾನಿಯಾಗಿವೆ. 5,792 ಜನರನ್ನು ರಾಜ್ಯಾದ್ಯಂತ 209 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಭಾರತ ಹವಾಮಾನ ಇಲಾಖೆ ಸೂಚನೆಯಂತೆ ರಾಜ್ಯದ 12 ಜಿಲ್ಲೆಗಳಿಗೆ ಅರೇಂಜ್ ಅಲರ್ಟ್ ಮತ್ತು ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರು ಭಾನುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು, ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ:
ರಾಜ್ಯಾದ್ಯಂತ ಶನಿವಾರ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಭೂಕುಸಿತ, ಪ್ರವಾಹದಿಂದ ವ್ಯಾಪಕ ಹಾನಿಯಾಗಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಕಾಣೆಯಾಗಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ಮತ್ತು ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡ ಜನರಿಗೆ ಸರ್ಕಾರದಿಂದ ಸಂಪೂರ್ಣ ಸಹಾಯ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಅಸ್ಸಾಂ ಪ್ರವಾಹಕ್ಕೆ ಸಿಲುಕಿದ 2,000 ಸಂತ್ರಸ್ತರನ್ನು ರಕ್ಷಿಸಿದ ಯುವಕನ ಸಾಹಸಗಾಥೆ ಇಲ್ಲಿದೆ
ಮಳೆ ಶನಿವಾರದಿಂದ ಕೊಂಚ ಕಡಿಮೆಯಾಗಿದ್ದರೂ , ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು. ಜನಪ್ರತಿನಿಧಿಗಳು ಮತ್ತು ಸ್ವಯಂಸೇವಕರು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಗತ್ಯ ಸೇವೆಗಳಿಗೆ ಇವರನ್ನು ಸಂಪರ್ಕಿಸಬಹುದು ಎಂದರು.
ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾದ ಸಚಿವರು ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಕಂದಾಯ ಸಚಿವ ಎ.ಪಿ. ಅನಿಲ್‌ಕುಮಾರ್ ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವಾಹ ಪೀಡಿತ ಮತ್ತು ಜಲಾವೃತ ಪ್ರದೇಶಗಳಲ್ಲಿ ಶುಚಿಗೊಳಿಸುವ ಕಾರ್ಯಗಳು ಪ್ರಾರಂಭವಾಗಿವೆ. ಇದಕ್ಕಾಗಿ ಸ್ವಯಂ ಸೇವಕರೊಂದಿಗೆ ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಎಚ್ಚರಿಕೆ
ಭಾರತ ಹವಾಮಾನ ಇಲಾಖೆಯು ಕೇರಳದ 12 ಜಿಲ್ಲೆಗಳಿಗೆ ಅರೇಂಜ್ ಅಲರ್ಟ್ ಮತ್ತು ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಆಗಸ್ಟ್ 3 ಮತ್ತು 6 ರಂದು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಇದರೊಂದಿಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಆಗಸ್ಟ್ 2 ಮತ್ತು 3 ರಂದು ಕೇರಳ- ಕರ್ನಾಟಕ- ಲಕ್ಷದ್ವೀಪ ಕರಾವಳಿಗೆ ಮೀನುಗಾರರು ಹೋಗದಂತೆ ಸೂಚಿಸಿದೆ.
ಕೇರಳದ ಪರಿಸ್ಥಿತಿ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜ್ಯ ಕಂದಾಯ ಸಚಿವ ಎ.ಪಿ. ಅನಿಲ್‌ಕುಮಾರ್, ಕೇರಳದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧಗೊಂಡಿದ್ದು, ಹಾನಿಗೊಳಗಾದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಹಲವಾರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ಸಚಿವ ಪಿ.ಸಿ. ವಿಷ್ಣುನಾಥ್ ಅವರು ಪತ್ತಂತಿಟ್ಟ ಮತ್ತು ಅರನ್ಮುಲದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡವನ್ನು ನಿಯೋಜಿಸಲಾಗಿದೆ. ತಿರುವನಂತಪುರಂ, ಪಾಲಕ್ಕಾಡ್ ಮತ್ತು ಎರ್ನಾಕುಲಂನಿಂದ ಹೆಚ್ಚುವರಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಯನ್ನು ಕರೆಸಲಾಗಿದೆ. ಪ್ರವಾಹ ಪ್ರದೇಶವಾದ ಅರನ್ಮುಲದಲ್ಲಿ ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳನ್ನು ಸಹ ಸಿದ್ಧವಾಗಿಡಲಾಗಿದೆ ಎಂದರು.
ರನ್ನಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಹಿರಿಯ ಸಿಪಿಐ(ಎಂ) ನಾಯಕ ಕೆ.ಎನ್. ಬಾಲಗೋಪಾಲ್ ಅವರು ಪ್ರವಾಹದಿಂದಾಗಿ ವ್ಯಾಪಾರಿಗಳು ಭಾರಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಅಣೆಕಟ್ಟುಗಳನ್ನು ತೆರೆಯುವ ಬಗ್ಗೆ ತಮಗೆ ಪೂರ್ವ ಸೂಚನೆ ನೀಡಲಾಗಿಲ್ಲ ಎಂದು ಅನೇಕ ಅಂಗಡಿ ಮಾಲೀಕರು ದೂರು ನೀಡಿದ್ದಾರೆ. ಇದು ಇಲ್ಲಿ ಪ್ರವಾಹ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ ಎಂದರು.
ಶಬರಿಮಲೆ ಪ್ರದೇಶದಲ್ಲಿ ಅಪಾಯ ಸೂಚನೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮೂರು ಹವಾಮಾನ ಕೇಂದ್ರಗಳು 100 ಮಿ.ಮೀ ಗಿಂತ ಹೆಚ್ಚು ಮಳೆಯನ್ನು ದಾಖಲಿಸಿವೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ವಿಶೇಷವಾಗಿ ಶಬರಿಮಲೆ ಪ್ರದೇಶದಲ್ಲಿ ಹೆಚ್ಚಿನ ಅಪಾಯ ಉಂಟಾಗುವ ಕುರಿತು ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ರನ್ನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಹಲವಾರು ಭಾಗಗಳಲ್ಲಿ ಸೋಮವಾರ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ನಿರಂತರ ಮಳೆಯಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ತಿಳಿದುಕೊಳ್ಳಲು ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರು ಪತ್ತನಂತಿಟ್ಟದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಆನ್‌ಲೈನ್ ಪರಿಶೀಲನಾ ಸಭೆ ನಡೆಸಿದರು.
ಕೇರಳ ಪ್ರವಾಸೋದ್ಯಮ ಸಚಿವ ಪಿ.ಸಿ. ವಿಷ್ಣುನಾಥ್, ಆರನ್ಮುಲ ಶಾಸಕ ಅಬಿನ್ ವರ್ಕಿ ಅವರು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರ ಚುನಾಯಿತ ಪ್ರತಿನಿಧಿಗಳೊಂದಿಗೆ ಕೊಝೆಂಚೆರ್ರಿಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಎಲ್ಲಿ ಎಷ್ಟು ಮಳೆಯಾಗಿದೆ?
ಭಾನುವಾರ ಬೆಳಗ್ಗೆ 8.30 ರಿಂದ ಸೋಮವಾರ ಬೆಳಗ್ಗೆ 5.30ರ ವರೆಗೆ ಪತ್ತನಂತಿಟ್ಟದ ವೆಂಕುರಿಂಜಿ 104.5 ಮಿಮೀ, ಇಡುಕ್ಕಿಯ ಉಡುಂಬನ್ನೂರು 103.0 ಮಿಮೀ ಮತ್ತು ಇಡುಕ್ಕಿಯ ಚೆರುತೋನಿ 101.5 ಮಿಮೀ ಮಳೆ ದಾಖಲಾಗಿದೆ.
ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ: ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು
ಪತ್ತನಂತಿಟ್ಟದ ಲಾಹಾ 87 ಮಿ.ಮೀ, ಅಲಪ್ಪುಳದ ಥೈಕಟ್ಟುಸ್ಸೆರಿ 80 ಮಿ.ಮೀ, ಎರ್ನಾಕುಲಂನ ನೆರಿಯಮಂಗಲಂ 75 ಮಿ.ಮೀ, ಪತ್ತನಂತಿಟ್ಟದ ಉಳನಾಡು 74.5 ಮಿ.ಮೀ, ಎರ್ನಾಕುಲಂನ ಮಟ್ಟಂಚೇರಿ 71 ಮಿ.ಮೀ, ರಣನಿಹಾನ್‌ಠಾಕ್‌ನಲ್ಲಿ 71 ಮಿ.ಮೀ, ಪತ್ತನಂತಿಟ್ಟ 71 ಮಿ.ಮೀ, ಕೊಟ್ಟಾಯಂನ ವಡವತ್ತೂರ್ 64 ಮಿ.ಮೀ, ಎರ್ನಾಕುಲಂನ ಪಲ್ಲುರುತಿ 63 ಮಿ.ಮೀ ಮತ್ತು ತ್ರಿಶೂರ್‌ನ ಮುನಕ್ಕಲ್ 62 ಮಿ.ಮೀ. ಮಳೆ ದಾಖಲಾಗಿದೆ.