ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಪ್ರತಿಭಟನೆಗೆ ಬೆಂಬಲ ನೀಡಿರುವ ಸಾಮಾಜಿಕ ಮಾಧ್ಯಮ ಪ್ರಭಾವಿ ಯೂಟ್ಯೂಬರ್ (YouTuber) ಧ್ರುವ್ ರಾಠಿಯನ್ನು (Dhruv Rathee) ಶನಿವಾರ ಗುರುಗ್ರಾಮ್‌ನಲ್ಲಿ (gurugram) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಪ್ರವಾಸ, ರಾಜಕೀಯ ವಿಶ್ಲೇಷಣೆ ಮೂಲಕ ಗಮನ ಸೆಳೆದಿರುವ ಧ್ರುವ್ ರಾಠಿ ಜರ್ಮನಿ ಮೂಲದ ಭಾರತೀಯ ಯೂಟ್ಯೂಬರ್. ಇವರು 3 ಕೋಟಿಗೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಧ್ರುವ್ ರಾಠಿ ಅವರನ್ನು ಶನಿವಾರ ಬೆಳಗ್ಗೆ ಗುರುಗ್ರಾಮ್‌ನಲ್ಲಿರುವ ಅವರ ನಿವಾಸದಲ್ಲೇ ದೆಹಲಿ ಪೊಲೀಸರು ಬಂಧಿಸಿದರು.
ಸಿಜೆಪಿ ಪ್ರತಿಭಟನೆಗೂ ಮುನ್ನ ಯೂಟ್ಯೂಬರ್ ಧ್ರುವ್ ರಾಠಿ ಬಂಧನ; ದೆಹಲಿಯಲ್ಲಿ ಹೆಚ್ಚಿದ ಭದ್ರತೆ
2024ರ ಚುನಾವಣೆ ಸಂದರ್ಭದಲ್ಲಿ ರಾಜಕೀಯ ವಿಡಿಯೊ ಕಂಟೆಂಟ್ ಗಳಿಂದ ಭಾರತದಲ್ಲಿ ಪರಿಚಿತರಾದ ಇವರು ಹರಿಯಾಣದ ರೋಹ್ಟಕ್‌ನಲ್ಲಿ 1994ರ ಅಕ್ಟೋಬರ್ 8ರಂದು ಜನಿಸಿದ್ದರು. ಬಳಿಕ ಜರ್ಮನಿಯ ಕಾರ್ಲ್ಸ್‌ರುಹೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ನವೀಕರಿಸಬಹುದಾದ ಇಂಧನ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಅನಂತರ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2014ರಲ್ಲಿ ಯೂಟ್ಯೂಬ್‌ನಲ್ಲಿ ವಿಷಯಗಳನ್ನು ರಚಿಸಲು ಪ್ರಾರಂಭಿಸಿದ ಇವರು ಮುಖ್ಯವಾಗಿ ಪ್ರವಾಸದ ವಿಡಿಯೊಗಳನ್ನು ರಚಿಸುತ್ತಿದ್ದರು. ಕ್ರಮೇಣ ಸತ್ಯಶೋಧನೆ, ಪ್ರಚಲಿತ ವಿದ್ಯಮಾನಗಳು ಮತ್ತು ರಾಜಕೀಯ ಕುರಿತು ವಿಡಿಯೊಗಳ ಮೂಲಕ ಲಕ್ಷಾಂತರ ಜನರ ಗಮನ ಸೆಳೆದರು. ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಗಾಗಿ ಯೂಟ್ಯೂಬ್ ಅನ್ನು ಬಳಸಿಕೊಳ್ಳುತ್ತಿರುವ ಇವರು ಭಾರತೀಯ ಇನ್‌ಫ್ಲುಯೆನ್ಸರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸರ್ಕಾರದ ನೀತಿಗಳು ಮತ್ತು ರಾಜಕೀಯ ಹೇಳಿಕೆಗಳ ಕುರಿತಾದ ವಿಡಿಯೊಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿರುವ ಇವರು ಭಾರತದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಇವರ ರಾಜಕೀಯ ವಿಡಿಯೊಗಳು ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದವು.
ಧ್ರುವ್ ರಾಠಿ ಅವರನ್ನು 2023ರಲ್ಲಿ ಟೈಮ್ ನಿಯತಕಾಲಿಕೆಯು ಮುಂದಿನ ಪೀಳಿಗೆಯ ನಾಯಕರಾಗಿ ಗುರುತಿಸಿತು. ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಯೂಟ್ಯೂಬ್‌ನಲ್ಲಿ 30 ಮಿಲಿಯನ್, ಇನ್‌ಸ್ಟಾಗ್ರಾಮ್‌ನಲ್ಲಿ 19.4 ಮಿಲಿಯನ್ ಮತ್ತು ಎಕ್ಸ್‌ನಲ್ಲಿ ಸುಮಾರು 3.3 ಮಿಲಿಯನ್‌ಗೂ ಹೆಚ್ಚು ಅನುಯಾಯಿಗಳನ್ನು ಇವರು ಹೊಂದಿದ್ದಾರೆ.