Cops Arrested: ಕಾನ್ಸ್‌ಟೇಬಲ್‌ಗೆ ಚಿತ್ರಹಿಂಸೆ; ಆರು ಮಂದಿ ಪೊಲೀಸರ ಬಂಧನ
ಕಸ್ಟಡಿಯಲ್ಲಿದ್ದ ಕಾನ್ಸ್‌ಟೇಬಲ್‌ಗೆ ಚಿತ್ರಹಿಂಸೆ ನೀಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ, ಇನ್ಸ್‌ಪೆಕ್ಟರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಸೇರಿದಂತೆ ಆರು ಮಂದಿ ಪೊಲೀಸರನ್ನು ಬಂಧಿಸಲಾಗಿದೆ. ಎಲ್ಲ ಆರೋಪಿ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ಇತರ ಸರ್ಕಾರಿ ವಸ್ತುಗಳನ್ನು ಆಯಾ ಜಿಲ್ಲಾ ಪೊಲೀಸ್ ಕಚೇರಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ.


ಶ್ರೀನಗರ: ಕಾನ್ಸ್‌ಟೇಬಲ್‌ಗೆ ಚಿತ್ರಹಿಂಸೆ (Custodial Torture) ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಡೆದಿದೆ. ಬಂಧಿತ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ಇತರ ಸರ್ಕಾರಿ ವಸ್ತುಗಳನ್ನು ಆಯಾ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನ (Supreme Court) ಆದೇಶದ ಮೇರೆಗೆ ಕಾನ್ಸ್‌ಟೇಬಲ್ ಒಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಕಾನ್ಸ್‌ಟೇಬಲ್‌ಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳು ಸೇರಿ ಆರು ಪೊಲೀಸ್ ಸಿಬ್ಬಂದಿಯನ್ನು ಸಿಬಿಐ ಬುಧವಾರ ಬಂಧಿಸಿತ್ತು.
ಬಂಧಿತ ಪೊಲೀಸರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ, ಇನ್ಸ್‌ಪೆಕ್ಟರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಸೇರಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ಎಲ್ಲ ಆರೋಪಿ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ಇತರ ಸರ್ಕಾರಿ ವಸ್ತುಗಳನ್ನು ಆಯಾ ಜಿಲ್ಲಾ ಪೊಲೀಸ್ ಕಚೇರಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ.
ಆರೋಪಿ ಪೊಲೀಸರಲ್ಲಿ ಒಬ್ಬರಾದ ಗೌರವಧನದ ಮೇಲೆ ಕೆಲಸ ಮಾಡುತ್ತಿರುವ ವಿಶೇಷ ಪೊಲೀಸ್ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು, ವಿಶೇಷ ಪೊಲೀಸ್ ಅಧಿಕಾರಿ (SPO) ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಇದನ್ನೂ ಓದಿ: Youtuber Sameer: ಯೂಟ್ಯೂಬರ್ ಸಮೀರ್‌ಗೆ ಬಿಗ್ ರಿಲೀಫ್; ನಿರೀಕ್ಷಣಾ ಜಾಮೀನು ಮಂಜೂರು
ಸುಪ್ರೀಂ ಕೋರ್ಟ್ ಜುಲೈ 21ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮೇಲೆ ನಡೆದ ಕ್ರೂರ ಮತ್ತು ಅಮಾನವೀಯ ಕಸ್ಟಡಿ ಚಿತ್ರಹಿಂಸೆ ಕುರಿತು ಎಫ್‌ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶಿಸಿ, ಆಡಳಿತವು ಅವರಿಗೆ 50 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಆದೇಶಿಸಿತು.
ಕಾನ್ಸ್‌ಟೇಬಲ್ ಅವರ ಅಕ್ರಮ ಬಂಧನದ ಸಮಯದಲ್ಲಿ ಅವರಿಗೆ ಚಿತ್ರ ಹಿಂಸೆ ನೀಡಿರುವುದಕ್ಕೆ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಆಘಾತ ವ್ಯಕ್ತಪಡಿಸಿತ್ತು.