Murder Case: 10ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಕೊಂದ ಜೂನಿಯರ್; ಕಾರಣವೇನು?
ಹತ್ತನೇ ತರಗತಿ ವಿದ್ಯಾರ್ಥಿಯನ್ನು ಎಂಟನೇ ತರಗತಿ ವಿದ್ಯಾರ್ಥಿ ಇರಿದು ಕೊಂದಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಯಾಗಿ ಆರೋಪಿ ವಿದ್ಯಾರ್ಥಿ ತನ್ನ ಸ್ನೇಹಿತನೊಂದಿಗೆ ಮಾತನಾಡಿರುವ ಆಡಿಯೊ ಈಗ ಪೊಲೀಸರ ಕೈ ಸೇರಿದೆ. ಇದರಲ್ಲಿ ವಿದ್ಯಾರ್ಥಿ ಏನು ಹೇಳಿದ್ದಾನೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಗಾಂಧಿನಗರ: ಹತ್ತನೇ ತರಗತಿ ವಿದ್ಯಾರ್ಥಿಯನ್ನು ಜೂನಿಯರ್ ವಿದ್ಯಾರ್ಥಿಯೊಬ್ಬ (Student murder case) ಚಾಕುವಿನಿಂದ ಇರಿದು ಕೊಂದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ. ನಯನ್ ಸಂತಾನಿಯನ್ನು (Nayan Santani murder case) 8ನೇ ತರಗತಿಯ ಜೂನಿಯರ್ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಘಟನೆ ಮಂಗಳವಾರ ಅಹಮದಾಬಾದ್‌ನ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ದಾಳಿಯ ಅನಂತರ ಕೂಡಲೇ ನಯನ್ ಸಂತಾನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಕೊಲೆಯ ಬಳಿಕ ಆರೋಪಿ ವಿದ್ಯಾರ್ಥಿಯು ಸ್ನೇಹಿತನೊಂದಿಗೆ ಮಾಡಿರುವ ಮಾತುಗಳು ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ತನಿಖೆ ವೇಳೆ ಪೊಲೀಸರ ಕೈ ಸೇರಿದೆ.
ಶಾಲೆ ಮುಗಿಯುತ್ತಿದ್ದಂತೆ ನಯನ್ ತರಗತಿಯಿಂದ ಹೊರಬರುತ್ತಿದ್ದಾಗ ಆರೋಪಿ ವಿದ್ಯಾರ್ಥಿ ಮತ್ತು ಇತರ ಕೆಲವರು ಎದುರಾಗಿದ್ದಾರೆ. ಇವರ ನಡುವೆ ವಿವಾದ ಉಲ್ಬಣಗೊಂಡಿತು. ಬಳಿಕ ಆರೋಪಿ ವಿದ್ಯಾರ್ಥಿ ನಯನ್ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ನಯನ್ ಕುಸಿದು ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ದಾಳಿ ನಡೆಸಿದ ಆರೋಪಿ ವಿದ್ಯಾರ್ಥಿಯನ್ನು ಶಾಲೆಯ ಭದ್ರತಾ ಸಿಬ್ಬಂದಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಅನಂತರ ಆರೋಪಿ ಮತ್ತು ಆತನ ಸ್ನೇಹಿತನ ನಡುವಿನ ಇನ್‌ಸ್ಟಾಗ್ರಾಮ್ ಸಂಭಾಷಣೆಯ ದಾಖಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದೆ ಸಂಭಾಷಣೆಯಲ್ಲಿ?
ಸ್ನೇಹಿತನು ನೀನು ಇಂದು ಯಾರಿಗೆ ಏನು ಮಾಡಿದ್ದಿ ಎಂದು ಕೇಳಿದ್ದು, ಅದಕ್ಕೆ ಆರೋಪಿ ವಿದ್ಯಾರ್ಥಿಯು ಹೌದು. ನಾನು ಆತನಿಗೆ ಇರಿದಿದ್ದೇನೆ. ಬಹುಶಃ ಅವನು ಸತ್ತಿದ್ದಾನೆ. ಅದಕ್ಕೆ ಸ್ನೇಹಿತ ಯಾಕೆ ಈ ರೀತಿ ಮಾಡಿದ್ದಿಯ ಎಂದು ಬೈದಿದ್ದಾನೆ. ಆದರೆ ಆರೋಪಿ ವಿದ್ಯಾರ್ಥಿಯು ಯಾವುದೇ ಪ್ರಾಯಶ್ಚಿತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಪ್ರತಿಭಟನೆ
ವಿದ್ಯಾರ್ಥಿಯ ಹತ್ಯೆಯ ಬಳಿಕ ಶಾಲೆಯಲ್ಲಿ ಪೋಷಕರು, ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಿದರು. ಪೋಷಕರು, ಸ್ಥಳೀಯರು ಮತ್ತು ಸಿಂಧಿ ಸಮುದಾಯದ ಸದಸ್ಯರು ಶಾಲಾ ಆಡಳಿತವು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಶಾಲಾ ಆವರಣಕ್ಕೆ ನುಗ್ಗಿದರು. ಅವರು ಶಾಲೆಯ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದರು.
ಇದನ್ನೂ ಓದಿ: Bagepally News: ಕಾರಣವಿಲ್ಲದೆ ನೌಕರರ ವಜಾ : ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಎಫ್‌ಐಆರ್ ದಾಖಲಿಸಿದರು. ಬಾಲಾಪರಾಧಿ ನ್ಯಾಯ ಕಾಯ್ದೆಯಡಿಯಲ್ಲಿ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಅಧಿಕಾರಿಗಳು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.