ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇದ್ದಕ್ಕಿದ್ದಂತೆ ಬದಲಾದ ಜೀವನ ಶೈಲಿ, ಐಷಾರಾಮಿ ಬದುಕು; ಮನೆಯೊಳಗೆ ಹೂತಿಟ್ಟ ಡ್ರಮ್‌ನಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ರೂಪಾಯಿ: ಖಿಲಾಡಿ ಸಹೋದರರು ಸಿಕ್ಕಿಬಿದ್ದಿದ್ದು ಹೇಗೆ?

Uttar Pradesh News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಬಳಿಯ ಹಳ್ಳಿಯೊಂದರ ಮಧ್ಯಮ ವರ್ಗದ ಮನೆಯ ಅಡಿಯಲ್ಲಿ ಹೂತಿಡಲಾಗಿದ್ದ ಕೋಟ್ಯಂತರ ರೂಪಾಯಿ ನಗದು ತುಂಬಿದ್ದ 3 ಡ್ರಮ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಈ ನೋಟುಗಳು ಮೌಲ್ಯ ಕೆಲವು ಕೋಟಿ ರೂಪಾಯಿಗಳಷ್ಟು. ಸದ್ಯ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಚಾಟ್‌ಜಿಪಿಟಿ ರಚಿತ ಚಿತ್ರ

ಲಖನೌ, ಅ. 29: ಅವರದು ಮಧ್ಯಮ ವರ್ಗದ ಸಾಮಾನ್ಯ ಕುಟುಂಬ. ಆದರೆ ಇದ್ದಕ್ಕಿದ್ದಂತೆ ಅವರ ಜೀವನವೇ ಬದಲಾಗಿ ಹೋಯಿತು. ಐಷಾರಾಮಿಯಾಗಿ ಬದುಕತೊಡಗಿದರು. ಎಕ್ರೆಗಟ್ಟಲೆ ಜಾಗ ಖರೀದಿಸತೊಡಗಿದರು, ಮನೆಯಂಗಳದಲ್ಲಿ ವಾಹನಗಳ ಸಾಲು ನಿಲ್ಲತೊಡಗಿತು...ಒಟ್ಟಿನಲ್ಲಿ ಅವರ ಬದುಕೇ ಬದಲಾಗಿ ಹೋಯ್ತು. ಊರವರು ಅಚ್ಚರಿಯಿಂದ ನೋಡ ನೋಡುತ್ತಿದ್ದಂತೆ ಬದುಕು ಬದಲಾಯ್ತು. ಲಾಟರಿ ಹೊಡೆಯದೆ ಇದ್ದಕ್ಕಿದ್ಧಂತೆ ಅವರು ಕೋಟ್ಯಧಿಪತಿಗಳಾಗಿದ್ದು ಎಲ್ಲರಿಗೂ ಅಚ್ಚರಿ ಎನಿಸಿತು. ಜತೆಗೆ ಇದು ಗ್ರಾಮಸ್ಥರ ಅನುಮಾನಕ್ಕೂ ಕಾರಣವಾಯ್ತು. ಇದೀಗ ಪೊಲೀಸರ ತನಿಖೆ ವೇಳೆ ರಹಸ್ಯ ಬಯಲಾಗುತ್ತಿದ್ದು, ಮನೆಯೊಳಗೆ ಹೂತಿಟ್ಟ 3 ಡ್ರಮ್‌ಗಳಲ್ಲಿ ಕೋಟಿ ಕೋಟಿ ರೂಪಾಯಿ ಪತ್ತೆಯಾಗಿದೆ.

ನಾವು ಹೇಳ ಹೊರಟಿರುವುದು ಸಿನಿಮಾ ಕಥೆಯಲ್ಲ. ಬದಲಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಬಳಿಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು. ಹೌದು, ಉತ್ತರ ಪ್ರದೇಶದ ಪ್ರಯಾಗರಾಜ್‌ನಿಂದ ಕೇವಲ 45 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಯೊಂದರ ಮಧ್ಯಮ ವರ್ಗದ ಸಾಮಾನ್ಯ ಮನೆಯ ಅಡಿಯಲ್ಲಿ ಹೂತಿಡಲಾಗಿದ್ದ ಕೋಟ್ಯಂತರ ರೂಪಾಯಿ ನಗದು ತುಂಬಿದ್ದ 3 ಡ್ರಮ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗಂಗಾನಗರ ಝೋನ್‌ನ ಯಾದವ ಕುಟುಂಬದ ಮನೆಯನ್ನು ಶೋಧಿಸಿದಾಗ ಪೊಲೀಸರೇ ಅಚ್ಚರಿಪಡುವಂತಹ ಈ ಘಟನೆಗೆ ಬೆಳಕಿಗೆ ಬಂದಿದೆ. ಅಕ್ಟೋಬರ್‌ 28ರಂದು ಸೋರಾಂ ಮತ್ತು ಫುಲ್‌ಪುರ್‌ನ ಎಸಿಪಿಗಳ ನೇತೃತ್ವದಲ್ಲಿ ನವಾಬ್‌ಗಂಜ್ ಮತ್ತು ಸೋರಾಂ ಪೊಲೀಸ್ ಠಾಣೆಗಳ ಜಂಟಿ ತಂಡವೊಂದು ಗಂಗಾನಗರ ವಲಯದ ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ರಾಮನಗರ ಗ್ರಾಮದ ಬಾರೈಪುರಕ್ಕೆ ಆಗಮಿಸುವುದರೊಂದಿಗೆ ಪ್ರಕರಣದ ನಿಗೂಢ ಪದರ ಬಿಚ್ಚತೊಡಗಿತು.

ಮನೆ ಬಾಡಿಗೆ ಕಟ್ಟಲು ಖೋಟಾ ನೋಟು ತಯಾರಿಸಿದ ಭೂಪ; ನಕಲಿ 37 ಲಕ್ಷ ರೂಪಾಯಿ ಪತ್ತೆ

ಯಾಕಾಗಿ ಪರಿಶೀಲನೆ?

ಹಣ ಲಭಿಸಿದ ಬಾರೈಪುರದ ಈ ಮನೆ ರಾಕೇಶ್‌ ಯಾದವ್‌ ಮತ್ತು ರಾಜೇಶ್‌ ಯಾದವ್‌ ಅವರಿಗೆ ಸೇರಿದ್ದು. ಅವರು ಈ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್‌ ಬಳಿಕ 2020ರಲ್ಲಿ ಈ ಸಹೋದರರು ಕೆಲಸ ಬಿಟ್ಟು ಗ್ರಾಮಕ್ಕೆ ಬಂದು ನೆಲೆಸಿದರು. ಅದಾದ ಬಳಿಕ ಅವರ ಜೀವನ ಶೈಲಿಯಲ್ಲಿನ ಬದಲಾವಣೆಗಳನ್ನು ಗ್ರಾಮಸ್ಥರು ಗುರುತಿಸತೊಡಗಿದರು.

ಅದುವರೆಗೆ ಮಧ್ಯಮ ವರ್ಗದ ಕುಟುಂಬದವರಾಗಿದ್ದ ಅವರು ಇದ್ದಕ್ಕಿದ್ದಂತೆ ಶ್ರೀಮಂತರಾದರು. ಜೀವನ ಶೈಲಿಯೇ ಬದಲಾಯಿತು. ರಾಕೇಶ್‌ ಮತ್ತು ರಾಜೇಶ್‌ ಎಕ್ರೆಗಟ್ಟಲೆ ಜಾಗ ಖರೀದಿಸತೊಡಗಿದರು. ಟ್ರ್ಯಾಕ್ಟರ್‌ ಕೂಡ ಕೊಂಡುಕೊಂಡರು. ಒಟ್ಟಿನಲ್ಲಿ ಅವರ ಜೀವನ ಶೈಲಿ ಮಧ್ಯಮ ವರ್ಗದವರ ರೀತಿ ಇರಲಿಲ್ಲ. ನೀರಿನಂತೆ ಹಣ ಖರ್ಚು ಮಾಡತೊಡಗಿದರು. ಇದ್ದಕ್ಕಿದ್ದಂತೆ ಇವರ ಬದುಕು ಬದಲಾಗಿದ್ದು ನೋಡಿ ಗ್ರಾಮಸ್ಥರಿಗೆ ಅಚ್ಚರಿಯಾಯ್ತು. ಇಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ಅನುಮಾನ ಮೂಡಿತು. ಮಧ್ಯಮ ವರ್ಗದವರಿಂದ ಇಷ್ಟೊಂದು ಖರ್ಚು ಮಾಡಲು ಸಾಧ್ಯವೇ ಇಲ್ಲ ಎನಿಸಿ ಪೊಲೀಸರು ದೂರು ನೀಡಿದರು.

ಅದರಂತೆ ಪೊಲೀಸರು ಸಹೋದರರ ಮನೆ ಮೇಲೆ ದಾಳಿ ನಡೆಸಿದರು. ಆರಂಭದಲ್ಲಿ ಮನೆಯೊಳಗೆ ಅನುಮಾನ ಮೂಡುವಂತಹ ಏನೂ ಪತ್ತೆಯಾಗಿರಲಿಲ್ಲ. ಇನ್ನೇನು ಪೊಲೀಸರು ಮನೆಯಿಂದ ಹೊರಡಬೇಕು ಎನ್ನುವಾಗ ಕೋಣೆಯೊಂದರ ಮಣ್ಣನ್ನು ಇತ್ತೀಚೆಗಷ್ಟೇ ಯಾರೋ ಅಗೆದು ಬದಲಾಯಿಸಿದಂತೆ ಕಂಡುಬಂತು. ಅಲ್ಲಿ ಅಗೆದ ನಂತರ, ಹೂತಿಟ್ಟಿದ್ದ 3 ಡ್ರಮ್‌ಗಳು ಪತ್ತೆಯಾದವು.

ಆ ಡ್ರಮ್‌ಗಳಲ್ಲಿ ಪರಿಶೀಲಿಸಿದಾಗ ಅದರಲ್ಲಿ ಎಚ್ಚರಿಕೆಯಿಂದ ಇರಿಸಿದ 500 ರೂಪಾಯಿಯ ಕಂತೆಯೇ ಕಂಡುಬಂತು. ಪ್ರಾಥಮಿಕ ವರದಿಗಳ ಪ್ರಕಾರ ಈ ನೋಟುಗಳು ಮೌಲ್ಯ ಕೆಲವು ಕೋಟಿ ರೂಪಾಯಿಗಳಷ್ಟು. ಸದ್ಯ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸಂಜೆ ಸಂಚು, ರಾತ್ರಿ ಪರಾರಿ! ಅಪಸ್ಮಾರದ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಂಡ 17 ಕೈದಿಗಳ ಪ್ಲ್ಯಾನ್‌ ರಿವೀಲ್‌

ಹಣ ಬಂದಿದ್ದೆಲ್ಲಿಂದ?

ಸಹೋದರರನ್ನು ತನಿಖೆಗೆ ಒಳಪಡಿಸಿದ ಪೊಲೀಸರು ಹಣದ ಮೂಲವನ್ನು ಕೆದಕುತ್ತಿದ್ದಾರೆ. ಕುಟುಂಬಸ್ಥರು ಗೊಂದಲದ ಹೇಳಿಕೆ ನೀಡುತ್ತಿರುವುದದರಿಂದ ಹಣ ಎಲ್ಲಿಂದ ಬಂತು ಎನ್ನುವುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಪತ್ತೆಯಾದ ಹಣದ ಮೌಲ್ಯ ಎಷ್ಟು ಎಂದು ನಿರ್ಧರಿಸಲು ಎಣಿಕೆ ಕಾರ್ಯ ಮುಂದುವರಿದಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author