ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನೆ ಬಾಡಿಗೆ ಕಟ್ಟಲು ಖೋಟಾ ನೋಟು ತಯಾರಿಸಿದ ಭೂಪ; ನಕಲಿ 37 ಲಕ್ಷ ರೂಪಾಯಿ ಪತ್ತೆ

Fake Notes: ಮಹಾರಾಷ್ಟ್ರದ ನಾಗ್ಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಪುಷ್ಪಕ್‌ ಕೃಷ್ಣ ಭಂಡಾರ್ಕರ್‌ ಎಂಬಾತ ನಕಲಿ ನೋಟುಗಳನ್ನು ಪ್ರಿಂಟ್‌ ಮಾಡಿದ್ದಾನೆ. ಬಾಡಿಗೆ ಪಾವತಿಸಲೂ ಹಣವಿಲ್ಲದ ಆತ ಇದಕ್ಕಾಗಿ ನೋಟು ತಯಾರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.

ಬಾಡಿಗೆ ಮನೆಯಲ್ಲಿ ಖೋಟಾ ನೋಟು ತಯಾರಿ; ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Oct 25, 2026 8:29 PM

ಮುಂಬೈ, ಅ. 25: ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೋದ ಮಹಾರಾಷ್ಟ್ರದ ವ್ಯಕ್ತಿಯೊಬ್ಬನ ಕಳ್ಳಾಟ ಇದೀಗ ಬಯಲಾಗಿದ್ದು, ನಾಪತ್ತೆಯಾದ ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮನೆ ಬಾಡಿಗೆ ಪಾವತಿಸಲೂ ಗತಿ ಇಲ್ಲದ ಆತ ಕಷ್ಟಪಟ್ಟು ದುಡಿಯುವ ಬದಲು ನಕಲಿ ನೋಟು ತಯಾರಿಸಿದ್ದಾನೆ. ಇದನ್ನು ಪೊಲೀಸರು ಪತ್ತೆ ಹಚ್ಚಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ (Fake Notes). ಅಲ್ಲದೆ ಸುಮಾರು 37 ಲಕ್ಷ ರೂಪಾಯಿ ಮೌಲ್ಯದ 500 ರುಪಾಯಿ ಮುಖಬೆಲೆಯ ಖೋಟಾ ನೋಟು ವಶಪಡಿಸಿಕೊಂಡಿದ್ದಾರೆ. ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪುಷ್ಪಕ್‌ ಕೃಷ್ಣ ಭಂಡಾರ್ಕರ್‌ ಎಂದು ಗುರುತಿಸಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಆತ ಅಲ್ಲಿಯೇ ನಕಲಿ ನೋಟುಗಳನ್ನು ಪ್ರಿಂಟ್‌ ಮಾಡಿದ್ದಾನೆ. ಬಾಡಿಗೆ ಪಾವತಿಸಲೂ ಹಣವಿಲ್ಲದ ಆತ ಇದಕ್ಕಾಗಿ ನೋಟು ತಯಾರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ʼʼಪರಿಶೀಲನೆ ವೇಳೆ ಬರೋಬ್ಬರಿ 37 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟು ಪತ್ತೆಯಾಗಿದೆʼʼ ಎಂದು ತಿಳಿಸಿದ್ದಾರೆ.

ವೃಷಭಾವತಿ ನಾಲೆಯಲ್ಲಿ ತೇಲಿದ 500 ರುಪಾಯಿಯ ಕಂತೆ ಕಂತೆ ನೋಟು; ನಕಲಿ ಔಷಧ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ

ಬೆಳಕಿಗೆ ಬಂದಿದ್ದು ಹೇಗೆ?

ಪುಷ್ಪಕ್‌ ಕೃಷ್ಣನ ಈ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿದ್ದು ಆಕಸ್ಮಿಕವಾಗಿ. ಅದುವರೆಗೆ ಆ ಬಾಡಿಗೆ ಮನೆಯಲ್ಲಿ ಇಂತಹದ್ದೊಂದು ಕೃತ್ಯ ನಡೆಯುತ್ತಿದೆ ಎನ್ನುವ ಚಿಕ್ಕ ಸುಳಿಯೂ ಮಾಲಕನಿಗೆ ಸಿಕ್ಕಿರಲಿಲ್ಲ. ಕೆಲವು ದಿನಗಳಿಂದ ಪುಷ್ಪಕ್‌ ಪತ್ತೆ ಇರದ ಕಾರಣ ಅನುಮಾನಗೊಂಡು ಮನೆ ಮಾಲಕ ಲಾಕ್‌ ಮುರಿದು ಒಳ ಹೋದಾಗ ನಕಲಿ ನೋಟುಗಳ ಕಂತೆ ಕಂಡು ಬಂತು. ಅವರು ಕೂಡಲೇ ಪೊಲೀಸರುಗೆ ಮಾಹಿತಿ ನೀಡಿದರು.

ಪೊಲೀಸರೇ ದಂಗು

ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ವಾಥೋಡ ಪೊಲೀಸರು ನೋಟುಗಳ ರಾಶಿಯನ್ನು ನೋಡಿ ಒಂದುಕ್ಷಣ ದಂಗಾದರು. ಜತೆಗೆ ರೋಮ್‌ನಲ್ಲಿ ಪ್ರಿಂಟರ್‌ ಮತ್ತು ಪ್ರಿಂಟ್‌ಗೆ ಅಗತ್ಯವಾಗಿರುವ ವಸ್ತುಗಳೂ ಕಂಡು ಬಂದಿವೆ. ಒಟ್ಟು 48 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಪುಷ್ಪಕ್‌ನ ಪತ್ತೆ ಕಾರ್ಯ ತೀವ್ರಗೊಂಡಿದೆ.

ಮೂಲಗಳ ಪ್ರಕಾರ ಖರ್ಬಿ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ಪುಷ್ಪಕ್‌ ಒಂದೂವರೆ ವರ್ಷದಿಂದ ವಾಸವಾಗಿದ್ದಾನೆ. ಆತನ ಬಾಡಿಗೆ ಕರಾರು ಒಪ್ಪಂದ ಈ ವರ್ಷದ ಜನವರಿಗೆ ಮುಗಿದಿದೆ. ಅಲ್ಲಿಂದ ಬಳಿಕ ಆತ ಬಾಡಿಗೆ ಪಾವತಿಸಿರಲಿಲ್ಲ. ಒಮ್ಮೆ ಮನೆ ಮಾಲಕ ರಮೇಶ್‌ ಬಾಡಿಗೆ ಹಣ ನೀಡದಿದ್ದರೆ ಮನೆ ಖಾಲಿ ಮಾಡುವಂತೆ ಹೇಳಿದಾಗ ಚಾಕು ತೋರಿಸಿ ಬೆದರಿಕೆಯನ್ನೂ ಹಾಕಿದ್ದ. ಈ ವಿಚಾರವನ್ನು ರಮೇಶ್‌ ಆಗಲೇ ವಾಥೋಡ ಪೊಲೀಸರ ಗಮನಕ್ಕೆ ತಂದಿದ್ದರು.

500 ರೂ. ನಕಲಿ ನೋಟುಗಳ ಹಾವಳಿ ಹೆಚ್ಚಳ! ಅಸಲಿ ನೋಟುಗಳ ಪತ್ತೆಹಚ್ಚುವ ಮಾರ್ಗ ಇಲ್ಲಿದೆ

ಹಲವು ಸಮಯಗಳಿಂದ ಪುಷ್ಪಕ್‌ ಬರದೇ ಹೋದಾಗ ಅನುಮಾನಗೊಂಡ ರಮೇಶ್‌ ಕೊನೆಗೆ ಅಕ್ಟೋಬರ್‌ 24ರಂದು ಬೀಗ ಮುರಿದು ಮನೆ ಒಳ ಪ್ರವೇಶಿಸಿದರು. ಈ ವೇಳೆ ಅವರಿಗೆ ಬಕೇಟ್‌ಗಳಲ್ಲಿ ತುಂಬಿಟ್ಟಿದ್ದ ನೋಟುಗಳು, ಪ್ರಿಂಟರ್‌ ಕಂಡು ಬಂತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ತಲೆಮರೆಸಿಕೊಂಡಿರುವ ಪುಷ್ಪಕ್‌ ಮುಂಬೈಯಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಅಲ್ಲಿಯೂ ಪತ್ತೆ ಕಾರ್ಯ ಚುರುಕುಗೊಂಡಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.