ನವದೆಹಲಿ: ಸೈಕಲ್ ( bicycle tour) ಮೂಲಕ ಎಷ್ಟು ದೂರ ಸಾಗಲು ಸಾಧ್ಯವಿದೆ. ಹೆಚ್ಚು ಎಂದರೆ ಒಂದು ದೇಶ ಸುತ್ತಬಹುದು. ಆದರೆ ಇಲ್ಲೊಬ್ಬರು 191 ದೇಶ (world tour) ಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಬದುಕಿನ 19 ವರ್ಷಗಳನ್ನು ಸವೆಸಿದ್ದಾರೆ. ಇದು ಕೇವಲ ಒಂದು ಮೋಜಿನ ಪ್ರವಾಸವಲ್ಲ. ಎಚ್ಐವಿ/ ಏಡ್ಸ್ ಕುರಿತು ಜಾಗೃತಿಗಾಗಿ (HIV/AIDS Awareness) ಅವರು ನಡೆಸಿರುವ ಜೀವನವಾಗಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋಮೆನ್ ದೇಬ್ನಾಥ್ (Somen Debnath) ಅಸಾಧಾರಣ ಪಯಣವನ್ನು ಕೈಗೊಂಡು ಇದೀಗ ನವದೆಹಲಿ (New delhi) ತಲುಪಿದ್ದಾರೆ.
ಒಂದು ಸೈಕಲ್ ಅನ್ನು ತನ್ನ ಸಂಗಾತಿಯಾಗಿರಿಸಿಕೊಂಡ ಸೋಮೆನ್ ದೇಬ್ನಾಥ್ ಅವರು ಇಡೀ ಜಗತ್ತನ್ನೇ ತನ್ನ ಮನೆಯನ್ನಾಗಿಸಿಕೊಂಡಿದ್ದಾರೆ. ಅವರಿಗೆ ಇದು ಕೇವಲ ಒಂದು ಕನಸಿನ ಪ್ರಯಾಣವಲ್ಲ ಬದಲಾಗಿ ಜೀವನವೇ ಆಗಿದೆ. ಸೈಕಲ್ ಮೂಲಕ 191 ದೇಶಗಳನ್ನು ಸುತ್ತಿದ್ದಾರೆ, ಖಂಡಾಂತರ ಪ್ರಯಾಣ ಮಾಡಿರುವ ಅವರು ಈ ಸಂದರ್ಭದಲ್ಲಿ ಅನಾರೋಗ್ಯ ಮತ್ತು ಅನಿಶ್ಚಿತತೆಗಳನ್ನು ಕೂಡ ಎದುರಿಸಿದ್ದಾರೆ. ಇವೆಲ್ಲದರ ಹಿಂದಿನ ಅವರ ಮುಖ್ಯ ಉದ್ದೇಶ ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಬದರಿನಾಥದಿಂದ ಮರಳುತ್ತಿದ್ದ ಹೆಲಿಕಾಪ್ಟರ್ ಪತನ; ಐವರು ಕನ್ನಡಿಗರು ಸೇರಿ 6 ಮಂದಿ ಸಾವು
ಸೈಕಲ್ನಲ್ಲಿ 2,00,000 ಕಿಲೋ ಮೀಟರ್ಗಿಂತಲೂ ಹೆಚ್ಚು ದೂರ ಕ್ರಮಿಸಿರುವುದಾಗಿ ಹೇಳಿರುವ ಅವರು ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ದೇಶದ ಗಡಿಗಳಾಚೆಗೆ ಕೊಂಡೊಯ್ಯುವುದು ಮತ್ತು ದೇಶದ ಜನರನ್ನು ಇನ್ನಷ್ಟು ಹತ್ತಿರಕ್ಕೆ ತರುವುದು ತಮ್ಮ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.
2004ರ ಮೇ 27ರಂದು ಸೈಕಲ್ ಯಾತ್ರೆ ಪ್ರಾರಂಭಿಸಿದ ಅವರು ಮೊದಲು ಭಾರತದ ಎಲ್ಲಾ 28 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದ್ದರು. ಬಳಿಕ ದೆಹಲಿಗೆ ಬಂದಾಗ ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗುವ ಅವಕಾಶವು ಸಿಕ್ಕಿತು. ವಿಶೇಷವಾಗಿ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗಿನ ಭೇಟಿಯು ಅತ್ಯಂತ ಮಹತ್ವದ್ದಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಇವರ ಭೇಟಿಯಿಂದಾಗಿ ಐದು ದೇಶಗಳಿಗೆ ವೀಸಾ, 50,000 ರೂಪಾಯಿ ನಗದು ಮತ್ತು ಪರಿಚಯ ಪತ್ರಗಳು ಕೂಡ ಲಭಿಸಿದವು. ಇದರಿಂದ ಅವರು ಅಂತಾರಾಷ್ಟ್ರೀಯ ಪಯಣ ಯೋಜನೆಯನ್ನು ಹಾಕಿಕೊಂಡರು.
2004 ಮತ್ತು 2009ರ ನಡುವೆ ದೇಬ್ನಾಥ್ ನೇಪಾಳ, ಟಿಬೆಟ್, ಚೀನಾ, ಭೂತಾನ್, ಬಾಂಗ್ಲಾದೇಶ, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಶ್ರೀಲಂಕಾ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಸಂಚರಿಸಿದ ಅವರು ಬಳಿಕ ಪಾಕಿಸ್ತಾನ, ಅಫ್ಘಾನಿಸ್ತಾನ, ತಜಿಕಿಸ್ತಾನ್, ಕಿರ್ಗಿಸ್ತಾನ್, ಕಝಾಕಿಸ್ತಾನ್, ಇರಾನ್, ಟರ್ಕಿ, ಜಾರ್ಜಿಯಾ ಮತ್ತು ಬಲ್ಗೇರಿಯಾ ಸೇರಿ 2009 ಮತ್ತು 2012 ರ ನಡುವೆ ಯುರೋಪಿನ 48 ದೇಶಗಳು, ಆಫ್ರಿಕಾದ 54 ದೇಶಗಳು ಮತ್ತು ಮಧ್ಯಪ್ರಾಚ್ಯದ 10 ದೇಶಗಳಲ್ಲಿ ಓಡಾಡಿದರು.
2015 ರಿಂದ 2017 ರವರೆಗೆ ದಕ್ಷಿಣ ಅಮೆರಿಕಾದ 13 ದೇಶಗಳು, 2018 ರಲ್ಲಿ ಕೆರಿಬಿಯನ್ ದ್ವೀಪಗಳು ಮತ್ತು ಮಧ್ಯ ಅಮೆರಿಕದ ಕೆಲವು ಭಾಗಗಳಲ್ಲಿ ಸಂಚರಿಸಿದರು. 2019- 20 ರಲ್ಲಿ ಅಮೆರಿಕದ 48 ರಾಜ್ಯಗಳಲ್ಲಿ ಸಂಚರಿಸಿ ಬಳಿಕ ಕೆನಡಾಕ್ಕೆ ತೆರಳಿದರು. ಈ ವೇಳೆ ಅವರು ರಷ್ಯಾ ಮತ್ತು ಚೀನಾಕ್ಕೂ ಭೇಟಿ ನೀಡಿದ್ದರು.
ಈ ಪ್ರಯಾಣದುದ್ದಕ್ಕೂ ಎದುರಾದ ಅನೇಕ ಸವಾಲುಗಳು ಅವರ ದೃಢನಿಶ್ಚಯವನ್ನು ಪರೀಕ್ಷಿಸಿದವು. ಕೋವಿಡ್ ಸಂದರ್ಭದಲ್ಲಿ ಚೀನಾದಲ್ಲಿ ಸಿಲುಕಿಕೊಂಡ ಅವರು, ಬಳಿಕ ಗಂಭೀರ ಅನಾರೋಗ್ಯದ ವಿರುದ್ಧ ಹೋರಾಡಿ ಗೆದ್ದು ಬಂದರು. ಚೀನಾದಿಂದ ಹೊರಟು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ಗೆ ಪ್ರಯಾಣಿಸಿದ ಅವರು ಸುಮಾರು ಒಂದು ವರ್ಷಗಳ ಕಾಲ ಅಲ್ಲಿದ್ದು, ಬಳಿಕ ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ಮೂಲಕ ಭಾರತಕ್ಕೆ ಮರಳಿದರು.
ಎಚ್ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವಲ್ಲಿ ದೇವನಾಥ್ ಅವರ ಬದ್ಧತೆಯು ಅಂತಾರಾಷ್ಟ್ರೀಯ ಸೈಕಲ್ ಯಾತ್ರೆಗೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ತಮಗೆ 14 ವರ್ಷವಿದ್ದಾಗ ನಡೆದ ಎಚ್ಐವಿಗೆ ಸಂಬಂಧಿಸಿದ ಒಂದು ಘಟನೆಯಿಂದ ಪ್ರೇರಿತರಾಗಿ ಈ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರೂ. 16 ರಿಂದ 20 ವರ್ಷ ವಯಸ್ಸಿನ ಅವಧಿಯಲ್ಲಿ ಈ ಕುರಿತು ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡರು.
ಸೈಕಲ್ನಲ್ಲಿ ಪ್ರಪಂಚದಾದ್ಯಂತ ಸಂಚರಿಸಲು ಸ್ಫೂರ್ತಿಯಾಗಿರುವುದು ಸ್ವಾಮಿ ವಿವೇಕಾನಂದರ ಬೋಧನೆಗಳು ಮತ್ತು ಸಹ-ಪ್ರಯಾಣಿಕ ಬಿಮಲ್ ಮುಖರ್ಜಿ ಅವರು ಬರೆದಿರುವ ಪುಸ್ತಕ ಎಂದಿರುವ ದೇವನಾಥ್, ಮುಖರ್ಜಿ ಅವರ 'ದೋ ಚಕ್ಕಾ ದುನಿಯಾ' ಎಂಬ ಪುಸ್ತಕವು ಅವರ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 'ಪುನರ್ ಮಿಲನ್ ಭಾರತ್' ಎಂಬ ಹೆಸರಿನಲ್ಲಿ ದೇಶವ್ಯಾಪಿ ಅಭಿಯಾನ ಕೈಗೊಂಡಿರುವುದಾಗಿ ಹೇಳಿದ ಅವರು, ಈ ವೇಳೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದ್ವಾರಕಾದಿಂದ ಕಾಮಾಖ್ಯದವರೆಗೆ ಮತ್ತು ಅರುಣಾಚಲ ಪ್ರದೇಶದಿಂದ ಮಿಜೋರಾಂವರೆಗೆ ಸೈಕಲ್ ಮೂಲಕ ಸಂಚರಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಐಕ್ಯತೆ, 'ಒಂದು ಮರ, ಒಂದು ಜೀವ' ಎಂಬ ಸಂದೇಶದ ಮೂಲಕ ಪರಿಸರ ಸಂರಕ್ಷಣೆಯನ್ನು ಪ್ರೋತ್ಸಾಹಿಸುವುದು ಮತ್ತು ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿರುವ ಅವರು ಈ ಯಾತ್ರೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
9.34 ಕೋಟಿ ರೈತರಿಗೆ ದೀಪಾವಳಿ ಗಿಫ್ಟ್: ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸಾಮಾನ್ಯವಾಗಿ ದಿನಕ್ಕೆ 70 ರಿಂದ 80 ಕಿ.ಮೀ. ಸೈಕಲ್ ತುಳಿಯುವ ಅವರು ಕೆಲವೊಮ್ಮೆ 150 ಕಿ.ಮೀ. ವರೆಗೂ ಕ್ರಮಿಸುವುದುಂಟು. ದೀರ್ಘಕಾಲದ ಸೈಕಲ್ ಪ್ರಯಾಣದಿಂದ ಕಾಲುಗಳ ಮೇಲೆ ಒತ್ತಡ ಬಿದ್ದು ನೋವು ಕಾಣಿಸಿಕೊಳ್ಳುತ್ತಿರುವುದರಿಂದ ಈಗ ಅವರು ತುಸು ನಿಧಾನಗತಿಯಲ್ಲಿ ಸಾಗಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯಾಣದ ಜೀವನವು ಅತ್ಯಂತ ಕಡಿಮೆ ಸಂಪನ್ಮೂಲಗಳೊಂದಿಗೆ ಬದುಕುವುದನ್ನು ಕಲಿಸಿದೆ ಎನ್ನುತ್ತಾರೆ ಅವರು.