ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅರ್ನಾಬ್ ಚಂಡಮಾರುತ: ಆಂಧ್ರಪ್ರದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಸ್ಥಗಿತ

Cyclone Arnab: ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಅರ್ನಾಬ್ ಚಂಡಮಾರುತವು ತೀವ್ರಗೊಂಡು ಅತ್ಯಂತ ಪ್ರಬಲ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಗಂಟೆಗೆ 125–135 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ವೇಗವು ಗಂಟೆಗೆ 150 ಕಿ.ಮೀ.ವರೆಗೂ ತಲುಪುವ ಸಾಧ್ಯತೆಯಿದೆ. ಅಕ್ಟೋಬರ್ 28ರಂದು ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಅ.28: ಅರ್ನಾಬ್ ಚಂಡಮಾರುತವು (Cyclone Arnab) ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಹಾಗೂ ಒಡಿಶಾದ ಕೆಲವು ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನವನ್ನು ಉಂಟುಮಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಮುನ್ಸೂಚನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಹಾಗೂ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಚಂಡಮಾರುತವು ತೀವ್ರಗೊಂಡು ಅತ್ಯಂತ ಪ್ರಬಲ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಗಂಟೆಗೆ 125–135 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ವೇಗವು ಗಂಟೆಗೆ 150 ಕಿ.ಮೀ.ವರೆಗೂ ತಲುಪುವ ಸಾಧ್ಯತೆಯಿದೆ. ಅಕ್ಟೋಬರ್ 28ರಂದು ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.

ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಹಾಗೂ ದಕ್ಷಿಣ ಒಡಿಶಾದಲ್ಲಿ, ಅದರಲ್ಲೂ ಭುವನೇಶ್ವರಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಕಾರ್ಯಾಚರಣೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಚಂಡಮಾರುತದ ಚಲನೆಯ ದಿಕ್ಕನ್ನು ಅವಲಂಬಿಸಿ ಹೈದರಾಬಾದ್, ವಾರಾಣಸಿ, ಪ್ರಯಾಗ್‌ರಾಜ್ ಮತ್ತು ಗೋರಖ್‌ಪುರ ವಿಮಾನ ನಿಲ್ದಾಣಗಳಲ್ಲಿಯೂ ವಿಮಾನಗಳ ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆಯಿದೆ.

ಅರ್ನಾಬ್ ಚಂಡಮಾರುತ ಅಬ್ಬರ: ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಎಚ್ಚರಿಕೆ; 125-135 kmph ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ

ಅಕ್ಟೋಬರ್ 27ರ ಮಧ್ಯಾಹ್ನದಿಂದ ವಿಶಾಖಪಟ್ಟಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ವಿಜಯವಾಡ ಮತ್ತು ರಾಜಮಂಡ್ರಿಯಲ್ಲಿ ಅದೇ ದಿನ ಸಂಜೆ 7 ಗಂಟೆಯ ನಂತರ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಅಕ್ಟೋಬರ್ 28 ರಂದು ದೆಹಲಿ-ಭೋಗಪುರಂ-ದೆಹಲಿ ಸೇವೆಯನ್ನು ಸಹ ರದ್ದುಗೊಳಿಸಲಾಗಿದೆ.

ಹವಾಮಾನ ಪರಿಸ್ಥಿತಿಯಲ್ಲಿನ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ವಿಮಾನಯಾನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಪರಿಶೀಲನಾ ಸಭೆ ನಡೆಸಿತು. ಈ ಸಂದರ್ಭದಲ್ಲಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಭಾರತೀಯ ಹವಾಮಾನ ಇಲಾಖೆ, ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳ ನಿರ್ವಾಹಕರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಡುವೆ ಸಮನ್ವಯ ಸಾಧಿಸುವಂತೆ ಒತ್ತಿಹೇಳಲಾಯಿತು.

ಚಂಡಮಾರುತದ ಹಿನ್ನೆಲೆಯಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳ ರದ್ದತಿ ಮತ್ತು ಕಾರ್ಯಾಚರಣೆಯ ಬದಲಾವಣೆಗಳನ್ನು ಘೋಷಿಸಿವೆ.

ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಮತ್ತು ಒಡಿಶಾದಲ್ಲಿ ರಸ್ತೆಗಳ ಮೇಲೆ ನೀರು ನಿಲ್ಲುವ ಹಾಗೂ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ವಿಮಾನ ನಿಲ್ದಾಣಗಳನ್ನು ತಲುಪುವ ಪ್ರಯಾಣಿಕರಿಗೆ ತೊಂದರೆಯಾಗಬಹುದು.