ನವದೆಹಲಿ: ಮುಂದಿನ ಕೆಲವು ಗಂಟೆಗಳ ಕಾಲ ಆಂಧ್ರ ಪ್ರದೇಶ (Andhra Pradesh) ಮತ್ತು ಒಡಿಶಾದಲ್ಲಿ (odisha) ಭಾರಿ ಗಾಳಿ, ಮಳೆಯಾಗುವ (heavy rain) ಸಾಧ್ಯತೆ ಇದೆ. ಅತ್ಯಂತ ಶಕ್ತಿಯುತವಾದ ಅರ್ನಾಬ್ ಚಂಡಮಾರುತವು (Arnab Cyclone) ಬುಧವಾರ ಮುಂಜಾನೆ ಆಂಧ್ರಪ್ರದೇಶ ಕರಾವಳಿಯನ್ನು ತಲುಪಿದೆ. ಇದರ ಪರಿಣಾಮವಾಗಿ ಗಂಟೆಗೆ 140 ಕಿ.ಮೀ ವೇಗದ ಗಾಳಿ ಬೀಸುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (India Meteorological Department) ನೀಡಿದೆ. ಅರ್ನಾಬ್ ಚಂಡ ಮಾರುತವನ್ನು ಮೂರನೇ ಅತೀ ಹೆಚ್ಚಿನ ತೀವ್ರತೆಯ ಚಂಡ ಮಾರುತ ಎಂದು ಪರಿಗಣಿಸಲಾಗಿದೆ.
ಅತ್ಯಂತ ತೀವ್ರ ಸ್ವರೂಪದ ಚಂಡಮಾರುತಗಳಲ್ಲಿ ಅರ್ನಾಬ್ ಚಂಡಮಾರುತ ಮೂರನೇ ತೀವ್ರ ಸ್ವರೂಪದ್ದಾಗಿದೆ. ಅಂತಾರಾಷ್ಟ್ರೀಯ ಹವಾಮಾನ ಇಲಾಖೆಯು ಚಂಡಮಾರುತವನ್ನು ಕೆಳಗಿನಿಂದ ಮೇಲಕ್ಕೆ ಕ್ರಮವಾಗಿ ಒಟ್ಟು ಏಳು ತೀವ್ರತೆಯ ಹಂತವನ್ನು ಗುರುತಿಸಿದೆ. ಅವುಗಳಲ್ಲಿ ವಾಯುಭಾರ ಕುಸಿತ, ತೀವ್ರ ವಾಯುಭಾರ ಕುಸಿತ, ಚಂಡಮಾರುತ, ತೀವ್ರ ಚಂಡಮಾರುತ, ಅತ್ಯಂತ ತೀವ್ರ ಚಂಡಮಾರುತ, ಅತ್ಯಂತ ತೀವ್ರ ತರಹದ ಚಂಡಮಾರುತ, ಮಹಾ ಚಂಡಮಾರುತ. ಇದರಲ್ಲಿ ಅರ್ನಾಬ್ ಚಂಡಮಾರುತವು ಅತ್ಯಂತ ತೀವ್ರ ಚಂಡಮಾರುತ ಎಂದು ಗುರುತಿಸಿದ್ದು ಮೇಲಿನಿಂದ ಮೂರನೇ ಸ್ಥಾನದಲ್ಲಿದೆ.
120 ಎಕರೆ ಪ್ರದೇಶದಲ್ಲಿ ಬುಡಕಟ್ಟು ವಿವಿ: ವಾಲ್ಮೀಕಿ ಜಯಂತಿಯಲ್ಲಿ ಸಚಿವ ಟಿ.ರಘುಮೂರ್ತಿ ಘೋಷಣೆ
ಬುಧವಾರ ಬೆಳಗ್ಗೆ 6.30ಕ್ಕೆ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ ಅರ್ನಾಬ್ ಚಂಡಮಾರುತವು ಆಂಧ್ರಪ್ರದೇಶ, ಯಾನಂ ಕರಾವಳಿಯ ಸಮೀಪ, ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿದೆ. ಇದು ನರಸಾಪುರದಿಂದ ಪೂರ್ವಕ್ಕೆ ಸುಮಾರು 30 ಕಿ.ಮೀ., ಯಾನಂನಿಂದ ದಕ್ಷಿಣ- ನೈಋತ್ಯಕ್ಕೆ 45 ಕಿ.ಮೀ., ಕಾಕಿನಾಡೆಯಿಂದ ದಕ್ಷಿಣ- ನೈಋತ್ಯಕ್ಕೆ 70 ಕಿ.ಮೀ. ಮತ್ತು ಮಚಿಲಿಪಟ್ಟಣದಿಂದ ಪೂರ್ವ- ಈಶಾನ್ಯಕ್ಕೆ 90 ಕಿ.ಮೀ. ದೂರದಲ್ಲಿತ್ತು. ಈ ಚಂಡಮಾರುತ ಬಹುತೇಕ ಒಂದೇ ಕಡೆ ಸ್ಥಿರಗೊಂಡಿದ್ದು, ಕೆಲವು ಗಂಟೆಗಳಲ್ಲಿ ಕರಾವಳಿಯನ್ನು ದಾಟಿ ಬರುವ ನಿರೀಕ್ಷೆ ಇದೆ.
ಇದರಿಂದಾಗಿ ಗಂಟೆಗೆ 115- 125 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು ಕೆಲವೊಮ್ಮೆ 140 ಕಿ.ಮೀ ವೇಗವನ್ನು ತಲುಪಬಹುದು. ಸಮುದ್ರದ ಅಲೆಗಳು ಸಾಮಾನ್ಯ ಮಟ್ಟಕ್ಕಿಂತ 1 ರಿಂದ 1.5 ಮೀಟರ್ಗಳಷ್ಟು ಏರಿಕೆಯಾಗಲಿದೆ. ಭಾರಿ ಮಳೆಯಿಂದ ಆಂಧ್ರಪ್ರದೇಶದ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಅರ್ನಾಬ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸುಮಾರು 1,80,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 8.30 ರಿಂದ ಬುಧವಾರ ಬೆಳಗ್ಗೆ 5.30 ರ ನಡುವೆ ವಿಶಾಖಪಟ್ಟಣದಲ್ಲಿ ಅತಿ ಹೆಚ್ಚು ಅಂದರೆ 216 ಮಿ.ಮೀ ಮಳೆಯಾಗಿದೆ. ಬಳಿಕ ಕಾಳಿಂಗಪಟ್ಟಣದಲ್ಲಿ 147 ಮಿ.ಮೀ., ಕಾಕಿನಾಡದಲ್ಲಿ 118 ಮಿ.ಮೀ. ಮತ್ತು ಮಚಿಲಿಪಟ್ಟಣದಲ್ಲಿ 115 ಮಿ.ಮೀ. ಮಳೆಯಾಗಿದೆ.
ವಿಮಾನ, ರೈಲುಗಳು ರದ್ದು
ಭಾರಿ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಬುಧವಾರ ವಿಶಾಖಪಟ್ಟಣ ಮತ್ತು ವಿಜಯವಾಡಕ್ಕೆ ನಿಗದಿಯಾಗಿದ್ದ ವಿಮಾನಯಾನಗಳನ್ನು ವಿವಿಧ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ. ಒಡಿಶಾದ ಗಂಜಾಂ ಮತ್ತು ಬಾಲಸೋರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಶಾಲೆಗಳನ್ನು ಮುಚ್ಚಲಾಗಿದ್ದು, ಕೆಲವು ರೈಲು ಸೇವೆಗಳನ್ನು ಸಹ ರದ್ದುಗೊಳಿಸಲಾಗಿದೆ.
ಅರ್ನಬ್ ಹೆಸರೇಕೆ?
ಬಾಂಗ್ಲಾದೇಶವು ಈ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಟ್ಟಿದೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಏಷ್ಯಾ ಹಾಗೂ ಪೆಸಿಫಿಕ್ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಚಂಡಮಾರುತಗಳ ಸಮಿತಿಯು 2020 ರಲ್ಲಿ ಅಂಗೀಕರಿಸಿದ ಉಷ್ಣವಲಯದ ಚಂಡಮಾರುತಗಳ ಅಧಿಕೃತ ಪಟ್ಟಿಯಲ್ಲಿ ಈ ಹೆಸರನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕಝಕಿಸ್ತಾನ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಸೇರಿ ಒಟ್ಟು 13 ದೇಶಗಳು ಸೂಚಿಸಿದ ಹೆಸರುಗಳಿವೆ. ಪ್ರತಿಯೊಂದು ದೇಶವು ತಲಾ 13 ಹೆಸರುಗಳನ್ನು ನೀಡಿದ್ದು, ಒಟ್ಟು ಹೆಸರುಗಳ ಸಂಖ್ಯೆ 169 ಆಗಿದೆ.
ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರವನ್ನು ಒಳಗೊಂಡಿರುವ ಉತ್ತರ ಹಿಂದೂ ಮಹಾಸಾಗರದಲ್ಲಿ ಉಷ್ಣವಲಯದ ಚಂಡಮಾರುತಗಳು ಉಂಟಾದಾಗ ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತದೆ. 'ಅರ್ನಬ್' ಎಂಬ ಪದವು ಬಂಗಾಳಿ ಭಾಷೆಯಲ್ಲಿ ಸಾಗರ ಅಥವಾ ಸಮುದ್ರ ಎನ್ನುವ ಅರ್ಥವನ್ನು ನೀಡುತ್ತದೆ.
ಆಂಧ್ರಪ್ರದೇಶದ ಕರಾವಳಿ ಪ್ರದೇಶ ಯಾನಂ ಮತ್ತು ಬಾಪಟ್ಲಾ ಸಮೀಪ ಬುಧವಾರ ಬೆಳಗ್ಗೆ ಅಪ್ಪಳಿಸಿರುವ ಈ ಚಂಡಮಾರುತದ ಗಾಳಿಯ ವೇಗ ಗಂಟೆಗೆ 125 ರಿಂದ 135 ಕಿಲೋಮೀಟರ್ ಆಗಿದೆ. ಗರಿಷ್ಠ 150 ಕಿಲೋಮೀಟರ್ ವೇಗದ ವರೆಗೆ ಬೀಸುವ ಬಿರುಗಾಳಿಯನ್ನು ಇದು ಸೃಷ್ಟಿಸಿದೆ.