ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುರ್ಬಲಗೊಳ್ಳುತ್ತಿರುವ ಅರ್ನಾಬ್ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಇನ್ನಷ್ಟು ಮಳೆ ಎಚ್ಚರಿಕೆ

ಕಳೆದೆರಡು ದಿನಗಳಿಂದ ಅರ್ನಾಬ್ ಚಂಡಮಾರುತದ ಪರಿಣಾಮ ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದು ಗುರುವಾರವೂ ಮುಂದುವರಿಯುವ ನಿರೀಕ್ಷೆ ಇದೆ. ಬುಧವಾರ ತಡರಾತ್ರಿ ಬಳಿಕ ಚಂಡ ಮಾರುತ ದುರ್ಬಲಗೊಂಡಿದ್ದು, ತೀವ್ರ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಭಾರಿ ಗಾಳಿ, ಮಳೆಗೆ ಸುಮಾರು ಐದು ಮಂದಿ ಸಾವನ್ನಪ್ಪಿದ್ದಾರೆ.

ಸಂಗ್ರಹ ಚಿತ್ರ

ಆಂಧ್ರ ಪ್ರದೇಶ: ಅರ್ನಾಬ್ ಚಂಡಮಾರುತ (Arnab Cyclone) ದುರ್ಬಲವಾಗುತ್ತಿದ್ದು ಆಂಧ್ರ ಪ್ರದೇಶ (Andhra Pradesh), ಒಡಿಶಾದಲ್ಲಿ (Odisha) ಮತ್ತಷ್ಟು ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಈಗಾಗಲೇ ಭಾರಿ ಗಾಳಿ, ಮಳೆಗೆ ಸುಮಾರು ಐದು ಮಂದಿ ಸಾವನ್ನಪ್ಪಿದ್ದು ಹಲವಾರು ಭಾಗಗಳಲ್ಲಿ ಸಾರ್ವಜನಿಕ ಮೂಲಸೌಕರ್ಯಗಳಿಗೆ ಅಪಾರ ಹಾನಿಯುಂಟಾಗಿದೆ. ಆಂಧ್ರಪ್ರದೇಶದ ಉತ್ತರ ಕರಾವಳಿ, ಒಡಿಶಾ, ಛತ್ತೀಸ್‌ಗಢ ಮತ್ತು ತೆಲಂಗಾಣದ ಭಾಗಗಳಲ್ಲಿ ಬುಧವಾರ ತಡರಾತ್ರಿ ಅರ್ನಾಬ್ ಚಂಡಮಾರುತವು ತೀವ್ರವಾಗಿ ದುರ್ಬಲಗೊಂಡಿತು ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.

ಒಡಿಶಾದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಕೆಲವೆಡೆ ರಸ್ತೆಗಳು ಜಲಾವೃತಗೊಂಡಿವೆ, ಮರಗಳು ಧರೆಗುರುಳಿವೆ. ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಗಣಿಸಿ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಗುರುವಾರ ಹಳದಿ ಮತ್ತು ಕಿತ್ತಳೆ ಹವಾಮಾನ ಎಚ್ಚರಿಕೆ ನೀಡಲಾಗಿದೆ.

ಹಿಂಸಾತ್ಮಕ ಆಡಳಿತ ಬದಲಾವಣೆಗೆ ಪ್ರತಿಭಟನೆ ನಡೆಸಿದರೆ ಸರ್ಕಾರಿ ಉದ್ಯೋಗವಿಲ್ಲ; ಕಠಿಣ ನಿಯಮ ಜಾರಿ

ಹವಾಮಾನ ಇಲಾಖೆ ನೀಡಿರುವ ಮಾಹಿತಿಯಲ್ಲಿ, ಆಳವಾದ ವಾಯುಭಾರ ಕುಸಿತ ಉಂಟಾಗಿ ದುರ್ಬಲಗೊಂಡಿರುವ ಚಂಡಮಾರುತವು ಬುಧವಾರ ತಡರಾತ್ರಿ 15 ಕಿ.ಮೀ. ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಉತ್ತರ ಕರಾವಳಿ ಆಂಧ್ರಪ್ರದೇಶ, ದಕ್ಷಿಣ ಒಡಿಶಾ, ದಕ್ಷಿಣ ಛತ್ತೀಸ್‌ಗಢ ಮತ್ತು ಈಶಾನ್ಯ ತೆಲಂಗಾಣ, ಒಡಿಶಾದ ಮಲ್ಕನ್‌ಗಿರಿಯ ದಕ್ಷಿಣಕ್ಕೆ ಸುಮಾರು 60 ಕಿ.ಮೀ., ಆಂಧ್ರಪ್ರದೇಶದ ಪಾಡೇರುವಿನ ಪಶ್ಚಿಮ-ನೈಋತ್ಯಕ್ಕೆ 90 ಕಿ.ಮೀ., ಛತ್ತೀಸ್‌ಗಢದ ಜಗದಲ್‌ಪುರದಿಂದ 140 ಕಿ.ಮೀ. ದಕ್ಷಿಣಕ್ಕೆ ಮತ್ತು ತೆಲಂಗಾಣದ ಖಮ್ಮಂನಿಂದ ಪೂರ್ವ-ಈಶಾನ್ಯಕ್ಕೆ 190 ಕಿ.ಮೀ. ದೂರದಲ್ಲಿ ಇದು ಕೇಂದ್ರೀಕೃತವಾಗಿದೆ ಎಂದು ತಿಳಿಸಿದೆ.

ಒಡಿಶಾದ ಒಂಬತ್ತು ಜಿಲ್ಲೆಗಳಲ್ಲಿ ಗುರುವಾರ ಕಿತ್ತಳೆ ಎಚ್ಚರಿಕೆ ನೀಡಲಾಗಿದ್ದು, ಇದು ಭಾರೀ ಮಳೆಯಾಗುವ ಸೂಚನೆಯಾಗಿದೆ. ಉಳಿದಂತೆ ಹಲವು ಭಾಗಗಳಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ. ಇದು ಸಾಧಾರಣ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ. ಛತ್ತೀಸ್‌ಗಢದ ಕೆಲವು ಭಾಗಗಳಲ್ಲಿ ಕಿತ್ತಳೆ, ಇನ್ನು ಕೆಲವು ಭಾಗಗಳಲ್ಲಿ ಹಳದಿ ಹಾಗೂ ಆಂಧ್ರಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ.

ನಾಗ್ಪುರದಲ್ಲಿ ಬಿಜೆಪಿ ಭದ್ರಕೋಟೆ ಭೇದಿಸಿದ ಅಭಿಜಿತ್ ವಾಂಜಾರಿ ಯಾರು?

ಆಂಧ್ರಪ್ರದೇಶದ ಭೂಪ್ರದೇಶಕ್ಕೆ ಬುಧವಾರ ಮುಂಜಾನೆ ಚಂಡಮಾರುತ ಪ್ರವೇಶಿಸಿದ್ದು, ಇದರಿಂದ ಉಂಟಾದ ಭಾರಿ ಗಾಳಿ ಮಳೆಯ ಪರಿಣಾಮ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ. ಇದರಿಂದ ಮೂವರು ಹಾಗೂ ಅನಕಾಪಲ್ಲಿ ಮತ್ತು ಭೀಮಾವರಂನಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯಾದ್ಯಂತ ಸುಮಾರು 15,000 ವಿದ್ಯುತ್ ಕಂಬಗಳು ಧರೆಗುರುಳಿವೆ. 14 ಜಿಲ್ಲೆಗಳಲ್ಲಿ 2,24,489 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗಿದ್ದು, ಬೆಳೆ, ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಕೇಂದ್ರ ತಂಡವೊಂದನ್ನು ಶೀಘ್ರವೇ ಕಳುಹಿಸಿಕೊಡುವಂತೆ ಕೋರಿದೆ.

ವಿದ್ಯಾ ಇರ್ವತ್ತೂರು

View all posts by this author