ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಕೊಲೆ ಬೆದರಿಕೆ: ಭದ್ರತೆ ಹೆಚ್ಚಿಸಲು ಗೃಹ ಸಚಿವಾಲಯಕ್ಕೆ ಮನವಿ

Chirag Paswan: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಭಯೋತ್ಪಾದಕರು ಶೀಘ್ರದಲ್ಲೇ ಹತ್ಯೆ ಮಾಡಲಿದ್ದಾರೆ ಎಂಬ ಸಂದೇಶ ಬಂದಿದ್ದು, ಅವರ ಕಚೇರಿ ಭದ್ರತೆ ಹೆಚ್ಚಿಸುವಂತೆ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ. ಈ ನಡುವೆ ಮೀಸಲಾತಿ ವಿಚಾರದಲ್ಲಿ ಎನ್‌ಡಿಎ ಮಿತ್ರ ಪಕ್ಷದೊಂದಿಗೆ ಅವರ ಭಿನ್ನಾಭಿಪ್ರಾಯವೂ ಚರ್ಚೆಗೆ ಗ್ರಾಸವಾಗಿದೆ.

ಚಿರಾಗ್ ಪಾಸ್ವಾನ್‌ (ಸಂಗ್ರಹ ಚಿತ್ರ)

ನವದೆಹಲಿ, ಸೆ. 1: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)ದ ಮುಖ್ಯಸ್ಥ ಚಿರಾಗ್ ಪಾಸ್ವಾನ್ (Chirag Paswan) ಅವರಿಗೆ ಮಂಗಳವಾರ (ಸೆಪ್ಟೆಂಬರ್‌ 1) ಹತ್ಯೆ ಬೆದರಿಕೆ ಸಂದೇಶ ಬಂದಿರುವುದಾಗಿ ಅವರ ಕಚೇರಿ ತಿಳಿಸಿದೆ. ಝಡ್‌ ಕೆಟಗರಿ ಭದ್ರತೆ ಹೊಂದಿರುವ ಪಾಸ್ವಾನ್ ಅವರಿಗೆ ಕಳುಹಿಸಲಾದ ಸಹಿ ಇಲ್ಲದ ಸಂದೇಶದಲ್ಲಿ, “ನಿಮ್ಮನ್ನು ಶೀಘ್ರದಲ್ಲೇ ಭಯೋತ್ಪಾದಕರು ಹತ್ಯೆ ಮಾಡಲಿದ್ದಾರೆ” ಎಂಬ ನೇರ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂದೇಶದಲ್ಲಿ ಎರಡು ಮೊಬೈಲ್ ಸಂಖ್ಯೆಗಳೂ ಇದ್ದವು.
ಈ ಬೆದರಿಕೆಯ ಹಿನ್ನೆಲೆಯಲ್ಲಿ ಪಾಸ್ವಾನ್ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಅವರ ಕಚೇರಿ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ.

ಅಲ್ಲದೆ, ಬೆದರಿಕೆ ಸಂದೇಶದ ಕುರಿತು ಸಮಗ್ರ ತನಿಖೆ ನಡೆಸುವಂತೆಯೂ ಗೃಹ ಸಚಿವಾಲಯವನ್ನು ಕೋರಲಾಗಿದೆ. ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರಿಗೆ ಬರೆದ ಪತ್ರದಲ್ಲಿ, ಪಾಸ್ವಾನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಅಲೋಕ್ ಕುಮಾರ್ ಸಿಂಗ್, ಬೆದರಿಕೆಯ ಸ್ವರೂಪ ಗಂಭೀರವಾಗಿದ್ದು, ಸಚಿವರ ಸುರಕ್ಷತೆ ಕುರಿತು ಆತಂಕ ಮೂಡಿಸಿದೆ ಎಂದು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಭಾರಿ ಮಳೆ: ನೈನಿತಾಲ್‌ನಲ್ಲಿ ಭೂಕುಸಿತ, 141 ರಸ್ತೆಗಳು ಬಂದ್; 5 ಮಂದಿ ಸಾವು

ಎನ್‌ಡಿಎ ಮಿತ್ರ ಪಕ್ಷದೊಂದಿಗೆ ಮೀಸಲಾತಿ ವಿಚಾರದಲ್ಲಿ ಪಾಸ್ವಾನ್‌ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಾಸ್ವಾನ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅತ್ಯಂತ ಹಿಂದುಳಿದ ದಲಿತ ಸಮುದಾಯಗಳಿಗೆ ಪ್ರತ್ಯೇಕ ಉಪ-ಕೋಟಾ ನೀಡುವ ವಿಚಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಈ ಬೆದರಿಕೆ ಸಂದೇಸ ಬಂದಿದೆ.

“ಒಂದು ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಹೆಸರಿನಲ್ಲಿ ಮತ್ತೊಂದು ವರ್ಗದ ಶೋಷಣೆ ನಡೆಯಬಾರದು” ಎಂದು ಪಾಸ್ವಾನ್ ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ಮೇಲ್ವರ್ಗದವರ ಆತಂಕಗಳನ್ನೂ ಸರ್ಕಾರ ಪರಿಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಬಿಹಾರ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಉಪ-ವರ್ಗೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪಾಸ್ವಾನ್ ಅವರ ನಿಲುವು ಎನ್‌ಡಿಎ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಮುನ್ನೆಲೆಗೆ ತಂದಿದೆ. ಪಾಸ್ವಾನ್ ವಿವಿಧ ಸಾಮಾಜಿಕ ವರ್ಗಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವುದೇ ತಮ್ಮ ಉದ್ದೇಶ ಎಂದು ಹೇಳಿದ್ದು, ಎಲ್ಲ ಜಾತಿ ಮತ್ತು ವರ್ಗಗಳ ಹಿತಾಸಕ್ತಿಗಳನ್ನು ಒಟ್ಟಾಗಿ ಕೊಂಡೊಯ್ಯುವ ನಿಲುವನ್ನು ಲೋಕ ಜನಶಕ್ತಿ ಪಕ್ಷ ಹೊಂದಿದೆ ಎಂದು ತಿಳಿಸಿದ್ದಾರೆ.