ಮುಂಬೈ, ಡಿ. 16: ಪಡೆದಿದ್ದ 1 ಲಕ್ಷ ರುಪಾಯಿ ಸಾಲವನ್ನು ತೀರಿಸಲು ಸಾಧ್ಯವಾಗದೆ ಮಹಾರಾಷ್ಟ್ರದ ರೈತ (Maharashtra farmer) ಕಾಂಬೋಡಿಯಾಕ್ಕೆ ಹೋಗಿ ಮೂತ್ರಪಿಂಡ (Kidney) ಮಾರಾಟ ಮಾಡಿದ್ದಾರೆ. ಸಾಲಕ್ಕೆ ದಿನಕ್ಕೆ ಹತ್ತು ಸಾವಿರ ರುಪಾಯಿ ಬಡ್ಡಿ ಬಂದಿದ್ದರಿಂದ ಅವರ ಸಾಲ 74 ಲಕ್ಷ ರುಪಾಯಿಗೆ ಏರಿದೆ. ಹೀಗಾಗಿ ರೈತ ಈ ನಿರ್ಧಾರ ತೆಗೆದುಕೊಂಡಿದ್ದು, ಸದ್ಯ ಅವರ ಈ ಹೃದಯ ವಿದ್ರಾವಕ ಕಥೆ ಕೇಳಿ ಇಡೀ ದೇಶವೇ ಕಂಬನಿ ಮಿಡಿದಿದೆ.
ಚಂದ್ರಾಪುರ ಜಿಲ್ಲೆಯ ರೈತ ರೋಷನ್ ಸದಾಶಿವ್ ಕುಡೆ ಕೃಷಿಯಲ್ಲಿ ನಿರಂತರ ನಷ್ಟವನ್ನು ಅನುಭವಿಸುತ್ತಿದ್ದರು. ಹೀಗಾಗಿ ಡೈರಿ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಹೀಗಾಗಿ ಅವರು ಹಲವು ಲೇವಾದೇವಿಗಾರರಿಂದ 1 ಲಕ್ಷ ರುಪಾಯಿ ಸಾಲ ಪಡೆದರು.
ಹೈನುಗಾರಿಕೆ ವ್ಯವಹಾರ ಆರಂಭವಾಗುವ ಮೊದಲೇ ಅವರು ಖರೀದಿಸಿದ ಹಸುಗಳು ಸತ್ತವು. ಅವರು ಹೊಂದಿದ್ದ ಜಮೀನಿನಲ್ಲಿ ಬೆಳೆಗಳು ಚೆನ್ನಾಗಿ ಬರಲಿಲ್ಲ. ಸಾಲದ ಸುಳಿ ಬಿಗಿಯಾಗಲು ಪ್ರಾರಂಭಿಸಿತು. ಮೀಟರ್ ಬಡ್ಡಿ ಸಾಲ ನೀಡಿದವರು ಅವರ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದರು.
ನಂತರ ರೈತ ಸಾಲವನ್ನು ತೀರಿಸಲು ತನ್ನ ಭೂಮಿ, ಟ್ರ್ಯಾಕ್ಟರ್ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಮಾರಿದರು. ಆದರೆ ಅದು ಸಾಕಾಗಲಿಲ್ಲ. ಸಾಲ ಇನ್ನೂ ಉಳಿದಾಗ ಒಬ್ಬ ಸಾಲಗಾರ ಅವರ ಮೂತ್ರಪಿಂಡವನ್ನು ಮಾರಾಟ ಮಾಡಲು ಸಲಹೆ ನೀಡಿದನು. ಏಜೆಂಟ್ ಮೂಲಕ ಅವರು ಕೋಲ್ಕತ್ತಾಗೆ ಹೋಗಿ, ಪರೀಕ್ಷೆಗಳಿಗೆ ಒಳಗಾದರು. ನಂತರ ಕಾಂಬೋಡಿಯಾಕ್ಕೆ ಹೋಗಿ ಮೂತ್ರಪಿಂಡವನ್ನು 8 ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದಾರೆ.
ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2,800 ರೈತರು ಆತ್ಮಹತ್ಯೆ
ಇಷ್ಟಾದರೂ ಸಾಲ ಕೊಟ್ಟವರ ಕಿರುಕುಳ ಮಾತ್ರ ಅಷ್ಟಕ್ಕೇ ನಿಂತಿಲ್ಲ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅವರು ಮಾನಸಿಕ ಮತ್ತು ದೈಹಿಕವಾಗಿ ಬಳಲಿದ್ದಾರೆ. ನ್ಯಾಯ ಸಿಗದಿದ್ದರೆ, ರಾಜ್ಯ ಸರ್ಕಾರದ ಪ್ರಧಾನ ಕಚೇರಿಯಾಗಿರುವ ಮುಂಬೈನಲ್ಲಿರುವ ಮಂತ್ರಾಲಯದ ಮುಂದೆ ತಾವು ಮತ್ತು ತಮ್ಮ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಸಾಲ ನೀಡಿದವರನ್ನು ಕಿಶೋರ್ ಬವಾಂಕುಲೆ, ಮನೀಶ್ ಕಲ್ಬಂಡೆ, ಲಕ್ಷ್ಮಣ್ ಉರ್ಕುಡೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್ಪುರೆ ಮತ್ತು ಲಕ್ಷ್ಮಣ್ ಬೋರ್ಕರ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಬ್ರಹ್ಮಪುರಿ ಪಟ್ಟಣದ ನಿವಾಸಿಗಳು. ಸದ್ಯ ರೈತ ರೋಷನ್ ಸದಾಶಿವ್ ಕುಡೆ ಅವರ ಕರುಣಾಜನಕ ಕಥೆ ಹಲವರ ಕಣ್ಣಲ್ಲಿ ನೀರು ತರಿಸಿದೆ. ಜತೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೀಟರ್ ಬಡ್ಡಿ ದಂಧೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.