ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

43 ವಿವಿಐಪಿ ಝೋನ್‌ ಮೂಲಕ ಕಾರ್‌ ಸಾಗಿದರೂ ಸ್ಫೋಟಕ ಪತ್ತೆಯಾಗಿಲ್ಲ; ಭದ್ರತಾ ಲೋಪ ದೆಹಲಿ ಬಾಂಬರ್‌ ಉಮರ್‌ಗೆ ನೆರವಾಯಿತೆ?

ನವೆಂಬರ್‌ 10ರಂದು ಸಂಭವಿಸಿದ ದೆಹಲಿಯ ಕೆಂಪು ಕೋಟೆ ಬಳಿಯ ಕಾರ್‌ ಸ್ಫೋಟಕ್ಕೆ ಸಂಬಂಧಿಸಿದ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿದೆ. ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ, ಹರಿಯಾಣದ ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ವೈದ್ಯ ಡಾ. ಉಮರ್‌ ಮೊಹಮ್ಮದ್‌ ಚಲಾಯಿಸುತ್ತಿದ್ದ ಹ್ಯುಂಡೈ ಐ20 ಕಾರ್‌ ಸ್ಫೋಟಿಸಿ 13 ಮಂದಿಯ ಸಾವಿಗೆ ಕಾರಣವಾಗಿದ್ದ. ಈ ಕಾರ್‌ ಸುಮಾರು 43 ವಿವಿಐಪಿ ವಲಯವನ್ನು ದಾಟಿ ಬಂದರೂ ಭದ್ರತಾ ಪಡೆಗಳ ಕಣ್ಣಿಗೆ ಬೀಳಲಿಲ್ಲವೇ ಎನ್ನುವ ಅನುಮಾನ ಕಾಡುತ್ತಿದೆ.

ದೆಹಲಿಯಲ್ಲಿ ಬಾಂಬ್‌ ಸ್ಫೋಟ ನಡೆದ ಸ್ಥಳ (ಸಂಗ್ರಹ ಚಿತ್ರ).

ದೆಹಲಿ, ನ. 16: ನವೆಂಬರ್‌ 10ರ ಸಂಜೆ 7 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿ ಎಂದಿನಂತಿರಲಿಲ್ಲ. ಕೆಂಪು ಕೋಟೆ ಮೆಟ್ರೋ ಸ್ಟೇಷನ್‌ ಮುಂಭಾಗ ಕಾರ್‌ ಸ್ಫೋಟಿಸಿ ಉಗ್ರರು 13 ಮಂದಿಯನ್ನು ಬಲಿ ಪಡೆದುಕೊಂಡಿದ್ದರು (Delhi Blast). ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ, ಹರಿಯಾಣದ ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ವೈದ್ಯ ಡಾ. ಉಮರ್‌ ಮೊಹಮ್ಮದ್‌ ಚಲಾಯಿಸುತ್ತಿದ್ದ ಹ್ಯುಂಡೈ ಐ20 ಕಾರ್‌ ಸ್ಫೋಟಗೊಂಡಿತ್ತು. ಭಾರಿ ಭದ್ರತೆ ಹೊಂದಿರುವ ದೆಹಲಿಯಲ್ಲಿ ಸ್ಫೋಟ ನಡೆದಿದ್ದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಸ್ಫೋಟಕ ಹೊಂದಿರುವ ಕಾರ್‌ ಸುಮಾರು 43 ವಿವಿಐಪಿ ವಲಯವನ್ನು ದಾಟಿ ಬಂದಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಹಾಗಾದರೆ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಭದ್ರತಾ ಲೋಪ ನಡೆದಿದ್ಯಾ? ಸದ್ಯ ಹೀಗೊಂದು ಚರ್ಚೆ ನಡೆಯುತ್ತಿದೆ.

ನವೆಂಬರ್‌ 10ರಂದು ಕಾರ್‌ ಚಲಾಯಿಸಿಕೊಂಡು ಬಂದಿದ್ದ ಉಮರ್‌ ಕೆಂಪು ಕೋಟೆ ಸಮೀಪದ ಪಾರ್ಕಿಂಗ್‌ ಏರಿಯಾಕ್ಕೆ ಅಪರಾಹ್ನ 3.19ಕ್ಕೆ ತಲುಪಿದ್ದ. ಬಳಿಕ ಸುಮಾರು 3 ಗಂಟೆಗಳ ಕಾಲ ಅಲ್ಲೇ ತಂಗಿದ್ದ ಆತ ತೆರಳಿದ್ದು ಸಂಜೆ 6.28ಕ್ಕೆ. ಸುಮಾರು 6.55ಕ್ಕೆ ಕಾರು ಸ್ಫೋಟಗೊಂಡಿತು.

ಉಮರ್‌ ಚಲಾಯಿಸುತ್ತಿದ್ದ ಕಾರ್‌ ಇಂಡಿಯಾ ಗೇಟ್‌, ಕನ್ನಾಟ್ ಪ್ಲೇಸ್‌ನಂತಹ ಭಾರಿ ಭದ್ರತೆ ಹೊಂದಿರುವ ಸುಮಾರು 43 ವಿವಿಐಪಿ ವಲಯವನ್ನು ದಾಟಿ ಕೆಂಪು ಕೋಟೆ ಸಮೀಪಕ್ಕೆ ತಲುಪಿದೆ. ಅಚ್ಚರಿ ಎಂದರೆ ಎಲ್ಲೂ ತಪಾಸಣೆಗಾಗಿ ಕಾರನ್ನು ನಿಲ್ಲಿಸಿಲ್ಲ. ಕಾರ್‌ನ ಹಿಂಭಾಗ ಸ್ಫೋಟಕ ವಸ್ತುಗಳಿದ್ದರೂ ಯಾರ ಕಣ್ಣಿಗೆ ಬೀಳದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಕ್ಟೋಬರ್‌ 30ರಂದು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ, ಹರಿಯಾಣದ ಫರಿದಾಬಾದ್‌ನ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಝಮ್ಮಿಲ್ ಗನೈನನ್ನು ಬಂಧಿಸಲಾಗಿತ್ತು. ಈತನೊಂದಿಗೆ ಒಡನಾಟ ಹೊಂದಿದ್ದ ಉಮರ್‌ನ ಬಗ್ಗೆ ಆ ವೇಳೆ ಅನುಮಾನ ಮೂಡಿರಲಿಲ್ಲವೇ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಅಲ್ಲದೆ ಉಮರ್‌ ಸ್ಫೋಟಿಸಿದ ಕಾರು ಅಲ್‌ ಫಲಾಹ್‌ ವಿವಿಯಲ್ಲಿ ಅನೇಕ ದಿನಗಳ ಕಾಲ ಪಾರ್ಕ್‌ ಮಾಡಲ್ಪಟ್ಟಿತ್ತು. ಇದು ಭದ್ರತಾ ಲೋಪ ಮಾತ್ರವಲ್ಲ ವಿಪತ್ತನ್ನು ಬಾಗಿಲು ತೆರೆದು ಆಹ್ವಾನಿಸಿದಂತೆ ಇತ್ತು ಪರಿಸ್ಥಿತಿ ಎನ್ನುವುದು ಕೆಲವರ ವಾದ. ಸದ್ಯ ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Delhi Blast: ಆ 3 ಗಂಟೆಯ ರಹಸ್ಯ; ದೆಹಲಿ ಸ್ಫೋಟಕ್ಕೂ ಮುನ್ನ ಕಾರು ನಿಲ್ಲಿಸಿ ಬಾಂಬರ್‌ ಮಾಡಿದ್ದೇನು?

ಉಮರ್‌ ಟ್ರಾವೆಲ್‌ ಹಿಸ್ಟ್ರಿ

ಉಮರ್‌ ಚಾಲಾಯಿಸುತ್ತಿದ್ದ ಕಾರು ನವೆಂಬರ್‌ 10ರ ಬೆಳಗ್ಗೆ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಿಂದ ಹೊರಟಿರುವುದು ತನಿಖೆ ವೇಳೆ ಗೊತ್ತಾಗಿದೆ. ಕಾರು ಬೆಳಗ್ಗೆ 8.13ಕ್ಕೆ ಬದರ್ಪುರದ ಹರಿಯಾಣ-ದೆಹಲಿ ಗಡಿಯಲ್ಲಿರುವ ಟೋಲ್ ಪ್ಲಾಜಾವನ್ನು ದಾಟುತ್ತಿರುವುದನ್ನು ಕಂಡುಬಂದಿದೆ. ನಂತರ ಅದು ಮಯೂರ್ ವಿಹಾರ್ ಮತ್ತು ಕನ್ನಾಟ್ ಪ್ಲೇಸ್ ಮೂಲಕ ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳವನ್ನು ತಲುಪಿತು. ಈ ವೇಳೆ ಉಮರ್‌ ಹಳೆ ದೆಹಲಿಯ ಅಸಫ್ ಅಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕಾರನ್ನು ನಿಲ್ಲಿಸಿದ್ದ. ಸಿಸಿಟಿವಿ ದೃಶ್ಯಗಳಲ್ಲಿ ಆತ ಒಬ್ಬಂಟಿಯಾಗಿ ಕಾರಿನಲ್ಲಿ ಕುಳಿತಿರುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ವಿರಾಮದ ನಂತರ ಡ್ರೈವ್ ಮಾಡಿಕೊಂಡು ಪಾರ್ಕಿಂಗ್ ಏರಿಯಾಕ್ಕೆ ಬಂದಿದ್ದ. ಅಲ್ಲಿ ಸುಮಾರು 3 ಗಂಟೆಗಳ ಕಾಲ ಕಾಯುತ್ತಿದ್ದ.

Ramesh Ballamoole

View all posts by this author