Delhi Blast: ದೆಹಲಿ ಬಾಂಬ್ ಸ್ಫೋಟ: ಆರೋಪಿ ಪಡೆದದ್ದು ಬರೋಬ್ಬರಿ 20 ಲಕ್ಷ ರೂ.
ದೆಹಲಿಯ ಕೆಂಪು ಕೋಟೆಯ ಬಳಿ ಕಳೆದ ಸೋಮವಾರ ನಡೆದ ಬಾಂಬ್ ಸ್ಪೋಟಕ್ಕೆ ಕಾರಣವಾದ ಕಾರಿನ ಚಾಲಕ ಇದಕ್ಕಾಗಿ ಅಕ್ರಮವಾಗಿ ಬರೋಬ್ಬರಿ 20 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾನೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಹರಿಯಾಣದ ನುಹ್ ಮಾರುಕಟ್ಟೆಯಿಂದ ನಗದು ಪಾವತಿಸಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕ ಸಾಮಗ್ರಿಗಳನ್ನು ಖರೀದಿ ಮಾಡಿದ್ದಾನೆ ಎನ್ನಲಾಗಿದೆ.
ದೆಹಲಿ ಬಾಂಬ್ ಸ್ಫೋಟದ ಆರೋಪಿ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ (ಸಂಗ್ರಹ ಚಿತ್ರ) -
ನವದೆಹಲಿ: ಕಳೆದ ಸೋಮವಾರ ದೆಹಲಿಯ ಕೆಂಪುಕೋಟೆಯ ಬಳಿ ಉಂಟಾದ ಕಾರು ಬಾಂಬ್ ಸ್ಪೋಟದ (Terror attack) ಪ್ರಮುಖ ಆರೋಪಿ, ಕಾರು ಚಾಲಕ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ (Umar Mohammad alias Umar Nabi) ಅಕ್ರಮವಾಗಿ 20 ಲಕ್ಷ ರೂ.ಗಳನ್ನು ಪಡೆದುಕೊಂಡಿರುವುದು ಆತನ ವಹಿವಾಟುಗಳ ಮೂಲಕ ತಿಳಿದುಬಂದಿದೆ. ಆತ ಹರಿಯಾಣದ (Haryana) ನುಹ್ ಮಾರುಕಟ್ಟೆಯಲ್ಲಿ ನಗದು ಪಾವತಿಸಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕ ಸಾಮಗ್ರಿಗಳನ್ನು ಖರೀದಿ ಮಾಡಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಉಂಟಾಗಿದ್ದ ಬಾಂಬ್ ಸ್ಪೋಟದಲ್ಲಿ ಸುಮಾರು 13 ಮಂದಿ ಸಾವನ್ನಪ್ಪಿದ್ದರು.
ದೆಹಲಿಯಲ್ಲಿ ಕಳೆದ ಸೋಮವಾರ ಬಾಂಬ್ ಸ್ಫೋಟ ನಡೆಸಲು ಐ20 ಕಾರನ್ನು ಬಳಸಲಾಗಿತ್ತು. ಇದರ ಚಾಲಕ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಅಕ್ರಮ ಮಾರ್ಗಗಳ ಮೂಲಕ ಸುಮಾರು 20 ಲಕ್ಷ ರೂ. ಗಳನ್ನು ಪಡೆದುಕೊಂಡಿದ್ದನು. ಇದರಿಂದ ಆತ ಹರಿಯಾಣದ ನುಹ್‌ನ ಮಾರುಕಟ್ಟೆಯಲ್ಲಿ ನಗದು ಪಾವತಿಸಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದಾನೆ ಎಂದು ಭಯೋತ್ಪಾದಕ ದಾಳಿಯ ಬಳಿಕ ನಡೆದ ತನಿಖೆಗಳಿಂದ ಬಹಿರಂಗವಾಗಿದೆ. ಈ ಪ್ರಕರಣದ ಕುರಿತು ವಿಚಾರಣೆಗಾಗಿ ಹಲವಾರು ಹವಾಲಾ ಡೀಲರ್‌ಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Bigg Boss Kannada 12: ಕಾಡಿ ಬೇಡಿ ಬಿಗ್ ಬಾಸ್ ಮನೆ ಒಳಗೆ ಹೋಗಿರೋದು ಯಾರು? ಜಾಹ್ನವಿಗೆ ಕಿಚ್ಚನ ನೇರ ಪ್ರಶ್ನೆ
ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ನಡೆದ ಬಿಳಿ ಹುಂಡೈ ಐ20 ಸ್ಫೋಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಲ್ಲದೇ ಸ್ಪೋಟದ ಪರಿಣಾಮ ಹತ್ತಿರದ ಹಲವಾರು ವಾಹನಗಳು ಹಾನಿಗೊಳಗಾಗಿವೆ.
ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಕೈವಾಡ ಇರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆ ಹಚ್ಚಿರುವ ತನಿಖಾ ತಂಡಗಳು ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದೆ. 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 1989ರಲ್ಲಿ ಜನಿಸಿದ ಮೊಹಮ್ಮದ್ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿದ್ದುದರಿಂದ, ವಿಶ್ವವಿದ್ಯಾಲಯದ ಸಂಪೂರ್ಣ ಕಾರ್ಯಾಚರಣೆಗಳನ್ನು ಈಗ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Shubman Gill: ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು; ಎರಡನೇ ಪಂದ್ಯಕ್ಕೆ ಅನುಮಾನ
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ಎನ್‌ಎಎಸಿ) ನಿಯಮ ಉಲ್ಲಂಘನೆಗಳ ಆಧಾರದಲ್ಲಿ ವಂಚನೆ ಮತ್ತು ನಕಲಿ ಆರೋಪ ಮಾಡಿದ ಬಳಿಕ ಅಪರಾಧ ವಿಭಾಗವು ವಿಶ್ವವಿದ್ಯಾಲಯದ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದೆ.
ದೆಹಲಿಯಲ್ಲಿ ಸ್ಪೋಟಕ್ಕೂ ಮೊದಲು ಮೊಹಮ್ಮದ್ ಯಾರನ್ನೆಲ್ಲ ಭೇಟಿಯಾಗಿದ್ದಾನೆ ಎನ್ನುವ ಕುರಿತು ಕೂಡ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಪಡೆದುಕೊಂಡಿದ್ದಾರೆ. ಅಲ್ಲದೇ ಮೊಹಮ್ಮದ್ ಅವರ ಛಾಯಾಚಿತ್ರವನ್ನು ಚಾಲಕರು ಮತ್ತು ವಾಹನ ಮಾಲೀಕರಿಗೆ ತೋರಿಸಿ ವಿಚಾರಣೆಯನ್ನು ನಡೆಸಲಾಗುತ್ತಿದೆ.