ನವದೆಹಲಿ: ನವೆಂಬರ್ 10 ರ ರಾತ್ರಿ ಸುಮಾರು 8.30 ರ ಸುಮಾರಿಗೆ ದೆಹಲಿ ಕೆಂಪು ಕೋಟೆಯ (Red Fort) ಮೆಟ್ರೋ ನಿಲ್ದಾಣದ ಬಳಿ ಹುಂಡೈ i20 ಕಾರೊಂದು ಸ್ಫೋಟಗೊಂಡು (Delhi Blast) ಎಂಟು ಜನರು ಮೃತಪಟ್ಟಿದ್ದಾರೆ. ಹಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಗೊಂಡಿದ್ದ ಹುಂಡೈ i20 ಕಾರನ್ನು ಶಂಕಿತ ಭಯೋತ್ಪಾದಕ ಡಾ. ಮೊಹಮ್ಮದ್ ಉಮರ್ (Dr Umar) ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಉಮರ್‌ನ ತಾಯಿ ಹಾಗೂ ಸಹೋದರನನ್ನು ಪುಲ್ವಾಮಾದಲ್ಲಿ ಬಂಧಿಸಲಾಗಿದೆ. ಸ್ಫೋಟಗೊಂಡ ಕಾರು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವ್ಯಕ್ತಿಯದ್ದು ಎಂದು ತನಿಖಾಧಿಕಾರಿಗಳು ತಿಳಿಸಿದ್ದು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ಕಾರು ಮೂಲತಃ ಗುರುಗ್ರಾಮ್‌ನಲ್ಲಿ HR26 ಸಂಖ್ಯೆಯಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ಮೊದಲು ಮೊಹಮ್ಮದ್ ಸಲ್ಮಾನ್ ಎಂಬಾತನ ಬಳಿ ಇತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ತಾರಿಕ್ ಮತ್ತು ಆತನ ಸಹಚರರ ಕುರಿತು ಮಾಹಿತಿ ಕಲೆ ಹಾಕಲು ಶ್ರೀನಗರಕ್ಕೆ ವಿಶೇಷ ತಂಡವನ್ನು ಕಳುಹಿಸಲಾಗಿದೆ. ಸ್ಫೋಟ ಸಂಭವಿಸಿದ ಸ್ಥಳದಿಂದ ವಿಧಿವಿಜ್ಞಾನ ತಂಡಗಳು ಅಮೋನಿಯಂ ನೈಟ್ರೇಟ್‌ನ ಕುರುಹುಗಳನ್ನು ವಶಪಡಿಸಿಕೊಂಡಿದ್ದು, ಸ್ಫೋಟಕ ಸಾಧನದಲ್ಲಿ ಅದರ ಬಳಕೆಯನ್ನು ಸೂಚಿಸಿವೆ. ಸ್ಫೋಟಕ್ಕೆ ಕಾರಣವೇನು ಮತ್ತು ದಾಳಿಯಲ್ಲಿ ತಾರಿಕ್‌ನ ನಿಖರವಾದ ಪಾತ್ರವನ್ನು ನಿರ್ಧರಿಸಲು ತನಿಖೆ ಮುಂದುವರೆದಿದೆ.
ಸ್ಫೋಟದ ಸ್ಥಳದಲ್ಲಿ ಕಾರಿನಲ್ಲಿದ್ದವರ ಅವಶೇಷ ಪತ್ತೆಯಾಗಿದ್ದು, ಕತ್ತರಿಸಿದ ಕೈಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಂಕಿತ ಉಗ್ರ ಉಮರ್‌ನ ದೇಹ ಎಂದು ಖಚಿತ ಪಡಿಸಿಕೊಳ್ಳಲು, ಆತನ ಕುಟುಂಬದಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಾಥಮಿಕ ವಿಧಿವಿಜ್ಞಾನ ಮೌಲ್ಯಮಾಪನಗಳು ಕೆಂಪು ಕೋಟೆ ಕಾರು ಸ್ಫೋಟದಲ್ಲಿ ಆರ್‌ಡಿಎಕ್ಸ್ ಬಳಕೆಯ ಸಾಧ್ಯತೆಯನ್ನು ಸೂಚಿಸುತ್ತವೆ.
ಈ ಸುದ್ದಿಯನ್ನೂ ಓದಿ: Delhi Blast: ಸ್ಫೋಟಕ್ಕೂ ಮುನ್ನ ದೆಹಲಿಯಲ್ಲಿ ಸುತ್ತಾಡಿದ್ದ ಕಾರಿನ ಸಿಸಿಟಿವಿ ದೃಶ್ಯಾವಳಿ ಲಭ್ಯ
ತಮ್ಮವನಲ್ಲ ಎಂದ ಕುಟುಂಬ!
ಸದ್ಯ ಬಂಧನದಲ್ಲಿರುವ ತಾರಿಕ್‌ನ ಕುಟುಂಬ ತಮಗೆ ಹಾಗೂ ಆತನಿಗೆ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ. ಕುಟುಂಬವು ತಾರಿಕ್ ಎಂಬ ಹೆಸರಿನ ಯಾರನ್ನೂ ತಿಳಿದಿಲ್ಲ ಎಂದು ಹೇಳಿದೆ. ಅಧಿಕಾರಿಗಳು ಆತನ ಸಹೋದರರಾದ ಅಮೀರ್ ರಶೀದ್ ಮತ್ತು ಉಮರ್ ರಶೀದ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಮೂರು ದಿನ ಮೆಟ್ರೋ ಬಂದ್
ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದ್ದರಿಂದ ಸದ್ಯ ಕೆಂಪು ಕೋಟೆ ಮೆಟ್ರೋ ನಿಲ್ದಾಣವನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ಇತರ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ದೆಹಲಿ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಭದ್ರತಾ ತಪಾಸಣೆ, ಕಣ್ಗಾವಲು ಮತ್ತು ಗಸ್ತುಗಳನ್ನು ತೀವ್ರಗೊಳಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಸ್ನಿಫರ್ ನಾಯಿಗಳನ್ನು ನಿಯೋಜಿಸಲಾಗಿದೆ.