ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಕಾರು ಸ್ಫೋಟ ಪ್ರಕರಣ: ಏಳನೇ ಆರೋಪಿ NIA ಬಲೆಗೆ

ನವೆಂಬರ್‌ 10ರಂದು ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ಏಳನೇ ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಈತ ಕಾರು ಬ್ಲಾಸ್ಟ್‌ ಆಗುವ ಮುನ್ನ ಪ್ರಕರಣದ ಮುಖ್ಯ ಆರೋಪಿ ಉಮರ್‌ ನಬಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ.

ಬಂಧಿತ ಆರೋಪಿ ಸೋಯಾಬ್‌ ಮತ್ತು ಬಾಂಬರ್‌ ಉಮರ್‌ ನಬಿ

ನವದೆಹಲಿ: ನವೆಂಬರ್‌ 10ರಂದು ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ್ದ ಕಾರು ಬಾಂಬ್‌ ದಾಳಿ(Delhi Car Blast) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್‌ಐಎ ಇದೀಗ ಮತ್ತೋರ್ವ ಆರೋಪಿಯನ್ನುಅರೆಸ್ಟ್‌ ಮಾಡಿದೆ. ಆ ಮೂಲಕ ಈ ಭೀಕರ ಕೃತ್ಯದ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಉಮರ್‌ ನಬಿಗೆ ಆಶ್ರಯ ನೀಡಿದ್ದ ಆರೋಪದ ಹಿನ್ನೆಲೆ ಫರಿದಾಬಾದ್‌ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ಸೋಯಾಬ್‌ ಎಂದು ಗುರುತಿಸಲಾಗಿದ್ದು, ಈತ ಪ್ರಕರಣದ 7ನೇ ಆರೋಪಿಯಾಗಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಹಿತಿ ನೀಡಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಈತ ಉಮರ್‌ ನಬಿಗೆ ಆಶ್ರಯ ಒದಗಿಸಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಎರಡನೇ ಆರೋಪಿ ಡಾ. ಮುಜಮ್ಮಿಲ್‌ ಶಕೀಲ್‌ನ್ನು ಕರೆದುಕೊಂಡು ಸೋಯಾಬ್‌ ನಿವಾಸಕ್ಕೆ ತನಿಖಾ ಅಧಿಕಾರಿಗಳು ಭೇಟಿ ನೀಡಿದ್ದರು. ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಮನೆಯಲ್ಲಿ ಸ್ಫೋಟಕ ತಯಾರಿಸುವ ಕೆಲವೊಂದು ಸಲಕರಣೆಗಳು ಪತ್ತೆಯಾಗಿದ್ದು, ಅವುಗಳನ್ನು ಸೀಜ್‌ ಮಾಡಲಾಗಿದೆ.

ಬಂಧಿತ 7ನೇ ಆರೋಪಿ ಸೋಯಾಬ್‌ ಅಲ್‌ ಫಲಾಹ್‌ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿದ್ದು, ಈ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಎನ್‌ಐಎ ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ದೆಹಲಿ ಸ್ಫೋಟ: ಉಮರ್ ಭೇಟಿಯಾಗಿದ್ದ ಮೌಲಾನಾ, ಶಿಕ್ಷಕನ ಬಂಧನ

ಬಂಧಿತ 7 ಆರೋಪಿಗಳು

  1. ಅಮೀರ್ ರಶೀದ್ ಅಲಿ: ಈತ ಬಾಂಬ್ ದಾಳಿಯಲ್ಲಿ ಬಳಸಲಾದ ಕಾರನ್ನು ಖರೀದಿಸಲು ಸಹಾಯ ಮಾಡಿದ್ದು, ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ.
  2. ಜಾಸಿರ್ ಬಿಲಾಲ್ ವನಿ: ಡ್ಯಾನಿಶ್ ಡ್ರೋನ್‌ಗಳು ಮತ್ತು ರಾಕೆಟ್‌ ಸೇರಿದಂತೆ ತಾಂತ್ರಿಕ ಬೆಂಬಲ ನೀಡಿದ್ದ ಎನ್ನಲಾಗಿದೆ.
  3. ಡಾ. ಮುಝಮ್ಮಿಲ್ ಶಕೀಲ್ ಗನೈ (ಪ್ರಮುಖ ಆರೋಪಿ): ಐಇಡಿ (ಸ್ಪೋಟಕ) ತಯಾರಿಕೆಯಲ್ಲಿ ಭಾಗಿಯಾಗಿದ್ದಾನೆ.
  4. ಡಾ. ಅದೀಲ್ ಅಹ್ಮದ್ ರಾಥರ್
  5. ಡಾ. ಶಾಹೀನ್ ಸಯೀದ್ (ಪ್ರಮುಖ ಆರೋಪಿ) ಬಾಂಬ್‌ ತಯಾರಿಕೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
  6. ಮುಫ್ತಿ ಇರ್ಫಾನ್ ಅಹ್ಮದ್ ವಾಗೆ (ಪ್ರಮುಖ ಆರೋಪಿ) ದಾಳಿಕೋರರಿಗೆ ಮಾರ್ಗದರ್ಶನ ಮತ್ತು ಕಾರ್ಯತಂತ್ರದ ಬೆಂಬಲವನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
  7. ಸೋಯಾಬ್ ಬಾಂಬರ್ ಉಮರ್ ಉನ್ ನಬಿಗೆ ಆಶ್ರಯ ಒದಗಿಸಿರುವ ಹಿನ್ನಲೆ ಆತನ್ನನ್ನು ಸದ್ಯ ಬಂಧಿಸಲಾಗಿದೆ.

ಏನಿದು ಪ್ರಕರಣ?

ನ.10ರಂದು ಸಂಜೆ 6:52ಕ್ಕೆ ಕಾರು ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಒಟ್ಟು 15 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಬಾಂಬ್‌ ಬ್ಲಾಸ್ಟ್‌ ಘಟನೆಯಲ್ಲಿ ಭಾಗಿಯಾಗಿದ್ದ ವೈದ್ಯ ಉಮರ್‌ ನಬಿಯ ನಿವಾಸವನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇದರ ಬೆನ್ನಲ್ಲೇ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ 7ನೇ ಆರೋಪಿ ಎನ್ಐಎ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.