ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಾಳೆ ನಡೆಯಬೇಕಿದ್ದ ಸಿಜೆಪಿ (Cockroach Janta Party) ಪ್ರತಿಭಟನೆಗೆ ದೆಹಲಿ ಪೊಲೀಸರು ಅನಮತಿ ನೀಡಲು ನಿರಾಕರಿಸಿದ್ದಾರೆ. ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ದೆಹಲಿಯ ಪ್ರಮುಖ 57 ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (Delhi Metro Rail Corporation) ಸೂಚನೆ ನೀಡಿದ್ದಾರೆ. ಇದರಿಂದಾಗಿ ನಾಳೆ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದವು. ಆದರೆ, ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸಂಚಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿರುವುದರಿಂದ ಈ ಪ್ರತಿಭಟನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ. ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಜಧಾನಿಗೆ ಆಗಮಿಸುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ದೆಹಲಿ ಗಡಿ ಪ್ರದೇಶಗಳಲ್ಲಿ ಈಗಾಗಲೇ ತೀವ್ರ ತಪಾಸಣೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ.
ರ್‍ಯಾಲಿಗೆ ಅನುಮತಿ ನಿರಾಕರಿಸಿದ್ದೇಕೆ ಪೊಲೀಸರು?
ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ನೀಡಿರುವ ಮಾಹಿತಿ ಪ್ರಕಾರ, ಪ್ರತಿಭಟನೆಗೆ ಅನುಮತಿ ಕೋರಿ ಅಕ್ಟೋಬರ್ 7 ರಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಿಯಮಗಳ ಪ್ರಕಾರ ಯಾವುದೇ ಬೃಹತ್ ರ್‍ಯಾಲಿಗೆ ಕನಿಷ್ಠ 10 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿಯಮಗಳ ಉಲ್ಲಂಘನೆ, ಈ ಹಿಂದೆ ನಡೆದ ಧರಣಿಗಳಲ್ಲಿ ಕಾನೂನು ಪಾಲಿಸದಿರುವುದು ಮತ್ತು ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಈ ಅರ್ಜಿಯನ್ನು ಪುರಸ್ಕರಿಸಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ನವದೆಹಲಿ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಜಾರಿಗೊಳಿಸಲಾಗಿದ್ದು, 4ಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.
57 ಮೆಟ್ರೋ ನಿಲ್ದಾಣಗಳ ಬಂದ್‌ಗೆ ಪೊಲೀಸ್ ಸೂಚನೆ
ಪ್ರತಿಭಟನಾಕಾರರು ನಗರದ ಮಧ್ಯಭಾಗಕ್ಕೆ ತಲುಪುವುದನ್ನು ತಡೆಯಲು ದೆಹಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ದೆಹಲಿಯ ಪ್ರಮುಖ ವಾಣಿಜ್ಯ ಮತ್ತು ಸಾರ್ವಜನಿಕ ಪ್ರದೇಶಗಳಾದ ಕನ್ನಾಟ್ ಪ್ಲೇಸ್, ಜಂತರ್ ಮಂತರ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಇಂಡಿಯಾ ಗೇಟ್ ಸುತ್ತಮುತ್ತಲಿನ ನಿಲ್ದಾಣಗಳು ಸೇರಿದಂತೆ ಒಟ್ಟು 57 ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲು DMRCಗೆ ಪತ್ರ ಬರೆಯಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಈ ನಿಲ್ದಾಣಗಳಲ್ಲಿ ರೈಲುಗಳ ಸಂಚಾರವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಲಿಸರ ಈ ದಿಢೀರ್ ನಿರ್ಧಾರದಿಂದಾಗಿ ನಾಳೆ ಕೆಲಸ-ಕಾರ್ಯಗಳಿಗೆ ತೆರಳುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುವ ಸಾಧ್ಯತೆಯಿದೆ. ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವಾಹನ ಸಂಚಾರ ದಟ್ಟಣೆ ಉಂಟಾಗುವ ಭೀತಿ ಎದುರಾಗಿದೆ. ಅನಗತ್ಯವಾಗಿ ಸಾರ್ವಜನಿಕರು ಪ್ರತಿಭಟನಾ ಸ್ಥಳಗಳತ್ತ ಸುಳಿಯದಂತೆ ಮತ್ತು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ದೆಹಲಿ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ
ರೈಲು ಸಂಚಾರ ಸ್ಥಗಿತ, ಗಡಿಗಳಲ್ಲಿ ಹೈ ಅಲರ್ಟ್ ಘೋಷಣೆ
ರಾಜಧಾನಿಗೆ ಇತರ ರಾಜ್ಯಗಳಿಂದ ಪ್ರತಿಭಟನಾಕಾರರು ಬರುವುದನ್ನು ತಡೆಯಲು ಭಾರತೀಯ ರೈಲ್ವೇ ಕೂಡ ಹಲವು ಪ್ರಮುಖ ರೈಲುಗಳನ್ನು ರದ್ದುಗೊಳಿಸಿದೆ ಹಾಗೂ ಕೆಲವು ರೈಲುಗಳ ಮಾರ್ಗವನ್ನು ಸಂಕ್ಷಿಪ್ತಗೊಳಿಸಿದೆ. ದೆಹಲಿಯ ಗಡಿ ಪ್ರದೇಶಗಳಾದ ಸಿಂಘು, ಟಿಕ್ರಿ ಹಾಗೂ ಹರಿಯಾಣ-ಉತ್ತರ ಪ್ರದೇಶ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.