ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 24 ಗಂಟೆ ಇಂಟರ್‌ನೆಟ್‌ ಸ್ಥಗಿತ; ಕಟ್ಟೆಚ್ಚರ

CJP Protest: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಜನಪಥ್–ಕರ್ತವ್ಯ ಪಥ್ ಜಂಕ್ಷನ್‌ನ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಕ್ಟೋಬರ್ 9ರ ರಾತ್ರಿ 10ರಿಂದ ಅಕ್ಟೋಬರ್ 10ರ ರಾತ್ರಿ 10ರವರೆಗೆ ಮೊಬೈಲ್ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲು ಪೊಲೀಸರು ಆದೇಶಿಸಿದ್ದಾರೆ. ಕನ್ನಾಟ್ ಪ್ಲೇಸ್, ಮಂಡಿ ಹೌಸ್, ಖಾನ್ ಮಾರ್ಕೆಟ್ ಸೇರಿ ಹಲವು ಪ್ರದೇಶಗಳು ಇದರಿಂದ ಬಾಧಿತವಾಗಲಿವೆ. ಇದೇ ವೇಳೆ ಮೆಟ್ರೋ ನಿಲ್ದಾಣಗಳ ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚುವ ಹಾಗೂ 60ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಅ. 9: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದೆಹಲಿಯ ಜನಪಥ್‌–ಕರ್ತವ್ಯ ಪಥ್‌ ಜಂಕ್ಷನ್‌ನಿಂದ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ಮೊಬೈಲ್ ಇಂಟರ್‌ನೆಟ್‌ ಸೇವೆಗಳನ್ನು (Suspension of Mobile Internet Services) ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.

ಅಕ್ಟೋಬರ್‌ 9ರ ರಾತ್ರಿ 10 ಗಂಟೆಯಿಂದ ಅಕ್ಟೋಬರ್ 10ರ ರಾತ್ರಿ 10 ಗಂಟೆಯವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ. ಈ ಕುರಿತು ದೆಹಲಿ ಪೊಲೀಸ್ ಉಪ ಆಯುಕ್ತರ ಕಚೇರಿ ಶುಕ್ರವಾರ ಸಂಜೆ ಏರ್‌ಟೆಲ್, ವೊಡಾಫೋನ್‌–ಐಡಿಯಾ, ಜಿಯೋ ಮತ್ತು ಎಂಟಿಎನ್‌ಎಲ್ ಸೇರಿ ದೂರ ಸಂಪರ್ಕ ಕಂಪನಿಗಳಿಗೆ ಸೂಚನೆ ನೀಡಿದೆ. ದೂರ ಸಂಪರ್ಕ ಕಾಯ್ದೆ 2023 ಹಾಗೂ ದೂರಸಂಪರ್ಕ ಸೇವೆಗಳ ತಾತ್ಕಾಲಿಕ ಸ್ಥಗಿತಕ್ಕೆ ಸಂಬಂಧಿಸಿದ 2024ರ ನಿಯಮಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಅಸಮಾಧಾನ

ದೆಹಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವ ಹಾಗೂ ಇತರ ರಾಜ್ಯಗಳಿಂದ ದೆಹಲಿಗೆ ಬರುವ ರೈಲುಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಶುಕ್ರವಾರ ಸರ್ಕಾರದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ನೊಣವನ್ನು ಕೊಲ್ಲಲು ಸ್ಲೆಡ್ಜ್‌ಹ್ಯಾಮರ್ ಬಳಸಲಾಗದು” ಎಂದು ಕುಟುಕಿದೆ. ನ್ಯಾಯಾಲಯವು ನಿರ್ಬಂಧಗಳ ತೀವ್ರತೆಯನ್ನು ಪ್ರಶ್ನಿಸಿದೆ. ಎಲ್ಲ ಚಟುವಟಿಕೆಗಳನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬದಲು, ನಿಯಂತ್ರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಯುವಕರು ಮತ್ತು ಹಿರಿಯರು ಸೇರಿ ಅನೇಕರು ಮೆಟ್ರೋ ಹಾಗೂ ರೈಲು ಸೇವೆಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿದ್ದು, ಸಾರ್ವಜನಿಕರಿಗೆ ಮೂಲಭೂತ ಸಾರಿಗೆ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ನಿರ್ಬಂಧ ವಿಧಿಸುವುದು ಮತ್ತು ಸಂಪೂರ್ಣವಾಗಿ ಸೇವೆಗಳನ್ನು ಬಂದ್ ಮಾಡುವುದು ಎರಡೂ ವಿಭಿನ್ನ ಕ್ರಮಗಳಾಗಿವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ; ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಇದ್ದ ಬಸ್‌ ಟೈರ್‌ ಪಂಕ್ಚರ್‌

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇದೆ. ಆದರೆ ಜನರ ಸಂಚಾರವನ್ನು ನಿಯಂತ್ರಿಸುವ ಹೆಸರಿನಲ್ಲಿ ಎಲ್ಲ ಸಾರಿಗೆ ವ್ಯವಸ್ಥೆಗಳನ್ನೂ ಸ್ಥಗಿತಗೊಳಿಸಿ, ಜನರನ್ನು ಪರ್ಯಾಯ ವ್ಯವಸ್ಥೆಗಳಿಲ್ಲದೆ ಬಿಡಬಾರದು ಎಂದು ನ್ಯಾಯಾಲಯ ತಿಳಿಸಿದೆ.

ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿಭಟನೆ ನಡೆಸುವ ಹಕ್ಕನ್ನು ರಕ್ಷಿಸುವುದರ ಜತೆಗೆ ಸಾರ್ವಜನಿಕರ ಹಕ್ಕುಗಳು ಮತ್ತು ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯೂ ಸರ್ಕಾರಕ್ಕಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸಂಚಾರದ ಮೇಲಿನ ಸಂಪೂರ್ಣ ನಿಷೇಧಗಳನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಯಾವೆಲ್ಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತ?

ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ನಿರ್ಬಂಧದಿಂದ ಕೆಳಗಿನ ಪ್ರದೇಶಗಳ ಕೆಲವು ಭಾಗಗಳು ಅಥವಾ ಸಂಪೂರ್ಣ ಪ್ರದೇಶಗಳು ಬಾಧಿತವಾಗಲಿವೆ:

  • ಕನ್ನಾಟ್ ಪ್ಲೇಸ್
  • ಮಂಡಿ ಹೌಸ್
  • ಪ್ರಗತಿ ಮೈದಾನ
  • ಗುರುದ್ವಾರ ಬಾಂಗ್ಲಾ ಸಾಹಿಬ್
  • ಬಾರಾಖಂಬಾ ರಸ್ತೆ
  • ಖಾನ್ ಮಾರ್ಕೆಟ್
  • ಲೋಧಿ ರಸ್ತೆ
  • ಜಂಗ್‌ಪುರ

ಮೆಟ್ರೋ, ರೈಲುಗಳ ಮೇಲೂ ನಿರ್ಬಂಧ

ಶುಕ್ರವಾರ ರಾತ್ರಿ 9 ಗಂಟೆಯಿಂದ ರಾಜೀವ್ ಚೌಕ್, ನವದೆಹಲಿ, ಸೆಂಟ್ರಲ್ ಸೆಕ್ರೆಟರಿಯಟ್, ಪಟೇಲ್ ಚೌಕ್ ಮತ್ತು ಕಾಶ್ಮೀರಿ ಗೇಟ್ ಸೇರಿ ದೆಹಲಿ ಮೆಟ್ರೋದ 57 ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವುದಾಗಿ ಈ ಹಿಂದೆ ಪ್ರಕಟಿಸಲಾಗಿತ್ತು. ಅಲ್ಲದೆ, ಶನಿವಾರ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ನಡುವೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಇತರ ರಾಜ್ಯಗಳ ರೈಲುಗಳ ಪೈಕಿ 60ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹಿಂದಿನ ಪ್ರತಿಭಟನೆ ಸಂದರ್ಭದಲ್ಲೂ ಇಂಟರ್‌ನೆಟ್‌ ಸ್ಥಗಿತ

ಜುಲೈಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಿಜೆಪಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲೂ ಹಲವು ದಿನಗಳ ಕಾಲ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆಗಿನ ನಿರ್ಬಂಧವು 1.5 ಕಿಲೋ ಮೀಟರ್ ವ್ಯಾಪ್ತಿಗೆ ಸೀಮಿತವಾಗಿತ್ತು. ಇದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರು ಮತ್ತು ಘಟನಾವಳಿಗಳನ್ನು ವರದಿ ಮಾಡುತ್ತಿದ್ದವರು ಸಾಮಾಜಿಕ ಜಾಲತಾಣಗಳು ಹಾಗೂ ಯುಟ್ಯೂಬ್‌ಗೆ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ತೊಂದರೆ ಅನುಭವಿಸಿದ್ದರು. ಮುಖ್ಯವಾಹಿನಿಯ ಮಾಧ್ಯಮಗಳ ವರದಿಗಳ ಪ್ರಸಾರವೂ ವಿಳಂಬವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಲೇ ಇಂಟರ್‌ನೆಟ್‌ ಸ್ಥಗಿತ ಸೇರಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.