ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿ ಪಿಜಿ ದುರಂತ ಪ್ರಕರಣ: ಈಗಲೋ, ಆಗಲೋ ಎನ್ನುವಂತಿದ್ದ 50 ವರ್ಷ ಹಿಂದಿನ ಹಳೆಯ ಕಟ್ಟಡ, ಮಾಲೀಕನ ದುರಾಸೆಯೇ ಅವಘಡಕ್ಕೆ ಕಾರಣ

Delhi PG Tragedy: ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ ಸಂಭವಿಸಿದ ಪಿಜಿ ಕಟ್ಟಡ ದುರಂತದ ಆಘಾತಕಾರಿ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ. ಕೇವಲ ಕೆಲವು ತಿಂಗಳುಗಳ ಹಿಂದಿನವರೆಗೂ ಈ ಕಟ್ಟಡವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ, ಹವಾಮಾನದ ವೈಪರೀತ್ಯಗಳಿಂದಾಗಿ ಶಿಥಿಲಗೊಂಡಿತ್ತು ಎಂದು ತಿಳಿದುಬಂದಿದೆ.

ಮಾಲೀಕನ ದುರಾಸೆಯೇ ಅವಘಡಕ್ಕೆ ಕಾರಣ

ನವದೆಹಲಿ, ಸೆ.7: ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ ಭಾನುವಾರ (ಆ.6) ಸಂಭವಿಸಿದ ಪಿಜಿ ಕಟ್ಟಡ ದುರಂತದಲ್ಲಿ (Delhi PG building collapse) ಆರು ಜನರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ಆ ಕಟ್ಟಡದ ಆಘಾತಕಾರಿ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ. ಕೇವಲ ಕೆಲವು ತಿಂಗಳುಗಳ ಹಿಂದಿನವರೆಗೂ ಈ ಕಟ್ಟಡವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ, ಹವಾಮಾನದ ವೈಪರೀತ್ಯಗಳಿಂದಾಗಿ ಶಿಥಿಲಗೊಂಡಿತ್ತು ಎಂದು ತಿಳಿದುಬಂದಿದೆ. ಈ (PG tragedy) ಕಟ್ಟಡ ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು, ಈಗಲೋ. ಆಗಲೋ ಬೀಳುತ್ತೆ ಅನ್ನೋವಂತಿತ್ತು. ಆದರೆ, ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ದೆಹಲಿ ವಿಶ್ವವಿದ್ಯಾಲಯಕ್ಕೆ ಈ ಜಾಗವು ಅತ್ಯಂತ ಹತ್ತಿರದಲ್ಲಿದೆ ಎಂಬುದನ್ನೇ ಕಟ್ಟಡದ ಮಾಲೀಕ ಬಂಡವಾಳ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುತ್ತಮುತ್ತಲೂ ಈಗಾಗಲೇ ಹಲವಾರು ಪಿಜಿಗಳು ತಲೆಯೆತ್ತಿದ್ದರಿಂದ, ಮಾಲೀಕನು ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಈ ಅಪಾಯಕಾರಿ ಮತ್ತು ಶಿಥಿಲಾವಸ್ಥೆಯಲ್ಲಿದ್ದ ಹಳೇ ಕಟ್ಟಡವನ್ನೇ ವಿದ್ಯಾರ್ಥಿಗಳ ಪಿಜಿಯನ್ನಾಗಿ ಪರಿವರ್ತಿಸಿ, ಹಣಗಳಿಸಲು ಮುಂದಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಬೇಜವಾಬ್ದಾರಿತನವೇ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಳ್ಳಲು ಕಾರಣವಾಗಿದೆ.

ಕಟ್ಟಡದ ಮಾಲೀಕನಾದ ಹರಿ ರಾಮ್ ಬನ್ಸಲ್ ಎಂಬಾತ ಈ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡವನ್ನು ಹಲವಾರು ತಿಂಗಳುಗಳಿಂದ ದುರಸ್ತಿಗೊಳಿಸುತ್ತಿದ್ದ. ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಟ್ಟಡದ ನವೀಕರಣ ಮುಗಿಯಿತು ಎಂದು ಬಿಂಬಿಸಿ, ಪಿಜಿ ಖಾಲಿಯಿದೆ ಎಂಬ ಬೋರ್ಡ್ ಹಾಕಿದ್ದ.

ʼʼಮನಸ್ಸಿಗೆ ತುಂಬ ನೋವಾಗಿದೆʼʼ: ದೆಹಲಿ ಕಟ್ಟಡ ಕುಸಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ; ಮೂರಕ್ಕೇರಿದ ಮೃತರ ಸಂಖ್ಯೆ

ಆದರೆ, ಕಟ್ಟಡದ ಒಳಭಾಗದ ಒಟ್ಟಾರೆ ನಿರ್ಮಾಣ ಕಾರ್ಯಗಳು ಇನ್ನೂ ಸಂಪೂರ್ಣವಾಗಿ ಮುಗಿದಿರಲಿಲ್ಲ. ಈ ಬಹುಮಹಡಿ ಕಟ್ಟಡವು ಹಠಾತ್ ಕುಸಿದು ಬಿದ್ದಾಗಲೂ, ಅದರ ನೆಲಮಹಡಿಯಲ್ಲಿ ಕಾರ್ಮಿಕರು ಇನ್ನೂ ಕೆಲಸ ಮಾಡುತ್ತಲೇ ಇದ್ದರು ಎಂದು ತಿಳಿದುಬಂದಿದೆ. ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಒಬ್ಬ ಮೃತಪಟ್ಟಿದ್ದಾನೆ.

ಪಿಜಿಗೆ ಹಾಸ್ಟೆಲ್ ಡೇಸ್ ಎಂಬ ಹೆಸರಿಟ್ಟಿದ್ದ ಮಾಲೀಕ, ವಸತಿ ಕಟ್ಟಡದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಪಿಜಿ ನಡೆಸಿದ್ದಾನೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇರಿಸಲು ಮಾಲೀಕ ಯೋಜಿಸಿದ್ದ. ವಸತಿ ಕಟ್ಟಡವಾಗಿರುವ ಇದನ್ನು ಯಾವುದೇ ವಾಣಿಜ್ಯ ಪರವಾನಗಿ ಇಲ್ಲದೆ ಹಾಸ್ಟೆಲ್ ವ್ಯವಹಾರಕ್ಕೆ ಬಳಸಲಾಗಿದೆ.

ದೆಹಲಿಯಲ್ಲಿ ಸತತ ಎರಡು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಇಡೀ ಪ್ರದೇಶವು ಜಲಾವೃತಗೊಂಡಿತು. ಕುಸಿದ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ಸಂಗ್ರಹವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮಳೆಯಲ್ಲೂ ಕಾರ್ಮಿಕರು ನೆಲಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಕಟ್ಟಡಗಳ ನೆಲಮಾಳಿಗೆಯಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಪ್ರದೇಶದಲ್ಲಿ 20 ರಿಂದ 22 ವರ್ಷಗಳಿಂದ ವಾಸಿಸುತ್ತಿದ್ದೇನೆ ಎಂದು ಹೇಳಿದ ಪ್ರಿಯಾಂಕಾ ಎಂಬುವವರು, ಪಿಜಿ ಮಾಲೀಕರು ತಮ್ಮ ಮನೆಗಳನ್ನು ಹಾಸ್ಟೆಲ್‌ಗಳಾಗಿ ಪರಿವರ್ತಿಸಿ ಬೇರೆಡೆ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಐದು ಅಥವಾ ಆರು ಮಹಡಿಗಳವರೆಗೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅನೇಕ ಮನೆಗಳನ್ನು ಹುಡುಗರ ಪಿಜಿಗಳಾಗಿ ಪರಿವರ್ತಿಸಲಾಗಿದೆ. ಮಾಲೀಕರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ. ಎಂದಿಗೂ ಪರಿಶೀಲಿಸುವುದೇ ಇಲ್ಲ ಎಂದು ಅವರು ಹೇಳಿದರು. ಸದ್ಯ, ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.