ನವದೆಹಲಿ: ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಾ ಭಾರತದಲ್ಲಿ ದಾಳಿಗಳನ್ನು ನಡೆಸಲು ಯೋಜನೆ ನಡೆಸುತ್ತಿದ್ದ ಲಷ್ಕರ್-ಎ-ತೊಯ್ಬಾ (LET) ಉಗ್ರನನ್ನು ದೆಹಲಿ ಗಡಿಯ ಬಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆರೋಪಿಯನ್ನು ಶಬ್ಬೀರ್ (Lashkar-e-Taiba commander) ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ರಾಜಾ ಅಥವಾ ಕಾಶ್ಮೀರಿ ಎಂದೂ ಕರೆಯಲ್ಪಡುವ ಈತ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕಂಗನ್ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಭಾರತ ಕೇಂದ್ರಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ನಿಗಾ ಇಟ್ಟ ನಂತರ, ಕೇಂದ್ರೀಯ ಸಂಸ್ಥೆಗಳ ಸಮನ್ವಯದೊಂದಿಗೆ ದೆಹಲಿ ಪೊಲೀಸರ ವಿಶೇಷ ಘಟಕವು ಆತನನ್ನು ಬಂಧಿಸಿತು. ಬಂಧಿತ ಆರೋಪಿಯು ಮೆಟ್ರೋ ಪೋಸ್ಟರ್ ಪ್ರಕರಣದಲ್ಲಿ ಇತ್ತೀಚೆಗೆ ಪತ್ತೆಯಾದ ಎಲ್‌ಇಟಿ ಮಾಡ್ಯೂಲ್‌ಗೆ ಸಂಬಂಧ ಹೊಂದಿದ್ದನು. ಫೆಬ್ರವರಿಯಲ್ಲಿ ದೆಹಲಿ ಪೊಲೀಸರು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆಹಚ್ಚಿದ್ದರು, ಈ ಮಾಡ್ಯೂಲ್ ಅನ್ನು ನಿರ್ವಹಿಸುವವರು ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಎಂದು ತಿಳಿದು ಬಂದಿದೆ.
ಕೋಲ್ಕತ್ತಾ ಮತ್ತು ತಮಿಳುನಾಡಿನಾದ್ಯಂತ ನಡೆದ ಸಂಘಟಿತ ಕಾರ್ಯಾಚರಣೆಗಳಲ್ಲಿ ಎಂಟು ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಏಳು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಪಶ್ಚಿಮ ಬಂಗಾಳದ ಒಬ್ಬ ಸೇರಿದ್ದಾನೆ. ಈ ತಿಂಗಳ ಆರಂಭದಲ್ಲಿ ದೆಹಲಿಯ ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ದೇಶ ವಿರೋಧಿ ಪೋಸ್ಟರ್‌ಗಳು ಪತ್ತೆಯಾಗಿದ್ದು, ನಂತರ ಕೋಲ್ಕತ್ತಾದಲ್ಲಿಯೂ ಇದೇ ರೀತಿಯ ಮಾದರಿಗಳು ಪತ್ತೆಯಾಗಿವೆ. ಆರೋಪಿಗಳು ಕೋಲ್ಕತ್ತಾದಲ್ಲಿ ಅಡಗುತಾಣವನ್ನು ಬಾಡಿಗೆಗೆ ಪಡೆದು ಶಸ್ತ್ರಾಸ್ತ್ರಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Terrorist: ಒಸಾಮಾ ಬಿನ್ ಲಾಡೆನ್ ಥರ ವೇಷ, ಭಯೋತ್ಪಾದನೆಗೆ ಪ್ರಚೋದನೆ: ಬಳ್ಳಾರಿಯ ಉಗ್ರ ಸೇರಿದಂತೆ 12 ಶಂಕಿತರ ಬಂಧನ
ಇದೀಗ ಬಂಧಿತ ಉಗ್ರ ಬಾಂಗ್ಲಾದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮೇಲ್ವಿಚಾರಣೆಯಲ್ಲಿ ಲಷ್ಕರೆ ತಯ್ಬಾದ ಭಾರತ ವಿರೋಧಿ ಚಟುವಟಿಕೆಗಳನ್ನು ನಿರ್ದೇಶಿಸುತ್ತಿದ್ದನೆಂದು ಎಂದು ತಿಳಿದು ಬಂದಿದೆ. ಬಹು-ಏಜೆನ್ಸಿ ತನಿಖೆಗಳು ಮುಂದುವರೆದಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.