ದೆಹಲಿ, ಜೂ. 16: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನೇರ ಸಂಪರ್ಕ ಹೊಂದಿದ್ದ ಅಂತಾರಾಷ್ಟ್ರೀಯ ಭಯೋತ್ಪಾದನಾ ಮತ್ತು ಅಪರಾಧ ಜಾಲವನ್ನು ದೆಹಲಿ ಪೊಲೀಸರು ಯಶಸ್ವಿಯಾಗಿ ಧ್ವಂಸಗೊಳಿಸಿದ್ದಾರೆ. ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಹಾಗೂ ಉಗ್ರ ಶಹಜಾದ್ ಭಟ್ಟಿ (Shahzad Bhatti) ಮತ್ತು ಆತನ ಸಹಚರ ಅಜ್ಮಲ್ ಗುಜ್ಜರ್ (Ajmal Gujja) ನೆಟ್‌ವರ್ಕ್‌ಗೆ ಸೇರಿದ ಏಳು ಮಂದಿ ಸಕ್ರಿಯ ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕದ ಈ ಕಾರ್ಯಾಚರಣೆಯಿಂದಾಗಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ನಡೆಯಬೇಕಿದ್ದ ಭಾರಿ ಸರಣಿ ಭಯೋತ್ಪಾದನಾ ದಾಳಿಗಳು, ಕಾನೂನುಬಾಹಿರ ಶಸ್ತ್ರಾಸ್ತ್ರ ಸರಬರಾಜು ಮತ್ತು ಮಾದಕ ದ್ರವ್ಯ ಜಾಲವನ್ನು ಮುಂಚಿತವಾಗಿಯೇ ತಡೆಯಲಾಗಿದೆ. ಈ ಉಗ್ರ ಜಾಲವು ಪಾಕಿಸ್ತಾನದಿಂದ ಪಂಜಾಬ್ ಗಡಿಯ ಮೂಲಕ ಡ್ರೋನ್‌ಗಳ ಸಹಾಯದಿಂದ ಹೆರಾಯಿನ್ ಹಾಗೂ ಅತ್ಯಾಧುನಿಕ ಆಯುಧಗಳನ್ನು ಭಾರತದೊಳಗೆ ಕಳ್ಳಸಾಗಣೆ ಮಾಡುತ್ತಿತ್ತು. ನಂತರ ಇವುಗಳನ್ನು ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿತರಿಸಲಾಗುತ್ತಿತ್ತು. ಬಂಧಿತ ಉಗ್ರರು ದೆಹಲಿಯ ಪ್ರಮುಖ ಸಾರ್ವಜನಿಕ ಸ್ಥಳಗಳು, ಸೂಕ್ಷ್ಮ ಪ್ರದೇಶಗಳು ಮತ್ತು ಪ್ರಮುಖ ಧಾರ್ಮಿಕ ಮುಖಂಡರ ನೆಲೆಗಳ ಮೇಲೆ ನಿಗಾ ಇಟ್ಟು, ಅವುಗಳ ವಿಡಿಯೋ ಹಾಗೂ ಫೋಟೋಗಳನ್ನು ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ಕಳುಹಿಸಿಕೊಟ್ಟಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕನ ಮೇಲೆ ಜೈಪುರದಲ್ಲಿ ಹಲ್ಲೆ: ನಿರುದ್ಯೋಗವೇ ಕಾರಣ ಎಂದ ಅಭಿಜಿತ್ ದೀಪ್ಕೆ
ಪ್ರದೇಶದಲ್ಲಿ ಕೋಮು ಸಂಘರ್ಷ ಉಂಟುಮಾಡುವುದು ಮತ್ತು ಜನರಲ್ಲಿ ಭೀತಿ ಸೃಷ್ಟಿಸುವುದೇ ಈ ಜಾಲದ ಮುಖ್ಯ ಉದ್ದೇಶವಾಗಿತ್ತು. ಬಂಧಿತರನ್ನು ಅನಾಸ್ ತ್ಯಾಗಿ, ಮೋಹಿತ್ ಅಲಿಯಾಸ್ ಯೋಗಿ, ದೀಪಕ್ ಅಲಿಯಾಸ್ ದೀಪಕ್ ಅಗ್ರೋಲಾ, ಆರಿಫ್, ಕರಣ್‌ವೀರ್ ಸಿಂಗ್, ಜತನ್ ಮತ್ತು ಸಾಬಿರ್ ಎಂದು ಗುರುತಿಸಲಾಗಿದೆ. ಇವರಿಂದ 5 ಅತ್ಯಾಧುನಿಕ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ಗಳು, 41 ಸಜೀವ ಕಾರತೂಸುಗಳು, ಪಾಕ್ ಉಗ್ರರೊಂದಿಗಿನ ಚಾಟ್‌ಗಳು ಮತ್ತು ವಾಯ್ಸ್ ನೋಟ್‌ಗಳನ್ನು ಒಳಗೊಂಡಿದ್ದ 7 ಮೊಬೈಲ್ ಫೋನ್‌ಗಳು ಹಾಗೂ ಒಂದು ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನ ಒಳಗಿದ್ದೇ ಗ್ಯಾಂಗ್‌ಸ್ಟರ್ ದೀಪಕ್ ಅಗ್ರೋಲಾ ಮೊಬೈಲ್ ಬಳಸಿ ಈ ಕಾರ್ಯಾಚರಣೆಯನ್ನು ಸಂಯೋಜಿಸುತ್ತಿದ್ದ ಎನ್ನುವುದು ಪತ್ತೆಯಾಗಿದೆ. ಶಸ್ತ್ರಾಸ್ತ್ರಗಳ ವ್ಯವಹಾರಕ್ಕಾಗಿ ಡಿಜಿಟಲ್ ಯುಪಿಐ ಖಾತೆಗಳ ಮೂಲಕ ಲಕ್ಷಾಂತರ ರುಪಾಯಿ ಹಣದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದ ನಿರುದ್ಯೋಗಿ ಯುವಕರನ್ನು ಸಂಪರ್ಕಿಸಿ, ಹಣದ ಆಮಿಷ ಒಡ್ಡಿ ಈ ದೇಶದ್ರೋಹಿ ಜಾಲಕ್ಕೆ ನೇಮಿಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ತಲೆಮರೆಸಿಕೊಂಡಿರುವ ಇತರರಿಗಾಗಿ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.