ನವದೆಹಲಿ, ಆ. 13: 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟಕ್ಕೆ (Delhi Red Fort Blast Case) ಸಂಬಂಧಿಸಿ ಮಹತ್ವದ ಮಾಹಿತಿ ಹೊರ ಬಿದ್ದಿದೆ. 11 ಮಂದಿ ಮೃತಪಟ್ಟ ಈ ದಾಳಿಯನ್ನು ಜಾಗತಿಕ ಉಗ್ರ ಸಂಘಟನೆ ಅಲ್‌ಖೈದಾದ (Al-Qaeda) ಅಂಗಸಂಸ್ಥೆ ನಡೆಸಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ತಂಡದ ವರದಿ ತಿಳಿಸಿದೆ. ಅಲ್ಲದೆ, ಈ ಸಂಘಟನೆಯ ಪ್ರಾದೇಶಿಕ ಜಾಲವು ವಿಸ್ತರಿಸುತ್ತಿರುವ ಬಗ್ಗೆಯೂ ವರದಿ ಎಚ್ಚರಿಕೆ ನೀಡಿದೆ.
ದಾಳಿ ನಡೆಸಿದ ಅಲ್‌ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಗುಂಪು ಆಗ್ನೇಯ ಅಫ್ಘಾನಿಸ್ತಾನದಲ್ಲಿ ಇನ್ನೂ ಸಕ್ರಿಯವಾಗಿದ್ದು, ಕಾರ್ಯಾಚರಣಾ ಘಟಕಗಳನ್ನು ಸ್ಥಾಪಿಸಲು ಬಾಂಗ್ಲಾದೇಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದೆ. ಕೆಂಪು ಕೋಟೆಯ ಮೇಲಿನ ದಾಳಿಯು ಸಂಘಟನೆಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್‌ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್ ಪ್ರಾದೇಶಿಕ ಭಯೋತ್ಪಾದಕ ಸಂಘಟನೆಯಾಗಿ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ. ಸಂಘಟನೆಯು ಲಾಜಿಸ್ಟಿಕ್ಸ್ ಮತ್ತು ಹಣಕಾಸಿನ ಜಾಲಗಳನ್ನು ಸ್ಥಾಪಿಸಿದ್ದು, ದೊಡ್ಡ ಘಟಕಗಳ ಬದಲಿಗೆ ಸಣ್ಣ, ಚದುರಿದ ಮತ್ತು ವಿಕೇಂದ್ರೀಕೃತ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.
ದೆಹಲಿ ಬ್ಲಾಸ್ಟ್‌ನ ಸ್ಫೋಟಕ ಮಾಹಿತಿ ಬಹಿರಂಗ; ಬಾಂಬ್ ತಯಾರಿಸಲು ಚಾಟ್‌ಜಿಪಿಟಿ, ಯುಟ್ಯೂಬ್ ಬಳಕೆ
2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪು ಕೋಟೆಯ ಮೇಲೆ ನಡೆದ ದಾಳಿಗೆ ಆರಂಭದಲ್ಲಿ ಎಕ್ಯುಐಎಸ್ ಸಂಘಟನೆ ಕಾರಣವೆಂದು ಹೇಳಲಾಗಿತ್ತು. ಎಕ್ಯುಐಎಸ್ ಬಾಂಗ್ಲಾದೇಶದಲ್ಲಿ ಬೇರೂರಲು ಯತ್ನಿಸುವ ಬಗ್ಗೆ ಕಳವಳ ಇತ್ತು. ಆದರೆ ಇದೀಗ ಅಲ್‌ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್‌ನ ಪಾತ್ರ ಬಯಲಾಗಿದೆ.
ಕಾರ್ ಸ್ಫೋಟ
2025ರ ನವೆಂಬರ್ 10ರಂದು ಕೆಂಪು ಕೋಟೆಯ ಬಳಿ ಕಾರ್‌ನಲ್ಲಿದ್ದ ಸ್ಫೋಟಕ ಸ್ಫೋಟಗೊಂಡಿತ್ತು. ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮಾಜಿ ಸಹಾಯಕ ವೈದ್ಯಕೀಯ ಪ್ರಾಧ್ಯಾಪಕ ಉಮರ್ ಉನ್-ನಬಿ ಕಾರ್ ಚಲಾಯಿಸಿಕೊಂಡು ಹೋಗಿ ಸ್ಫೋಟಿಸಿದ್ದ. ಸ್ಫೋಟದ ರಭಸಕ್ಕೆ ಆತನ ದೇಹ ನುಚ್ಚು ನೂರಾಗಿತ್ತು.
ಈ ಮಾಡ್ಯೂಲ್ ಎಕ್ಯುಐಎಸ್‌ನಿಂದ ಪ್ರೇರಿತವಾಗಿದ್ದು, ವ್ಯಾಪಕ ಭಯೋತ್ಪಾದಕ ಪಿತೂರಿಯ ಭಾಗವಾಗಿ ದಾಳಿಯನ್ನು ಯೋಜಿಸಿದೆ ಎಂದು ಎನ್ಐಎ ಗುರುತಿಸಿದೆ. ಇದೀಗ ವಿಶ್ವಸಂಸ್ಥೆಯ ವರದಿಯು ಸ್ಫೋಟದ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.
ಇನ್ನು ಭಯೋತ್ಪಾದಕ ಸಂಘಟನೆಗಳು ಕೃತ್ಯಕ್ಕಾಗಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಹೆಚ್ಚಿಸುತ್ತಿರುವುದು ಕಳವಳ ಮೂಡಿಸಿದೆ ಎಂದು ವಿಶ್ವಸಂಸ್ಥೆಯ ವರದಿಯು ಎತ್ತಿ ತೋರಿಸಿದೆ. ಬಾಂಬ್ ತಯಾರಿಕೆ ಮತ್ತು ಗುರಿ ಆಯ್ಕೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಚಾಟ್‌ಜಿಪಿಟಿ ಸೇರಿ ಎಐನತ್ತ ಮುಖ ಮಾಡಲಾಗುತ್ತಿದೆ.