ಲಖನೌ, ಜೂ. 23: ಉತ್ತರ ಪ್ರದೇಶದ ರಾಜಧಾನಿ ಲಖನೌದ ಅಲಿಗಂಜ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ (Fire Tragedy)ದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಈ ಘಟನೆ ದೇಶಾದ್ಯಂತ ಆಘಾತ ಮೂಡಿಸಿದ್ದು, ಕಟ್ಟಡದ ಹಿಂದಿನ ಇತಿಹಾಸ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕಟ್ಟಡಕ್ಕೆ 2016ರಲ್ಲಿ ಅನಧಿಕೃತ ನಿರ್ಮಾಣದ ಆರೋಪದ ಮೇರೆಗೆ ಧ್ವಂಸ ಆದೇಶ ನೀಡಲಾಗಿತ್ತು. ಆದರೆ ಕೇವಲ ಎರಡು ತಿಂಗಳೊಳಗೆ ಆ ಆದೇಶವನ್ನು ರದ್ದುಪಡಿಸಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇದೀಗ ಈ ಅಗ್ನಿ ದುರಂತದ ನಂತರ ಆ ನಿರ್ಧಾರದ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.
ಕಟ್ಟಡದ ಹಿನ್ನೆಲೆ
ಅಲಿಗಂಜ್ ಯೋಜನೆಯ ಸೆಕ್ಟರ್-ಡಿ ಪ್ರದೇಶದಲ್ಲಿರುವ ಈ ಆಸ್ತಿಯನ್ನು 1980ರ ಜುಲೈ 11ರಂದು ಲಖನೌ ಪ್ರಾಧಿಕಾರ (LDA) ಲಾಟರಿ ವ್ಯವಸ್ಥೆಯ ಮೂಲಕ ವಿಜಯ್ ಕುಮಾರ್ ಅವರಿಗೆ ಹಂಚಿಕೆ ಮಾಡಿತ್ತು. 1980ರ ನವೆಂಬರ್ 4ರಂದು ಒಪ್ಪಂದ ಪೂರ್ಣಗೊಂಡ ಬಳಿಕ ಆಸ್ತಿಯ ಸ್ವಾಧೀನವನ್ನು ಅವರಿಗೆ ನೀಡಲಾಗಿತ್ತು.
2005ರಲ್ಲಿ ಈ ಆಸ್ತಿ ವಿಜಯ್ ಕುಮಾರ್ ಮತ್ತು ಅವರ ಪತ್ನಿ ಉಷಾ ಅವರ ಹೆಸರಿಗೆ ಮಾರಾಟ ಪತ್ರದ ಮೂಲಕ ನೋಂದಾಯಿಸಲಾಯಿತು. ಬಳಿಕ 2013ರ ಜನವರಿ 19ರಂದು ಈ ಕಟ್ಟಡವನ್ನು ವಿರೇಂದ್ರ ಪ್ರತಾಪ್ ಶುಕ್ಲಾ ಮತ್ತು ಸುರೇಂದ್ರ ಪ್ರತಾಪ್ ಶುಕ್ಲಾ ಅವರಿಗೆ ಮಾರಾಟ ಮಾಡಲಾಯಿತು. 2014ರ ಆಗಸ್ಟ್ 7ರಂದು LDA ಅವರ ಹೆಸರಿಗೆ ಮ್ಯೂಟೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.
ವಸತಿ ಬಳಕೆಗೆ ಅನುಮೋದನೆ, ನಂತರ ಅನಧಿಕೃತ ನಿರ್ಮಾಣ
ಸುಮಾರು 1,992 ಚದರ ಅಡಿ ವಿಸ್ತೀರ್ಣದ ಈ ಕಟ್ಟಡಕ್ಕೆ 2014ರ ಆಗಸ್ಟ್ 20ರಂದು ಸ್ವಯಂ-ಪ್ರಮಾಣೀಕರಣ (Self-Certification) ಯೋಜನೆಯಡಿ ವಸತಿ ಬಳಕೆಗೆ ಕಟ್ಟಡ ನಕ್ಷೆ ಅನುಮೋದನೆ ದೊರಕಿತ್ತು. ಆದರೆ ನಂತರ ಕಟ್ಟಡದಲ್ಲಿ ಅನಧಿಕೃತ ನಿರ್ಮಾಣ ಮತ್ತು ನಿಯಮ ಉಲ್ಲಂಘನೆಗಳು ನಡೆದಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ LDA ವಿರೇಂದ್ರ ಪ್ರತಾಪ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿತು.
ಲಖನೌ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ: 14 ಮಂದಿ ಸಾವು, ಹಲವು ವಿದ್ಯಾರ್ಥಿಗಳು ಸಿಲುಕಿರುವ ಶಂಕೆ
2016ರಲ್ಲಿ ಧ್ವಂಸ ಆದೇಶ, ಬಳಿಕ ರದ್ದು
LDA ನಡೆಸಿದ ತನಿಖೆಯ ನಂತರ 2016ರ ಮೇ 10ರಂದು ಅನಧಿಕೃತ ನಿರ್ಮಾಣ ತೆರವುಗೊಳಿಸಲು ಧ್ವಂಸ ಆದೇಶ ಹೊರಡಿಸಲಾಯಿತು. ಆದರೆ ಅಚ್ಚರಿ ಎಂಬಂತೆ ಕೇವಲ ಎರಡು ತಿಂಗಳ ನಂತರವೇ 2016ರ ಜುಲೈ 5ರಂದು ಆ ಆದೇಶವನ್ನು ಹಿಂಪಡೆಯಲಾಯಿತು. ಈಗ ಸಂಭವಿಸಿರುವ ಅಗ್ನಿ ದುರಂತದ ಬಳಿಕ, ಧ್ವಂಸ ಆದೇಶವನ್ನು ಯಾವ ಕಾರಣಕ್ಕೆ ರದ್ದುಪಡಿಸಲಾಯಿತು, ಅದರ ಹಿಂದೆ ಯಾವ ಸಂದರ್ಭಗಳು ಇದ್ದವು ಎಂಬ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಅಗ್ನಿ ಅವಘಡ ಹೇಗೆ ನಡೆಯಿತು?
ಸೋಮವಾರ (ಜೂನ್ 22) ಅಪರಾಹ್ನ ಸುಮಾರು 3 ಗಂಟೆ ವೇಳೆಗೆ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಮೇಲಿನ ಮಹಡಿಗಳಿಗೆ ವ್ಯಾಪಿಸಿತು. ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿಮೇಷನ್ ತರಬೇತಿ ಕೇಂದ್ರದಲ್ಲಿ ತರಗತಿಗಳು ನಡೆಯುತ್ತಿದ್ದು, ಹಲವು ವಿದ್ಯಾರ್ಥಿಗಳು ಒಳಗೇ ಸಿಲುಕಿಕೊಂಡರು. ಇದೇ ಕಟ್ಟಡದಲ್ಲಿ ಪೆಟ್ ಕ್ಲಿನಿಕ್ ಕೂಡ ಕಾರ್ಯನಿರ್ವಹಿಸುತ್ತಿತ್ತು.
ಹೊಗೆ ಮತ್ತು ಬೆಂಕಿಯ ತೀವ್ರತೆಯಿಂದ ಹಲವರಿಗೆ ಹೊರಬರಲು ಸಾಧ್ಯವಾಗಲಿಲ್ಲ. ಕೆಲವರು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಟ್ಟಡದ ಕಿಟಕಿಗಳು ಮತ್ತು ಮೇಲಿನ ಮಹಡಿಗಳಿಂದ ಕೆಳಗೆ ಜಿಗಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ರಕ್ಷಣಾ ಕಾರ್ಯಾಚರಣೆ
ಅಗ್ನಿ ಅವಘಡದ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ 14 ವಾಹನಗಳು, ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ ಹಲವು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೆ ಆಗಾಗಲೇ ಕಟ್ಟಡದ ಬಹುಭಾಗ ಬೆಂಕಿಗೆ ಆಹುತಿಯಾಗಿತ್ತು.
ತನಿಖೆ ಮುಂದುವರಿಕೆ
ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಶಾರ್ಟ್ ಸರ್ಕ್ಯೂಟ್, ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಅಥವಾ ಅನಧಿಕೃತ ಕಟ್ಟಡ ಮಾರ್ಪಾಡುಗಳು ದುರಂತಕ್ಕೆ ಕಾರಣವಾಗಿರಬಹುದೇ ಎಂಬ ಎಲ್ಲ ಆಯಾಮಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ದುರಂತವು ಕಟ್ಟಡ ಸುರಕ್ಷತೆ, ಅನಧಿಕೃತ ನಿರ್ಮಾಣಗಳು ಮತ್ತು ನಿಯಂತ್ರಣ ಸಂಸ್ಥೆಗಳ ಜವಾಬ್ದಾರಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.