ಅಖ್ನೂರ್/ನವದೆಹಲಿ: ವಿಪರೀತ ಚಳಿ, ಮಂಜು ಹಾಗೂ ಹೊಸವರ್ಷ ಹಿನ್ನೆಲೆಯಲ್ಲಿ ಬಿಎಸ್ಎಫ್ ಭದ್ರತೆಯನ್ನು ಹೆಚ್ಚಿಸಿದೆ. ಭಾರತದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟಿರುವ ಮೊದಲ ಸಾಲಿನ ರಕ್ಷಣಾ ಪಡೆ ಆಗಿರುವ ಗಡಿ ಭದ್ರತಾ ಪಡೆ (BSF), ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆ (LOC)ಗಳ ಮೇಲಿನ ನಿಗಾವನ್ನು ಮತ್ತಷ್ಟು ಹೆಚ್ಚಿಸಿದೆ. ಚಳಿಗಾಲದ ತೀವ್ರ ಚಳಿಯ ಹೊರತಾಗಿಯೂ ಭಯೋತ್ಪಾದಕರನ್ನು ನಿಗ್ರಹಿಸಲು ಹಿಮಾವೃತ ಎತ್ತರದ ಹಲವಾರು ಪ್ರದೇಶಗಳಲ್ಲಿ ಭಾರತೀಯ ಸೇನೆಯು (Indian Army) ಸಮಾನಾಂತರ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.
ಎನ್‍ಡಿಟಿವಿ ವರದಿಯ ಪ್ರಕಾರ, ಹೊಸ ವರ್ಷದ ಸಂದರ್ಭದಲ್ಲಿ ದಟ್ಟವಾದ ಮಂಜು ಆವರಿಸಿರುವಾಗ ಗಡಿಯುದ್ದಕ್ಕೂ ಹಲವಾರು ಲಾಂಚ್‌ಪ್ಯಾಡ್‌ಗಳಿಂದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರನ್ನು ಒಳನುಗ್ಗಿಸಲು ಪಾಕಿಸ್ತಾನ ಪ್ರಯತ್ನಿಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಹೊಸ ವರ್ಷಾಚರಣೆಗೆ ಅಯೋಧ್ಯೆಯಲ್ಲಿ ಹೈ ಅಲರ್ಟ್; ಡ್ರೋನ್, ಸಿಸಿಟಿವಿ ನಿಯೋಜನೆ
ಉಗ್ಗರು ಒಳನುಸುಳಬಹುದಾದ ಜಾಲವನ್ನು ಇನ್ನಷ್ಟು ಬಲಪಡಿಸಲಾಗಿದ್ದು, ಗುರುತಿಸಲಾದ ಎಲ್ಲಾ ದುರ್ಬಲ ಸ್ಥಳಗಳನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಖ್ಯೂರ್ ವಲಯದಲ್ಲಿ ಬಿಎಸ್ಎಫ್ ಕಾರ್ಯಾಚರಣೆ ಹೇಗಿದೆ ಎಂದು ಹೇಳುವುದಾದರೆ, ಕಣ್ಣು ಮಿಟುಕಿಸದೆ ಕಾವಲು ಕಾಯಲಾಗುತ್ತಿದೆ.
ಬಿಎಸ್‌ಎಫ್‌ನ ಮಹಿಳಾ ಸೈನಿಕರು ಕಾವಲು ಕಾಯುತ್ತಿದ್ದಾರೆ. ಮುಂದೆ ಇರುವ ಪ್ರದೇಶವನ್ನೇ ಅವರು ದಿಟ್ಟಿಸಿ ನೋಡುತ್ತಿದ್ದಾರೆ. ಈ ನಿರ್ಭೀತ ಮಹಿಳಾ ಸೈನಿಕರು ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಪಾಠ ಕಲಿಸಿದ್ದರು. ಅವರು ಪಾಕಿಸ್ತಾನಿ ರೇಂಜರ್‌ಗಳ ಸ್ಥಾನಗಳನ್ನು ನಾಶಪಡಿಸಿದ್ದು, ಅಖ್ನೂರ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ಗ್ರಾಮಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಮಾಡಿದ ಪ್ರಯತ್ನಗಳನ್ನು ತಡೆದಿದ್ದಾರೆ. ಒಳನುಗ್ಗುವಿಕೆ ತಡೆಗಟ್ಟುವ ಜಾಲದಲ್ಲಿ ಅವರ ಭಾಗವಹಿಸುವಿಕೆಯಿಂದ ಬಿಎಸ್‌ಎಫ್‌ನ ಆಕ್ರಮಣ ಶಕ್ತಿ ಇನ್ನಷ್ಟು ತೀಕ್ಷ್ಣಗೊಂಡಿದ್ದು, ಶತ್ರುವಿನ ಮೇಲೆ ದಾಳಿ ನಡೆಸಲು ಸದಾ ಸಿದ್ಧವಾಗಿದೆ.
ಈ ಮಹಿಳೆಯರು ತಮ್ಮ ಮನೆಗಳು ಮತ್ತು ಕುಟುಂಬಗಳಿಂದ ದೂರವಿದ್ದು, ಭಾರತದ ಅತ್ಯಂತ ಅಪಾಯಕರ ಗಡಿಗಳಲ್ಲೊಂದನ್ನು ಕಾಪಾಡುತ್ತಿದ್ದಾರೆ. ಇವರ ತ್ಯಾಗದ ಪ್ರತಿಫಲವಾಗಿ ಭಾರತದ ನಾಗರಿಕರು ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ದಟ್ಟ ಮಂಜು ಸಾಮಾನ್ಯವಾಗಿದೆ. ಇದು ಗೋಚರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಳನುಸುಳುವವರನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ. ಚಳಿಗಾಲದ ಕಾರ್ಯತಂತ್ರದ ಭಾಗವಾಗಿ, ಬಿಎಸ್‌ಎಫ್ ಮಂಜು ನಿರೋಧಕ ಸಾಧನಗಳು ಮತ್ತು ಥರ್ಮಲ್ ಇಮೇಜಿಂಗ್ ಉಪಕರಣಗಳನ್ನು ನಿಯೋಜಿಸಿದ್ದು, ಗಸ್ತು ಮತ್ತು ಶೋಧ ಕಾರ್ಯಾಚರಣೆಗಳನ್ನು ಹೆಚ್ಚಿಸಿದೆ.
ಈ ಸವಾಲುಗಳ ನಡುವೆಯೂ, ಬಿಎಸ್‌ಎಫ್ ಸೈನಿಕರು ತಮಗೆ ನಿಗದಿಪಡಿಸಲಾದ ಪ್ರದೇಶದ ಮೇಲೆ ಕಣ್ಣಿಟ್ಟಿದ್ದಾರೆ. ಅಪಾಯವು ಯಾವ ದಿಕ್ಕಿನಿಂದಾದರೂ, ಯಾವ ಕ್ಷಣದಲ್ಲಾದರೂ ಎದುರಾಗಬಹುದು.
ಅನೇಕ ಅತ್ಯಾಧುನಿಕ ಮತ್ತು ಆಧುನಿಕ ನಿಗಾ ಸಾಧನಗಳು ಬಿಎಸ್‌ಎಫ್ ಸೈನಿಕರಿಗೆ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಉಗ್ರರ ಲಾಂಚ್‌ಪ್ಯಾಡ್‌ಗಳಾಗಿ ಕಾರ್ಯನಿರ್ವಹಿಸಬಹುದಾದ ಪಾಕಿಸ್ತಾನಿ ಪೋಸ್ಟ್‌ಗಳ ಮೇಲೆ ನಿಗಾ ಇಡಲು ಸಹಾಯ ಮಾಡುತ್ತಿವೆ. ವಾಸ್ತವವಾಗಿ, ಗಡಿಯಾಚೆ ಇರುವ ಪ್ರತಿಯೊಂದು ಪಾಕಿಸ್ತಾನಿ ಔಟ್‌ಪೋಸ್ಟ್ ಕೂಡ ಒಂದು ಸಂಭಾವ್ಯ ಭಯೋತ್ಪಾದಕಾ ಲಾಂಚ್‌ಪ್ಯಾಡ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಕುದಿಯುತ್ತಲೇ ಇದ್ದು, ಈ ಚಳಿಗಾಲದಲ್ಲಿ ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಮೂಲಕ ಕನಿಷ್ಠ 80 ಭಯೋತ್ಪಾದಕರು ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಗಲಿನಲ್ಲಿ ಕಾಣುವ ಗಡಿಯ ಬೇಲಿ, ಸೂರ್ಯಾಸ್ತದ ನಂತರ ಮಂಜಿನ ಹೊದಿಕೆಯಲ್ಲಿ ಕಣ್ಮರೆಯಾಗುತ್ತದೆ. ಆದರೆ, ಬಿಎಸ್‌ಎಫ್ ಸೈನಿಕರು ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ದೇಶದ ಗಡಿ ಕಾಯುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಾರೆ.