ನವದೆಹಲಿ: ಭಾರತದ ಗಡಿ (India Border) ಎಂದಾಕ್ಷಣ ನಮಗೆ ನೆನಪಾಗುವುದು ಮುಳ್ಳುತಂತಿಯ ಬೇಲಿಗಳು ಕಣ್ಣಮುಂದೆ ಬರುತ್ತವೆ. ಸಿನಿಮಾಗಳಲ್ಲಿ ಅಥವಾ ಟಿವಿಯಲ್ಲಿ ಅಂತ ದೃಶ್ಯಗಳನ್ನು ನಾವು ನೋಡಿರುತ್ತೇವೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಬೇಲಿಗಳ ಉದ್ದಕ್ಕೂ ಅಲ್ಲಲ್ಲಿ ಖಾಲಿ ಗಾಜಿನ ಬಾಟಲಿಗಳನ್ನು ನೇತುಹಾಕಿರುವುದು ಕಂಡುಬರುತ್ತದೆ. ಇದು ಮೇಲ್ನೋಟಕ್ಕೆ ಕಸದಂತೆ ಕಂಡರೂ, ದೇಶದ ಸುರಕ್ಷತೆಯಲ್ಲಿ ಇವು ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತವೆ. ಗಡಿ ಕಾಯುವ ಸೈನಿಕರಿಗೆ ಇವು 'ಸ್ಥಳೀಯ ಅಲಾರಾಂ' (Local Alarm) ನಂತೆ ಕೆಲಸ ಮಾಡುತ್ತವೆ.
ಖಾಲಿ ಗಾಜಿನ ಬಾಟಲಿಗಳ ಬಳಕೆ ಏಕೆ?
ಭಾರತದ ಗಡಿಗಳು ದಟ್ಟ ಅರಣ್ಯಗಳು, ಕಡಿದಾದ ಪರ್ವತಗಳು ಮತ್ತು ಹಿಮಚ್ಛಾದಿತ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಎಲ್ಲಾ ಕಡೆಗಳಲ್ಲಿ ಹೈ-ಟೆಕ್ ಸೆನ್ಸಾರ್‌ಗಳು ಅಥವಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಒಂದು ವೇಳೆ ಅಳವಡಿಸಿದರೂ ಭಾರೀ ಮಳೆ, ಹಿಮಪಾತ ಅಥವಾ ವಿದ್ಯುತ್ ಸಮಸ್ಯೆಯಿಂದಾಗಿ ಎಲೆಕ್ಟ್ರಾನಿಕ್ ಉಪಕರಣಗಳು ಕಾರ್ಯನಿರ್ವಹಿಸದೇ ಇರಬಹುದು. ಆದರೆ, ಈ ಗಾಜಿನ ಬಾಟಲಿಗಳಿಗೆ ವಿದ್ಯುತ್, ಬ್ಯಾಟರಿ ಅಥವಾ ನೆಟ್‌ವರ್ಕ್‌ನ ಅವಶ್ಯಕತೆ ಇಲ್ಲ. ಇವು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ದಿನದ 24 ಗಂಟೆಯೂ ಕೆಲಸ ಮಾಡುತ್ತವೆ.
Dhanush: ʻಇಳಯರಾಜʼ ಜೊತೆಗೆ ಮತ್ತೊಂದು ಜೀವನ ಚರಿತ್ರೆಯ ಸಿನಿಮಾದಲ್ಲಿ ಧನುಷ್!
ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ಸೈನಿಕರು ಮುಳ್ಳುತಂತಿಯ ಬೇಲಿಗೆ ಹತ್ತಿರ ಹತ್ತಿರವಾಗಿ ಈ ಖಾಲಿ ಬಾಟಲಿಗಳನ್ನು ಸಣ್ಣ ಹಗ್ಗದಿಂದ ಕಟ್ಟುತ್ತಾರೆ. ರಾತ್ರಿಯ ಸಮಯದಲ್ಲಿ ನುಸುಳುಕೋರರು, ಉಗ್ರಗಾಮಿಗಳು ಅಥವಾ ಕಾಡು ಪ್ರಾಣಿಗಳು ಬೇಲಿಯನ್ನು ದಾಟಲು ಅಥವಾ ಮುಟ್ಟಲು ಪ್ರಯತ್ನಿಸಿದಾಗ, ಬೇಲಿಯಲ್ಲಿ ಉಂಟಾಗುವ ಕಂಪನದಿಂದ ಬಾಟಲಿಗಳು ಪರಸ್ಪರ ತಾಗುತ್ತವೆ. ನಿಶಬ್ದವಾದ ರಾತ್ರಿಯಲ್ಲಿ ಈ ಬಾಟಲಿಗಳ ಸದ್ದು ಬಹಳ ದೂರದವರೆಗೆ ಕೇಳಿಸುತ್ತದೆ. ಈ ಶಬ್ದವನ್ನು ಗುರುತಿಸಲು ತರಬೇತಿ ಪಡೆದ ಸೈನಿಕರು ತಕ್ಷಣವೇ ಜಾಗೃತರಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.
ಕಡಿಮೆ ವೆಚ್ಚ, ಹೆಚ್ಚಿನ ಸುರಕ್ಷತೆ
ಲಕ್ಷಾಂತರ ರೂಪಾಯಿ ವೆಚ್ಚದ ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳು ಮತ್ತು ಲೇಸರ್ ಅಲಾರಾಂ ವ್ಯವಸ್ಥೆಗಳಿಗೆ ಹೋಲಿಸಿದರೆ ಈ ವಿಧಾನ ಅತ್ಯಂತ ಅಗ್ಗವಾಗಿದೆ. ಖಾಲಿ ಬಾಟಲಿಗಳು ಸುಲಭವಾಗಿ ಲಭ್ಯವಿರುತ್ತವೆ ಮತ್ತು ಇವುಗಳ ನಿರ್ವಹಣಾ ವೆಚ್ಚವೂ ಶೂನ್ಯ. ಆಧುನಿಕ ತಂತ್ರಜ್ಞಾನ ತಲುಪದ ದೂರದ ಪ್ರದೇಶಗಳಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.
ಪಂಜಾಬ್ ಮತ್ತು ಜಮ್ಮು ಸೆಕ್ಟರ್‌ಗಳಂತಹ ಪ್ರದೇಶಗಳಲ್ಲಿ ಚಳಿಗಾಲದ ದಟ್ಟ ಮಂಜಿನಿಂದಾಗಿ ಸರಿಯಾಗಿ ಏನೂ ಕಾಣುವುದಿಲ್ಲ. ಇಂತಹ ಸಮಯದಲ್ಲಿ ಅತ್ಯಾಧುನಿಕ ಉಪಕರಣಗಳೂ ವಿಫಲವಾಗಬಹುದು. ಆದರೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ನಂಬಿರುವ ಈ 'ಬಾಟಲಿ ತಂತ್ರ' ಮಾತ್ರ ಸದಾ ಕಾಲಕ್ಕೂ ಅತ್ಯಂತ ಸರಳ ಮತ್ತು ಯಶಸ್ವಿ ಭದ್ರತಾ ಕ್ರಮವಾಗಿದೆ.