ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ( Tamil Nadu) ಮಂಗಳವಾರ ಗೊಂದಲ ಉಂಟಾಗಿದ್ದು, ಡಿಎಂಕೆ ಸರ್ಕಾರದ ಅವಧಿಯಲ್ಲಿ ವ್ಯವಸ್ಥಿತ ಹಾಗೂ ಗಂಭೀರ ಭ್ರಷ್ಟಾಚಾರ ನಡೆದಿದ್ದು, ಪಕ್ಷದ ನಿಧಿ ಸಂಗ್ರಹಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಮಾಡಿದ ಭಾಷಣಕ್ಕೆ ಡಿಎಂಕೆ (DMK) ಶಾಸಕರು ವಿರೋಧ ವ್ಯಕ್ತ ಪಡಿಸಿದರು. ಈ ವೇಳೆ ಭಾರೀ ಗದ್ದಲ ಉಂಟಾಗಿದ್ದರಿಂದ ಕೆಲ ಶಾಸಕರನ್ನು ಸ್ಪೀಕರ್ ಸದನದಿಂದ ಹೊರ ಹಾಕಿದ್ದಾರೆ.
ಕಲಾಪ ಪ್ರಾರಂಭವಾದ ಕೂಡಲೇ, ಡಿಎಂಕೆ ಸಚೇತಕ ಇವಿ ವೇಲು, ವಿಜಯ್ ಅವರು ಸೋಮವಾರ ಮಾಡಿದ ಭಾಷಣದಲ್ಲಿ ಮಾಡಿದ ಉಲ್ಲೇಖಗಳನ್ನು ವಿಧಾನಸಭೆ ದಾಖಲೆಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದಾಗ ಗದ್ದಲ ಪ್ರಾರಂಭವಾಯಿತು. ವಿಧಾನಸಭೆಯಲ್ಲಿ ಸೋಮವಾರ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಯ್, ಜಾರಿ ನಿರ್ದೇಶನಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಹಿಂದಿನ ಡಿಎಂಕೆ ಆಡಳಿತಾವಧಿಯಲ್ಲಿ ಪುರಸಭೆ ಆಡಳಿತ ಇಲಾಖೆ ಹಾಗೂ ರಾಜ್ಯದ ಮದ್ಯ ಮಾರಾಟ ಸಂಸ್ಥೆಯಾದ ಟಾಸ್ಮ್ಯಾಕ್ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿವರವನ್ನೊಳಗೊಂಡ ಪಟ್ಟಿ ಬಿಡುಗಡೆ ಮಾಡಿದ್ದರು.
ಪಕ್ಷದ ನಿಧಿಯ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಲಾಭ ಪಡೆದವರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಉದಯನಿಧಿ ಅವರ ಹೆಸರುಗಳನ್ನು ಕೇಂದ್ರ ಸಂಸ್ಥೆಯು ಉಲ್ಲೇಖಿಸಿದೆ. ಟಾಸ್ಮ್ಯಾಕ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಹೆಸರನ್ನೂ ಉಲ್ಲೇಖಿಸಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಸದಸ್ಯರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಸ್ಪೀಕರ್ ಅವರನ್ನು ತಡೆದಿದ್ದಾರೆ. ಸ್ಪೀಕರ್ ತೀರ್ಪಿನ ಹೊರತಾಗಿಯೂ, ಡಿಎಂಕೆ ಶಾಸಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಕೆಲ ಶಾಸಕರು ಸದನದ ಬಾವಿಯೊಳಗೆ ಇಳಿದು ವಿಜಯ್ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಚೆನ್ನೈನಲ್ಲಿ ವಿಶ್ವ ದರ್ಜೆಯ ತಮಿಳುನಾಡು ಒಲಿಂಪಿಕ್ ಸಿಟಿ ಸ್ಥಾಪನೆಗೆ ಸಿಎಂ ವಿಜಯ್ ಅನುಮೋದನೆ!
"ಸ್ಪೀಕರ್ ತೀರ್ಪಿನ ನಂತರವೂ ಡಿಎಂಕೆ ಶಾಸಕರು ಇಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ, ಆದ್ದರಿಂದ ಅವರನ್ನು ವಿಧಾನಸಭೆಯಿಂದ ತೆಗೆದುಹಾಕುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ" ಎಂದು ಸದನದ ನಾಯಕ ಕೆ.ಎ. ಸೆಂಗೋಟ್ಟೈಯನ್ ಪ್ರತಿಭಟನಾ ನಿರತ ಶಾಸಕರ ವಿರುದ್ಧ ವಿಧಾನಸಭೆ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವಂತೆ ಕೋರಿದರು. ಬಳಿಕ ಘೋಷಣೆಗಳು ಮುಂದುವರಿದಂತೆ, ಪ್ರತಿಭಟನಾ ನಿರತ ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುವಂತೆ ಸ್ಪೀಕರ್ ವಿಧಾನಸಭೆ ಮಾರ್ಷಲ್‌ಗಳಿಗೆ ಆದೇಶಿಸಿದ್ದಾರೆ.