ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಸಿಂದೂರ ಅಳಿಸಿದವರಿಗೆ ದಿಟ್ಟ ಉತ್ತರ ನೀಡಿದ ನಾರಿ ಶಕ್ತಿಯರು ಯಾರು ಗೊತ್ತೇ?

ಭಾರತೀಯ ಮಹಿಳೆಯ ಸಿಂದೂರ ಅಳಿಸುವ ಕಾರ್ಯ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿರುವ ಆಪರೇಷನ್‌ ಸಿಂದೂರ ಕಾರ್ಯಾಚರಣೆಯ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಮೂಲಕ ಶತ್ರು ರಾಷ್ಟ್ರಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಇವರು ಯಾರು ಗೊತ್ತೇ?

ಆಪರೇಷನ್ ಸಿಂದೂರ್‌ನಲ್ಲಿ ಭಾಗಿಯಾದ ದಿಟ್ಟ ಮಹಿಳೆಯರು ಯಾರು ಗೊತ್ತೇ?

ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Terror Attack) ಪ್ರತಿಯಾಗಿ ಉಗ್ರರ ಬೆನ್ನಟ್ಟಿರುವ ಭಾರತೀಯ ಸೇನೆ ಬುಧವಾರ ಮುಂಜಾನೆ ಆಪರೇಷನ್‌ ಸಿಂಧೂರ್‌ (Operation Sindoor) ಕಾರ್ಯಾಚರಣೆಯನ್ನು ನಡೆಸಿ ಪಾಕಿಸ್ತಾನದೊಳಗಿನ ಕೋಟ್ಲಿ, ಮುರಿಡ್ಕೆ ಮತ್ತು ಬಹವಾಲ್ಪುರ ಸೇರಿದಂತೆ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾದ (LeT) ಮೂಲಸೌಕರ್ಯವನ್ನೇ ಗುರಿಯಾಗಿ ಮಾಡಲಾಗಿದೆ. ಈ ದಾಳಿಯ ಬಳಿಕ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿರುವುದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh).

ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಮೂಲಕ ಭಾರತೀಯ ಮಹಿಳೆಯ ಸಿಂದೂರ ಅಳಿಸುವ ಕಾರ್ಯ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ ಮಾತ್ರವಲ್ಲದೆ ಶತ್ರು ರಾಷ್ಟ್ರಕ್ಕೆ ಬಲವಾದ ಸಂದೇಶವನ್ನೂ ರವಾನಿಸಿದ್ದಾರೆ.

ಇದು ಭಾರತೀಯ ಇತಿಹಾಸದಲ್ಲೇ ಒಂದು ಅಭೂತಪೂರ್ವ ಘಟನೆ. ಯಾಕೆಂದರೆ ಇದೇ ಮೊದಲ ಬಾರಿಗೆ ದೇಶದ ಪ್ರಮುಖ ಮಿಲಿಟರಿ ಕಾರ್ಯಾಚರಣೆಯ ಕುರಿತು ಇಬ್ಬರು ಮಹಿಳಾ ಅಧಿಕಾರಿಗಳು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿದರು. ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಅವರ ದೃಢವಾದ ಹೇಳಿಕೆಗಳು ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಭಾರತದ ದೃಢಸಂಕಲ್ಪವನ್ನು ಒತ್ತಿ ಹೇಳಿದೆ. ಅಲ್ಲದೇ ಸಶಸ್ತ್ರ ಪಡೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಬಲವನ್ನೂ ಪ್ರತಿಬಿಂಬಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದರು. ಇದು 26/11 ಮುಂಬೈ ದಾಳಿಯ ಅನಂತರ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ. ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಪುರುಷ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿ ದಾಳಿ ನಡೆಸಿತ್ತು.

ಇದಕ್ಕೆ ಪ್ರತಿಯಾಗಿ ಬುಧವಾರ ಮುಂಜಾನೆ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿಗಳನ್ನು ನಡೆಸಿತು. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಪುರುಷರ ಪತ್ನಿಯರು ಮತ್ತು ಕುಟುಂಬಗಳ ಸ್ಮರಣಾರ್ಥ ಈ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್‌ ಎಂದು ಹೆಸರಿಡಲಾಯಿತು.

ಈ ನಡುವೆ ದೇಶದ ಗಮನ ಸೆಳೆದಿರುವ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕುರಿತು ಕಿರು ಮಾಹಿತಿ ಇಲ್ಲಿದೆ.

sofia

ಕರ್ನಲ್ ಸೋಫಿಯಾ ಖುರೇಷಿ

ಗುಜರಾತ್ ಮೂಲದವರಾದ ಸೋಫಿಯಾ ಖುರೇಷಿ 1981ರಲ್ಲಿ ಗುಜರಾತ್‌ನ ವಡೋದರಾದಲ್ಲಿ ಜನಿಸಿದರು. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಅವರ ಅಜ್ಜ ಕೂಡ ಭಾರತೀಯ ಸೇನೆಯಲ್ಲಿದ್ದರು. ಸೋಫಿಯಾ ಅವರ ತಂದೆ ಕೂಡ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರು.

ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸೋಫಿಯಾ ಖುರೇಷಿ 1999ರಲ್ಲಿ ಭಾರತೀಯ ಸೇನೆಗೆ ಸೇರಿದರು. ಬಳಿಕ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಅವರು ಆಫ್ರಿಕಾದ ಕಾಂಗೋದಲ್ಲಿ 2006ರಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿದ್ದರು. 2010 ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಮಾಡಿರುವ ಅತ್ಯುತ್ತಮ ಸೇವೆಗೆ ಸಿಗ್ನಲ್ ಆಫೀಸರ್ ಇನ್ ಚೀಫ್ ಅವರಿಂದ ಸೋಫಿಯಾ ಖುರೇಷಿ ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ.

2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತು ‘ಎಕ್ಸರ್ಸೈಸ್ ಫೋರ್ಸ್ 18’ ರಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿರುವ ಕೀರ್ತಿ ಕೂಡ ಇವರದ್ದಾಗಿದೆ. ಆ ಕವಾಯತಿನಲ್ಲಿ ಭಾಗವಹಿಸಿದ್ದ 18 ತಂಡಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಏಕೈಕ ಮತ್ತು ಭಾರತದ ಮೊದಲ ಮಹಿಳಾ ಅಧಿಕಾರಿಯಾಗಿದ್ದರು. ಅನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಭಾಗವಹಿಸುವ ಎಲ್ಲಾ ರಾಷ್ಟ್ರಗಳಲ್ಲಿ ಏಕೈಕ ಮಹಿಳಾ ತುಕಡಿ ಕಮಾಂಡರ್ ಆಗಿಯು ಇವರು ಗುರುತಿಸಿಕೊಂಡಿದ್ದಾರೆ.

ಆಪರೇಷನ್ ಸಿಂಧೂರ್ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಅವರ ಸಾಧನೆ, ನಾಯಕತ್ವ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರ ರಾಜಿಯಾಗದ ಮನೋಭಾವ ಮತ್ತು ನಿರ್ಭೀತ ಪ್ರಯತ್ನಗಳಿಗೆ ಈಗ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ದೇಶದ ಯುವತಿಯರನ್ನು ಭಾರತೀಯ ಸೇನೆಗೆ ಸೇರಲು ಆಹ್ವಾನಿಸುವ ಖುರೇಷಿ, ಸಾಧ್ಯವಾದರೆ, ಭಾರತೀಯ ಸೇನೆಗೆ ಸೇರಿ. ಇದು ಗೌರವ ಮತ್ತು ಶ್ರೇಷ್ಠತೆಯೊಂದಿಗೆ ತಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಿದ್ಧರಿರುವ ಜನರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವ ಮನವಿಯಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: 'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳು ಯಾವುದು?

wing

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

ಭಾರತೀಯ ವಾಯುಪಡೆಗೆ (IAF) 2004ರ ಡಿಸೆಂಬರ್ 18ರಂದು ವಾಯುಪಡೆಯ ಹೆಲಿಕಾಪ್ಟರ್‌ ಪೈಲಟ್‌ ನೇಮಕಗೊಂಡ ವ್ಯೂಮಿಕಾ ಸಿಂಗ್‌ ಪ್ರಸ್ತುತ ಅತ್ಯುತ್ತಮ ವಿಂಗ್‌ ಕಮಾಂಡರ್‌ಗಳಲ್ಲಿ ಒಬ್ಬರು. ಚೀತಾ, ಚೇತಕ್‌ನಂತಹ ಯುದ್ಧ ಹೆಲಿಕಾಪ್ಟರ್‌ಗಳನ್ನು ಹಾರಿಸುವಲ್ಲಿ ಪರಿಣತಿ ಪಡೆದಿದ್ದಾರೆ. ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದ ಇವರ ಸತತ ಕಠಿಣ ಪರಿಶ್ರಮದಿಂದಾಗಿ 13 ವರ್ಷಗಳ ಬಳಿಕ ಇವರು 2017 ಡಿಸೆಂಬರ್ 18ರಲ್ಲಿ ವಿಂಗ್‌ ಕಮಾಂಡರ್‌ ಆಗಿ ಭಡ್ತಿ ಪಡೆದರು. 2021ರಲ್ಲಿ ಮಣಿರಾಂಗ್‌ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದಲ್ಲಿ ವ್ಯೋಮಿಕಾ ಸಿಂಗ್‌ ಕೂಡ ಇದ್ದರು.

6ನೇ ತರಗತಿಯಲ್ಲಿರುವಾಗ ತಮ್ಮ ಹೆಸರಿನ ಅರ್ಥ ತಿಳಿದು ಆಕಾಶದ ಬಗ್ಗೆ ಕುತೂಹಲ ಪಡುತ್ತಿದ್ದ ವಿಂಗ್‌ ಕಮಾಂಡರ್‌ ವ್ಯೂಮಿಕಾ ಸಿಂಗ್‌ ಈಗ ಆಕಾಶವೇ ನನ್ನದಾಗಿದೆ ಎನ್ನುತ್ತಾರೆ. ವ್ಯೂಮಿಕಾ ಎಂದರೆ ಆಕಾಶವೇ ಮುಷ್ಟಿಯಲ್ಲಿ ಹಿಡಿದಿರುವವರು ಎನ್ನುವ ಅರ್ಥವಿದೆ.

ಹಲವಾರು ಅಪಾಯಕಾರಿ ಹಾರಾಟ ಕಾರ್ಯಾಚರಣೆ ನಡೆಸಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಾಯುಪಡೆಯಲ್ಲಿ ಗೌರವಾನ್ವಿತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ಪ್ರಶಂಸೆಗಳು ದೊರೆತಿದ್ದು, ಇದರಲ್ಲಿ ಈಶಾನ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ವೇಳೆ ಸಿಗ್ನಲ್ ಆಫೀಸರ್-ಇನ್-ಚೀಫ್ ಅವರ ಮೆಚ್ಚುಗೆಯೂ ಸೇರಿದೆ.

ಸಿಂದೂರ್‌ ಕಾರ್ಯಾಚರಣೆ

ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ನಡೆಸಿದ ನಂತರ ಸಿಂದೂರ್‌ ಕಾರ್ಯಾಚರಣೆಯ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಲು ಕರ್ನಲ್ ಖುರೇಷಿ ಮತ್ತು ವಿಂಗ್ ಕಮಾಂಡರ್ ಸಿಂಗ್ ಅವರನ್ನು ಆಯ್ಕೆ ಮಾಡಿರುವುದು ಭಾರತದ ಕಮಾಂಡ್‌ನಲ್ಲಿ ಮಹಿಳೆಯರ ಉಪಸ್ಥಿತಿ ಹೆಚ್ಚುತ್ತಿರುವ ಸೂಚಕವಾಗಿದೆ. ಇದು ಲಿಂಗ ಸಮಾನತೆಗೆ ರಾಷ್ಟ್ರದ ಬೆಂಬಲ ಮತ್ತು ರಾಷ್ಟ್ರೀಯ ರಕ್ಷಣೆಗೆ ಮಹಿಳೆಯರ ಮೌಲ್ಯದ ಬಗ್ಗೆ ಪ್ರಬಲ ಸಂದೇಶವನ್ನು ಸಾರುತ್ತದೆ.