ಲಖನೌ: ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಅನೇಕ ಅವಘಡ ನಡೆದಿರುವ ಘಟನೆಗಳ ಸಂಖ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗುತ್ತಿದೆ. ಆಪರೇಷನ್ ಸಂದರ್ಭದಲ್ಲಿ ಸೂಜಿ, ಕತ್ತರಿಯನ್ನು ಹೊಟ್ಟೆಯಲ್ಲೇ ಬಿಡುವುದು, ಯಾವುದೋ ಕಾಯಿಲೆಗೆ ಇನ್ಯಾವುದೊ ಔಷಧ ನೀಡುವುದು ಹೀಗೆ ನಾನಾ ರೀತಿಯ ವೈದ್ಯಕೀಯ ನಿರ್ಲಕ್ಷ್ಯ ನಡೆಯುತ್ತಲೇ ಇದ್ದು ಸಾರ್ವಜನಿಕರು ಇದರಿಂದ ತೊಂದರೆಗೊಳಗಾಗುತ್ತಲೇ ಇರುತ್ತಾರೆ. ಇದೀಗ ಮಗುವಿನ ತಲೆಗೆ ಗಾಯವಾಗಿದ್ದಕ್ಕೆ ರಕ್ತ ಸ್ರಾವ ತಡೆಯಲು ಹೊಲಿಗೆ ಬದಲು ಫೆವಿಕ್ವಿಕ್ ಗಮ್ ಬಳಸಿ ಚಿಕಿತ್ಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರು ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿದ್ದಾರೆ ಎಂದು ಮಗುವಿನ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.
ಜಾಗೃತಿ ವಿಹಾರ್ ಪ್ರದೇಶದ ಪ್ರೀಮಿಯಂ ಸೊಸೈಟಿಯ ನಿವಾಸಿ ಸರ್ದಾರ್ ಜಸ್ಪಿಂದರ್ ಸಿಂಗ್ ಅವರ ಮಗ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದಾನೆ. ಪರಿಣಾಮ ರಕ್ತಸ್ರಾವವಾಗಿದೆ. ಹೀಗಾಗಿ ಕುಟುಂಬವು ಮಗುವನ್ನು ತಕ್ಷಣವೇ ಭಾಗ್ಯಶ್ರೀ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಆಸ್ಪತ್ರೆಯ ವೈದ್ಯರು ಚಿಕಿತ್ಸೆಯ ವೇಳೆಯಲ್ಲಿ 5 ರೂ. ಫೆವಿಕ್ವಿಕ್‌ನ ಟ್ಯೂಬ್ ಬಳಕೆ ಮಾಡಿದ್ದಾರೆ. ಮಗುವಿನ ಗಾಯವನ್ನು ಮುಚ್ಚಲು ನೇರವಾಗಿ ಅದನ್ನು ಚರ್ಮಕ್ಕೆ ಹಚ್ಚಿದರು ಎಂದು ಮನೆಯವರು ಆರೋಪಿಸಿದ್ದಾರೆ.
Viral Video: ಮರು ಮದುವೆಯಾಗಲು ಹೊರಟ ಪತಿಗೆ ಶಾಕ್ ಕೊಟ್ಟ ಮೊದಲ ಪತ್ನಿ
ಹೀಗಾಗಿ ಮಗು ನೋವಿನಿಂದ ಅಳುತ್ತಿತ್ತು. ಮಗುವನ್ನು ಸಮಾಧಾನಪಡಿಸಲು ಹಲವು ಪ್ರಯತ್ನಗಳನ್ನು ಕೂಡ ಮಾಡಲಾಯಿತು. ಇದಕ್ಕೆಲ್ಲ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ದೂರಿದ್ದಾರೆ. ಮಗುವಿಗೆ ರಾತ್ರಿಯಿಡೀ ನಿದ್ರೆ ಬರದೆ, ಇನ್ನೂ ತೀವ್ರ ನೋವು ಅನುಭವಿಸು ತ್ತಿದ್ದರಿಂದ, ಮರುದಿನ ಬೆಳಗ್ಗೆ ಮಗುವನ್ನು ಲೋಕಪ್ರಿಯ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಪೋಷಕರು ತಿಳಿಸಿದ್ದಾರೆ. ಆದರೆ ವೈದ್ಯರು ಅವರ ಆರೋಪವನ್ನು ತಳ್ಳಿಹಾಕಿದ್ದಾರೆ.
ಲೋಕಪ್ರಿಯಾ ಆಸ್ಪತ್ರೆಯ ವೈದ್ಯಕೀಯ ತಂಡವು ಮಗುವಿನ ಚರ್ಮದಿಂದ ಫೆವಿಕ್ವಿಕ್ ಗಮ್ ಅನ್ನು ತೆಗೆಯಲು ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿದ್ದಾರೆ. ಅನಂತರ ಗಾಯವನ್ನು ಸರಿಯಾಗಿ ಮುಚ್ಚಲು ವೈದ್ಯರು ನಾಲ್ಕು ಹೊಲಿಗೆಗಳನ್ನು ಹಾಕಿದರು ಎಂದು ಮಗುವಿನ ಕುಟುಂಬದವರು ಹೇಳಿದ್ದಾರೆ. ಮೀರತ್ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಮಾತನಾಡಿ, ಮಗುವಿನ ಕುಟುಂಬ ದೂರು ದಾಖಲಿಸಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದ್ದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯವನ್ನು ನಡೆಯದಂತೆ ಎಚ್ಚರಿಕೆ ವಹಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಕುಟುಂಬವು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕೂಡ ಮನವಿ ನೀಡಿದೆ.