ಜೈಪುರ, ಜ. 26: ಅಮೆರಿಕದ ಉದ್ಯಮಿ ಮತ್ತು ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ (Donald Trump Jr.) ಭಾರತ ಪ್ರವಾಸದಲ್ಲಿದ್ದಾರೆ. ಟ್ರಂಪ್ ಜೂನಿಯರ್ ನವೆಂಬರ್ 20ರಂದು ಆಗ್ರಾದ ಐತಿಹಾಸಿಕ ತಾಜ್‍ಮಹಲ್ ಪ್ರವಾಸದೊಂದಿಗೆ ತಮ್ಮ ಭಾರತ ಪ್ರವಾಸವನ್ನು ಆರಂಭಿಸಿದರು. ಅವರು 40 ದೇಶಗಳ 126 ವಿಶೇಷ ಅತಿಥಿಗಳ ನಿಯೋಗದೊಂದಿಗೆ ಆಗಮಿಸಿ ತಾಜ್‍ಮಹಲ್‍ನ (Taj Mahal) ಸೌಂದರ್ಯವನ್ನು ವೀಕ್ಷಿಸಿದರು. ಇಲ್ಲಿ ಸುಮಾರು 1 ಗಂಟೆ ಕಳೆದರು.
ಟ್ರಂಪ್ ಜೂನಿಯರ್ ತಾಜ್‍ಮಹಲ್ ನಿರ್ಮಾಣ ಮತ್ತು ಸಾಂಕೇತಿಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು ಎಂದು ಭಾರತದ ಹಿರಿಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದರು. ಗುಜರಾತ್‌ಗೆ ತೆರಳುವ ಮೊದಲು ಅವರು ಸ್ಮಾರಕವನ್ನು ವಿಶ್ವದ ಅದ್ಭುತಗಳಲ್ಲಿ ಒಂದು ಎಂದು ಬಣ್ಣಿಸಿದರು.
ಮೋದಿ ಒಬ್ಬ ಮಹಾನ್ ವ್ಯಕ್ತಿ, ಸ್ನೇಹಿತ! ಭಾರತ ಭೇಟಿ ಬಗ್ಗೆ ಸುಳಿವು ಕೊಟ್ರಾ ಡೊನಾಲ್ಡ್ ಟ್ರಂಪ್?
ಜಾಮ್‌ನಗರಕ್ಕೆ ಬಂದಿಳಿದ ಅವರ ಆತಿಥ್ಯವನ್ನು ಅಂಬಾನಿ ಕುಟುಂಬವು ವಹಿಸಿತು. ಅಲ್ಲಿ ಅವರು ಅನಂತ್ ಅಂಬಾನಿ ನೇತೃತ್ವದ ರಿಲಯನ್ಸ್‌ನ ಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಯೋಜನೆ ವಂತಾರಕ್ಕೆ ಭೇಟಿ ನೀಡಿದರು. ಆನೆಗಳು, ಹುಲಿಗಳಿಗೆ ನೀಡಲಾದ ಸಂರಕ್ಷಣಾ ಪ್ರಯತ್ನವನ್ನು ಟ್ರಂಪ್ ಜೂನಿಯರ್ ಶ್ಲಾಘಿಸಿದರು. ಇಲ್ಲಿನ ದೃಷ್ಟಿಕೋನ, ರಕ್ಷಿಸಿದ ಪ್ರಾಣಿಗಳಿಗೆ ಸಿಗುವ ಸೌಲಭ್ಯ ನೋಡಿ ಅವರು, ʼʼಇದು ನಾನು ಬದುಕುವುದಕ್ಕಿಂತ ಉತ್ತಮವಾಗಿದೆʼʼ ಎಂದು ಪ್ರಶಂಸಿಸಿದರು.
ನಂತರ ಅವರು ವಂತಾರ ಕ್ಯಾಂಪಸ್ ಬಳಿಯ ಗಣಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜತೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಡಿಯಾ ನೃತ್ಯ ಮಾಡಿದರು. ಬಳಿಕ ಟ್ರಂಪ್ ಜೂನಿಯರ್ ಮತ್ತು ಅವರ ಗೆಳತಿ ಬೆಟ್ಟಿನಾ ಆಂಡರ್ಸನ್, ಫಾರ್ಮಾ ಉತ್ತರಾಧಿಕಾರಿ ನೇತ್ರಾ ಮಂಟೇನಾ ಮತ್ತು ತಂತ್ರಜ್ಞಾನ ಉದ್ಯಮಿ ವಂಶಿ ಗಡಿರಾಜು ಅವರ ಅದ್ಧೂರಿ ವಿವಾಹ ಆಚರಣೆಗಾಗಿ ಉದಯಪುರಕ್ಕೆ ತೆರಳಿದರು. ಅಲ್ಲಿ 3 ದಿನ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಾಲಿವುಡ್ ಥೀಮ್ ಸಂಗೀತ ಕಾರ್ಯಕ್ರಮದಲ್ಲಿ ಟ್ರಂಪ್ ಜೂನಿಯರ್ ಮತ್ತು ಅವರ ಗೆಳತಿ ವೇದಿಕೆಯಲ್ಲಿ ನಟ ರಣವೀರ್ ಸಿಂಗ್ ಅವರೊಂದಿಗೆ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದ ʼವಾಟ್ ಜುಮ್ಕಾ? ʼ ಹಾಡಿಗೆ ಹೆಜ್ಜೆ ಹಾಕಿದರು. ಬಿಳಿ-ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿದ ಆಂಡರ್ಸನ್ ಮತ್ತು ನೀಲಿ ಬಣ್ಣದ ಶೆರ್ವಾನಿ ಧರಿಸಿದ ಟ್ರಂಪ್ ಜೂನಿಯರ್ ಜತೆ ರಣವೀರ್ ಡ್ಯಾನ್ಸ್ ಮಾಡಿದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವಿಡಿಯೊ ವೀಕ್ಷಿಸಿ:
ಮದುವೆ ಸಂಭ್ರಮದ ನಡುವೆ, ಟ್ರಂಪ್ ಜೂನಿಯರ್ ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿ ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಡಾ. ಲಕ್ಷ್ಯರಾಜ್ ಸಿಂಗ್ ಮೇವಾರ್ ಅವರನ್ನು ಭೇಟಿ ಮಾಡಿದರು. ಮೇವಾರ್, ಅಮೆರಿಕ ಅಧ್ಯಕ್ಷರ ಮಗನನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಿದರು. ಮೆಹಂದಿ ಸಮಾರಂಭದ ವೇಳೆ ದಂಪತಿ ಫೋಟೊಕ್ಕೆ ಪೋಸ್ ನೀಡಿದರು.
ಟ್ರಂಪ್ ಜೂನಿಯರ್ ಪಿಚೋಲಾ ಸರೋವರದ ಐತಿಹಾಸಿಕ ಜಗಮಂದಿರ ಅರಮನೆಯಲ್ಲಿ ನಡೆದ ಮುಖ್ಯ ಕಾರ್ಯಕ್ರಮ ವಿವಾಹ ಸಮಾರಂಭದಲ್ಲಿ ಹಾಜರಿದ್ದರು. ಆಂಡರ್ಸನ್ ನೀಲಿ-ಮಿಂಟ್ ಕಸೂತಿ ಲೆಹೆಂಗಾ ಧರಿಸಿದ್ದರು. ಅದ್ಧೂರಿ ವಿವಾಹ ಸಮಾರಂಭದ ನಂತರ, ಟ್ರಂಪ್ ಜೂನಿಯರ್ ಗುಜರಾತ್‌ಗೆ ಮರಳುವ ನಿರೀಕ್ಷೆಯಿದೆ. ಅಲ್ಲಿ ಅವರು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.