ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಒಮಾನ್‌ನಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸಾವು; 10 ಜನರಿಗೆ ಗಾಯ

ಪಶ್ಚಿಮ ಏಷ್ಯಾ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಭಾರತದಲ್ಲಿ ಇಂಧನ ಪೂರೈಕೆಯ ಕೊರತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ನಡುವೆ ಒಮಾನ್‌ನಲ್ಲಿ ಡ್ರೋನ್ ದಾಳಿಯಾಗಿದ್ದು, ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ. 10 ಭಾರತೀಯರು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ. ಒಮಾನ್‌ನ ಸೋಹಾರ್ ನಗರದಲ್ಲಿ ಡ್ರೋನ್ ದಾಳಿ ನಡೆದಿದೆ.

ಸಂಗ್ರಹ ಚಿತ್ರ

ಒಮಾನ್‌: ಡ್ರೋನ್ ದಾಳಿಯಲ್ಲಿ (drone attack) ಇಬ್ಬರು ಭಾರತೀಯರು (Indians) ಸಾವನ್ನಪ್ಪಿರುವ ಘಟನೆ ಒಮಾನ್‌ನ (Oman) ಸೋಹಾರ್ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 10 ಭಾರತೀಯರು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ (Iran war) ನಡೆಸಿ ಇರಾನ್ ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದ ಬಳಿಕ ಇರಾನ್ ಇದಕ್ಕೆ ಪ್ರತಿಯಾಗಿ ಯುಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ಸಂಘರ್ಷವು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಸೋಹಾರ್ ನಗರದ ಅಲ್-ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ಪತನಗೊಂಡಿದ್ದು, ಇದರ ಪರಿಣಾಮವಾಗಿ ಇಬ್ಬರು ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಹಲವರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕೊಲ್ಲಿ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆ, ಮಾರುಕಟ್ಟೆ ಕುಸಿತ: ಜಾಗತಿಕ ಆರ್ಥಿಕತೆಗೆ ಭಾರಿ ಪೆಟ್ಟು ಕೊಟ್ಟ ಇರಾನ್ ಯುದ್ಧ

ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಹೇಳಿರುವ ಅವರು, ಗಾಯಗೊಂಡ 11 ಜನರಲ್ಲಿ 10 ಮಂದಿ ಭಾರತೀಯರು. ಐವರು ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಐವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿಸಿದರು.

ಗಾಯಗೊಂಡವರಿಗೆ ಸಹಾಯ ಮಾಡಲು ಭಾರತೀಯ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಭಾರತೀಯ ಮಿಷನ್ ಮೃತರ ದೇಹಗಳನ್ನು ಸ್ವದೇಶಕ್ಕೆ ಕಳುಹಿಸುವಲ್ಲಿ ಸಹಾಯ ಮಾಡುತ್ತಿದೆ. ಸುಮಾರು ಒಂದು ಕೋಟಿ ಭಾರತೀಯರು ವಾಸವಾಗಿರುವ ಗಲ್ಫ್ ಪ್ರದೇಶದಾದ್ಯಂತ ಭಾರತೀಯರ ಸುರಕ್ಷತೆಯನ್ನು ಭಾರತ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತನಾಡಿದ್ದು, ಈ ಪ್ರದೇಶದಲ್ಲಿನ ಭಾರತೀಯರ ಸುರಕ್ಷತೆ ಮತ್ತು ಇಂಧನ ಸಾರಿಗೆ ಮಾರ್ಗಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಇರಾನ್‌ನಲ್ಲಿದ್ದ ಸುಮಾರು 170 ಭಾರತೀಯ ಪ್ರಜೆಗಳು ಇತ್ತೀಚೆಗೆ ಅರ್ಮೇನಿಯಾಗೆ ಭೂ ಗಡಿಯನ್ನು ದಾಟಿದ್ದು, ಅವರಲ್ಲಿ ಹಲವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇತರರು ಮುಂಬರುವ ದಿನಗಳಲ್ಲಿ ವಾಣಿಜ್ಯ ವಿಮಾನಗಳ ಮೂಲಕ ಹಿಂತಿರುಗುವ ನಿರೀಕ್ಷೆಯಿದೆ. ಇನ್ನು ಹೊರ್ಮುಜ್ ಜಲಸಂಧಿಯ ಬಳಿ ಭಾರತೀಯ ನಾವಿಕರ ಬಗ್ಗೆ ಮಾಹಿತಿಗಳನ್ನು ಪಡೆಯಲಾಗಿದೆ ಎಂದು ಹೇಳಿದರು.

ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು ಮಾಹಿತಿ ನೀಡಿ, ಪ್ರಸ್ತುತ ಜಲಸಂಧಿಯ ಪಶ್ಚಿಮಕ್ಕೆ 677 ಭಾರತೀಯ ನಾವಿಕರನ್ನು ಹೊತ್ತ 24 ಭಾರತೀಯ ಧ್ವಜ ಹೊಂದಿರುವ ಹಡಗುಗಳಿವೆ. ಜಲಸಂಧಿಯ ಪೂರ್ವಕ್ಕೆ ಮೂರು ಹಡಗುಗಳು, 76 ಭಾರತೀಯ ನಾವಿಕರು ಇದ್ದಾರೆ. ಕೊಲ್ಲಿ ಪ್ರದೇಶದಾದ್ಯಂತ, ಸುಮಾರು 23,000 ಭಾರತೀಯ ನಾವಿಕರು ವ್ಯಾಪಾರಿ ಮತ್ತು ಕಡಲಾಚೆಯ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಪ್ರದೇಶದ ಎಲ್ಲಾ ಹಡಗುಗಳನ್ನು ಸಕ್ರಿಯವಾಗಿ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದು, ಭಾರತೀಯ ಹಡಗುಗಳು ಮತ್ತು ಸಿಬ್ಬಂದಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಡಗು ನಿರ್ದೇಶನಾಲಯವು ಹೊಸ ಸಲಹೆಗಳನ್ನು ನೀಡಿದೆ ಎಂದ ಅವರು, ಇರಾಕ್‌ನ ಬಾಸ್ರಾ ಬಳಿ ನಡೆದ ದಾಳಿಯಲ್ಲಿ ರಕ್ಷಿಸಲಾದ ಸಫೀಸಾ ವಿಷ್ಣು ಹಡಗಿನಲ್ಲಿದ್ದ 15 ನಾವಿಕರು ಪ್ರಸ್ತುತ ಬಸ್ರಾದ ಹೊಟೇಲ್‌ನಲ್ಲಿ ತಂಗಿದ್ದು, ಅವರ ವಾಪಸಾತಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಇಂಧನ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಭಾರತದ ಸಂಸ್ಕರಣಾ ಸಾಮರ್ಥ್ಯ 258 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದೆ. ನಮ್ಮ ಎಲ್ಲಾ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿ ಕಚ್ಚಾ ತೈಲದ ಸಾಕಷ್ಟು ದಾಸ್ತಾನುಗಳಿವೆ. ಸರಬರಾಜುಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಬಿಕ್ಕಟ್ಟು: 8 ಎಲ್‌ಪಿಜಿ ಟ್ಯಾಂಕರ್‌ಗಳ ಸಂಚಾರಕ್ಕೆ ಇರಾನ್ ಜತೆ ಭಾರತದ ಮಾತುಕತೆ

ಎಲ್ ಪಿಜಿ ಬುಕ್ಕಿಂಗ್ ನಲ್ಲಿ ಆಗುತ್ತಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ಬುಕ್ಕಿಂಗ್ ಗಳನ್ನೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿರ್ವಹಿಸಲಾಗುತ್ತಿದೆ. ಸಿಲಿಂಡರ್‌ಗಳನ್ನು ವ್ಯವಸ್ಥಿತವಾಗಿ ತಲುಪಿಸುವುದನ್ನು ಮುಂದುವರಿಸಲಾಗುತ್ತದೆ. ಪೈಪ್‌ಲೈನ್ ನೈಸರ್ಗಿಕ ಅನಿಲದ ಆಯ್ಕೆಯನ್ನು ಹೊಂದಿರುವ ಗ್ರಾಹಕರು ಎಲ್ ಪಿಜಿ ಯಿಂದ ಪಿಎನ್ಜಿ ಗೆ ಬದಲಾಯಿಸಲು ಮನವಿ ಮಾಡಿದ್ದು, ಸುಮಾರು ಆರು ಮಿಲಿಯನ್ ಮನೆಗಳು ತಕ್ಷಣವೇ ಪೈಪ್‌ಲೈನ್ ಜಾಲ ಬದಲಾಯಿಸಬಹುದು. ದೇಶದಲ್ಲಿ ಇಂಧನ ಅಥವಾ ಅಡುಗೆ ಅನಿಲದ ಕೊರತೆಯಿಲ್ಲ. ಈ ಕುರಿತು ಯಾವುದೇ ವದಂತಿಗಳನ್ನು ಹರಡಬೇಡಿ ಎಂದರು.

ವಿದ್ಯಾ ಇರ್ವತ್ತೂರು

View all posts by this author