ನವದೆಹಲಿ, ಸೆ. 19: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ 2026ರ ಚುನಾವಣೆಯಲ್ಲಿ (DUSU Elections 2026) ಎಬಿವಿಪಿ ನಾಲ್ಕು ಪ್ರಮುಖ ಹುದ್ದೆಗಳ ಪೈಕಿ ಮೂರನ್ನು ಗೆದ್ದುಕೊಂಡಿದೆ. ಯಶ್ ದಬಾಸ್ (Yash Dabas) ಅಧ್ಯಕ್ಷರಾಗಿ, ರಿಯಾ ಛವಾಡಿ ಕಾರ್ಯದರ್ಶಿಯಾಗಿ ಹಾಗೂ ಲಕ್ಷ್ಯ ರಾಜ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಗೆದ್ದಿದ್ದಾರೆ. ಈ ಫಲಿತಾಂಶವು ದೆಹಲಿ ವಿಶ್ವವಿದ್ಯಾಲಯದಲ್ಲಿನ ಎಬಿವಿಪಿಯ ಸಂಘಟನಾ ಪ್ರಭಾವ ಮುಂದುವರಿದಿರುವುದನ್ನು ಸಾರಿ ಹೇಳಿದೆ.
ಈ ಬಾರಿ ಚುನಾವಣೆಯ ವಾತಾವರಣ ಹಿಂದಿನ ವರ್ಷಗಳಿಗಿಂತ ವಿಭಿನ್ನವಾಗಿತ್ತು. ಜೆನ್ ಝೀ ವಿದ್ಯಾರ್ಥಿಗಳ ಸಮಸ್ಯೆಗಳು, ಕ್ಯಾಂಪಸ್ ಸುರಕ್ಷತೆ, ಪರೀಕ್ಷಾ ವ್ಯವಸ್ಥೆ, ವಿದ್ಯಾರ್ಥಿ ವಸತಿ ಹಾಗೂ ಆಡಳಿತದ ಹೊಣೆಗಾರಿಕೆ ಪ್ರಮುಖ ಚುನಾವಣಾ ವಿಷಯಗಳಾಗಿದ್ದವು. ಇತ್ತೀಚೆಗೆ ದೆಹಲಿಯ ಸತ್ಯ ನಿಕೇತನದಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಕೂಡ ವಿದ್ಯಾರ್ಥಿಗಳ ವಸತಿ ಸುರಕ್ಷತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತ್ತು.
MCD ವಿರುದ್ಧ ಎಬಿವಿಪಿ ಪ್ರತಿಭಟನೆ
ಸತ್ಯ ನಿಕೇತನದ ಘಟನೆ ಬಳಿಕ ವಿದ್ಯಾರ್ಥಿಗಳ ವಸತಿ ಮತ್ತು ಸುರಕ್ಷತೆ ಕುರಿತು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ವಿಚಾರದಲ್ಲಿ ದೆಹಲಿ ಮಹಾನಗರ ಪಾಲಿಕೆ (MCD) ವಿರುದ್ಧವೂ ಪ್ರತಿಭಟನೆ ನಡೆಸಿ, MCD ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿತ್ತು. ಇದೇ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಚುನಾವಣಾ ಪ್ರಚಾರದ ಪ್ರಮುಖ ವಿಷಯವಾಯಿತು.
ಚುನಾವಣೆಯ ಬಳಿಕ ಮಾತನಾಡಿದ ಯಶ್ ದಬಾಸ್, ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ ವಸತಿಗಳ ಸುರಕ್ಷತಾ ಪರಿಶೀಲನೆ, ಹೊಸ ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ವ್ಯವಸ್ಥೆ ರೂಪಿಸುವುದನ್ನು ತಮ್ಮ ಆದ್ಯತೆ ಎಂದು ಹೇಳಿದ್ದಾರೆ. ಆದರೆ ಈ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಡೆಡ್‌ಲೈನ್ ಮತ್ತು ಬಜೆಟ್ ಬಗ್ಗೆ ಅವರು ಸ್ಪಷ್ಟ ವಿವರ ನೀಡಿಲ್ಲ.
ದೆಹಲಿ ವಿವಿ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಎಬಿವಿಪಿಯ ಯಶ್ ದಬಾಸ್ ಯಾರು?
Gen Z ರಾಜಕೀಯದ ಹೊಸ ಚರ್ಚೆ
ಈ ಬಾರಿಯ DUSU ಚುನಾವಣೆ ಯುವಜನರ ರಾಜಕೀಯ ಮನೋಭಾವದ ಕುರಿತ ಚರ್ಚೆಯ ನಡುವೆಯೇ ನಡೆದಿತ್ತು. ಜಂತರ್ ಮಂತರ್‌ನಲ್ಲಿ ನಡೆದ ಜೆನ್ ಝೀ ನೇತೃತ್ವದ ಪ್ರತಿಭಟನೆಗಳ ಪರಿಣಾಮ ವಿದ್ಯಾರ್ಥಿ ರಾಜಕೀಯದಲ್ಲೂ ಕಂಡುಬಂದಿದೆ ಎಂದು ವರದಿಗಳು ಹೇಳಿವೆ. ಯುವಕರಿಗೆ ಸಂಬಂಧಿಸಿದ ಶಿಕ್ಷಣ, ಉದ್ಯೋಗ, ಪರೀಕ್ಷಾ ವ್ಯವಸ್ಥೆ ಮತ್ತು ಆಡಳಿತದಂತಹ ವಿಚಾರಗಳು ಚುನಾವಣಾ ಚರ್ಚೆಯ ಭಾಗವಾಗಿದ್ದವು.
ಆದರೆ DUSU ಫಲಿತಾಂಶವನ್ನು ಇಡೀ ದೇಶದ Gen Z ಮತದಾರರ ಅಭಿಪ್ರಾಯದ ಪ್ರತಿನಿಧಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ದೆಹಲಿ ವಿಶ್ವವಿದ್ಯಾಲಯದ ಚುನಾವಣೆಯು ನಿರ್ದಿಷ್ಟ ಕ್ಯಾಂಪಸ್‌ನ ಮತದಾನವಾಗಿದ್ದು, ಅದರ ಫಲಿತಾಂಶವನ್ನು ರಾಷ್ಟ್ರೀಯ ಮಟ್ಟದ ಯುವ ಮತದಾನದ ಪ್ರವೃತ್ತಿಗೆ ನೇರವಾಗಿ ಅನ್ವಯಿಸುವಲ್ಲಿ ಮಿತಿಗಳಿವೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಯ ಗೆಲುವೂ ಗಮನಾರ್ಹ
ಈ ಚುನಾವಣೆಯ ಮತ್ತೊಂದು ಪ್ರಮುಖ ಅಂಶ ದೀಪಾಂಶು ಶೋಕೀನ್ ಅವರ ಗೆಲುವು. NSUI ಟಿಕೆಟ್ ನಿರಾಕರಿಸಲ್ಪಟ್ಟ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೋಕೀನ್ 30,615 ಮತಗಳನ್ನು ಪಡೆದು ಉಪಾಧ್ಯಕ್ಷ ಸ್ಥಾನ ಗೆದ್ದಿದ್ದಾರೆ. ಎಬಿವಿಪಿಯ ಇಶು ಮೌರ್ಯ 16,910 ಮತ ಪಡೆಯಲಷ್ಟೇ ಶಕ್ತರಾದರು.
ಒಟ್ಟಿನಲ್ಲಿ ದೆಹಲಿ ವಿವಿ ವುನಾವಣಾ ಫಲಿತಾಂಶದಲ್ಲಿ ಎಬಿವಿಪಿ ಮೂರು ಪ್ರಮುಖ ಹುದ್ದೆಗಳನ್ನು ಗೆದ್ದಿದ್ದರೂ, ಸ್ವತಂತ್ರ ಅಭ್ಯರ್ಥಿಯ ಗೆಲುವು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ, ಆಡಳಿತ ಮತ್ತು ಮೂಲಸೌಕರ್ಯ ಕುರಿತ ಚರ್ಚೆಗಳು ಈ ಚುನಾವಣೆಯನ್ನು ಕೇವಲ ಸಂಘಟನೆಗಳ ನಡುವಿನ ಸ್ಪರ್ಧೆಯಾಗಿ ಮಾತ್ರ ನೋಡಲಾಗದಂತೆ ಮಾಡಿವೆ.