ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಧನ ವಿವಾದ: ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣ ಆರೋಪ ತಿರಸ್ಕರಿಸಿದ ಕೇಂದ್ರ

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಹಕ್ಕುಗಳನ್ನು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಅಧಿಕೃತವಾಗಿ ತಿರಸ್ಕರಿಸಿವೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬೆಂಗಳೂರು ಸೇರಿದಂತೆ 7 ಜಿಲ್ಲೆಗಳ ಬಂಕ್‌ಗಳಿಂದ 63 ಇಂಧನ ಮಾದರಿಗಳನ್ನು ಸಂಗ್ರಹಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಪರೀಕ್ಷೆಗೆ ಒಳಪಡಿಸಿತ್ತು.

ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ (E20 Fuel) ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಹಕ್ಕುಗಳನ್ನು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಅಧಿಕೃತವಾಗಿ ತಿರಸ್ಕರಿಸಿವೆ. ದೇಶಾದ್ಯಂತ ಸರಬರಾಜು ಮಾಡಲಾಗುತ್ತಿರುವ E20 ಇಂಧನವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನ ಇತ್ತೀಚಿನ ಗುಣಮಟ್ಟದ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ ಎಂದು ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬೆಂಗಳೂರು ಸೇರಿದಂತೆ 7 ಜಿಲ್ಲೆಗಳ ಬಂಕ್‌ಗಳಿಂದ 63 ಇಂಧನ ಮಾದರಿಗಳನ್ನು ಸಂಗ್ರಹಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಪೆಟ್ರೋಲ್‌ನಲ್ಲಿ ಶೇ. 13.5 ರಿಂದ ಶೇ. 31.2 ರವರೆಗೆ ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ ಎಂದು ಸರ್ಕಾರ ದೂರಲಾಗಿತ್ತು. ಕೆಲವು ಪ್ರಮುಖ ತೈಲ ಕಂಪನಿಗಳ ಪಂಪ್‌ಗಳಲ್ಲಿ ಗರಿಷ್ಠ ಶೇ. 30 ಕ್ಕಿಂತ ಹೆಚ್ಚು ಎಥೆನಾಲ್ ಇರುವುದರಿಂದ ಹಳೆಯ ವಾಹನಗಳ ಇಂಜಿನ್ ಹಾಳಾಗುತ್ತಿದ್ದು, ಗ್ರಾಹಕರಿಗೆ ಮೈಲೇಜ್ ನಷ್ಟವಾಗುತ್ತಿದೆ ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು.

ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ಪರೀಕ್ಷಾ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವು ನಡೆಸಿದ ಸ್ಯಾಂಪಲ್ ಸಂಗ್ರಹಣೆಯ ವೇಳೆ ತೈಲ ಕಂಪನಿಗಳ ಯಾವುದೇ ಪ್ರತಿನಿಧಿಗಳು ಇರಲಿಲ್ಲ. ಈ ಪ್ರಕ್ರಿಯೆಯು ನಿಗದಿತ ಶಾಸನಬದ್ಧ ನಿಯಮಗಳ ಪ್ರಕಾರ ನಡೆದಿಲ್ಲ ಮತ್ತು ಪರೀಕ್ಷಾ ವರದಿಯ ತಾಂತ್ರಿಕ ವಿವರಗಳನ್ನು ತಮಗೆ ಹಂಚಿಕೊಂಡಿಲ್ಲ ಎಂದು ಕಂಪನಿಗಳು ತಿಳಿಸಿವೆ.

ರಾಷ್ಟ್ರಮಟ್ಟದ ಪರೀಕ್ಷಾ ವರದಿ: ಕೇಂದ್ರದ ಹೈ ಟೆಕ್ನಾಲಜಿ ಕೇಂದ್ರವು (CHT) ಇತ್ತೀಚೆಗೆ ದೇಶದ ವಿವಿಧ ಬಂಕ್‌ಗಳಿಂದ 893 ಮಾದರಿಗಳನ್ನು ಪರೀಕ್ಷಿಸಿದ್ದು, ಎಲ್ಲವೂ ನಿಗದಿತ ಮಿತಿಯೊಳಗೆ ಇವೆ. ಇದರಲ್ಲಿ ಕರ್ನಾಟಕದ 56 ಮಾದರಿಗಳೂ ಸೇರಿದ್ದು, ಅವುಗಳಲ್ಲಿ ಸರಾಸರಿ ಶೇ. 19.30 ರಷ್ಟು ಮಾತ್ರ ಎಥೆನಾಲ್ ಇರುವುದು ದೃಢಪಟ್ಟಿದೆ.

ಪೆಟ್ರೋಲ್‌ಗಿಂತ ಎಥೆನಾಲ್ ಖರೀದಿಗೆ ತೈಲ ಕಂಪನಿಗಳಿಗೆ ಹೆಚ್ಚಿನ ವೆಚ್ಚ ತಗುಲುತ್ತದೆ. ಹೀಗಾಗಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲು ಕಂಪನಿಗಳಿಗೆ ಯಾವುದೇ ಆರ್ಥಿಕ ಲಾಭವಿಲ್ಲ ಎಂದು OMCs ಸ್ಪಷ್ಟಪಡಿಸಿವೆ.

E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

ಪ್ರಸ್ತುತ ದೇಶಾದ್ಯಂತ ವಿತರಿಸಲಾಗುವ E20 ಪೆಟ್ರೋಲ್ ನಿಯಮಬದ್ಧವಾಗಿ ಶೇ. 19-21 ರಷ್ಟು ಎಥೆನಾಲ್ ಹೊಂದಿದ್ದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಗೊಂದಲವನ್ನು ಬಗೆಹರಿಸಲು ತೈಲ ಕಂಪನಿಗಳು ಕರ್ನಾಟಕ ಸರ್ಕಾರದೊಂದಿಗೆ ಜಂಟಿಯಾಗಿ ಹಾಗೂ ಪಾರದರ್ಶಕವಾಗಿ ಮರು ಪರೀಕ್ಷೆ ನಡೆಸಲು ಸಿದ್ಧವಿರುವುದಾಗಿ ಘೋಷಿಸಿವೆ.

Vishakha Bhat Heggar

View all posts by this author