ನವದೆಹಲಿ, ಮೇ 24: ಎಬೋಲಾ ವೈರಸ್ (Ebola Virus) ವ್ಯಾಪಕವಾಗಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸೂಡಾನ್ ಸೇರಿದಂತೆ ಕೆಲವು ದೇಶಗಳಿಗೆ ಅಗತ್ಯವಿಲ್ಲದ ಯಾವುದೇ ಪ್ರಯಾಣ ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ (Indian Government) ಸಲಹೆ ನೀಡಿದೆ. ಇದರ ಜೊತೆಗೆ, ಈ ಮೂರು ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ಥಳೀಯ ಆಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಇತರ ಪೀಡಿತ ದೇಶಗಳಲ್ಲಿ ವೈರಸ್ ಉಲ್ಬಣಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸುಗಳಿಗೆ ಅನುಗುಣವಾಗಿ, ಭಾರತ ಸರ್ಕಾರವು ತನ್ನೆಲ್ಲಾ ನಾಗರಿಕರಿಗೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡಾ ಮತ್ತು ದಕ್ಷಿಣ ಸುಡಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳದಂತೆ ಸಲಹೆ ನೀಡುತ್ತದೆ ಎಂದು ಭಾರತ ಸರ್ಕಾರ ಹೊರಡಿಸಿದ ಆರೋಗ್ಯ ಸಲಹಾ ಸಂಸ್ಥೆ ತಿಳಿಸಿದೆ.
ಎಬೋಲಾ ವೈರಸ್ ಸೋಂಕು ಆಫ್ರಿಕಾದ ಕೆಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಕಾರಣ, ಜಗತ್ತಿನ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ತಾತ್ಕಾಲಿಕ ಶಿಫಾರಸುಗಳನ್ನೂ ಅದು ಹೊರಡಿಸಿದೆ.
ನೊರೊ ವೈರಸ್-ಹಂಟಾವೈರಸ್ ಆತಂಕದ ನಡುವೆ ಮತ್ತೆ ವೈರಲ್ ಆದ ಬಾಬಾ ವಂಗಾ ಭವಿಷ್ಯ!
ಮೇ 22ರಂದು ಹೊರಡಿಸಿದ ಹೊಸ ನಿರ್ದೇಶನಗಳ ಪ್ರಕಾರ, ಅಂತಾರಾಷ್ಟ್ರೀಯ ಗಡಿ ತಪಾಸಣಾ ಕೇಂದ್ರಗಳಲ್ಲಿ ರೋಗ ಮೇಲ್ವಿಚಾರಣೆಯನ್ನು ಹೆಚ್ಚಿಸಬೇಕೆಂದು ಸೂಚಿಸಲಾಗಿದೆ. ಸೋಂಕು ಬೇರೆ ದೇಶಗಳಿಗೆ ಹರಡದಂತೆ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಬೇಕು ಎಂದು ಡಬ್ಲ್ಯೂಎಚ್ಒ ತಿಳಿಸಿದೆ.
ಎಬೋಲಾ ಕಾಯಿಲೆ ಎಂದರೇನು?
ಎಬೋಲಾ ರೋಗವು ಬುಂಡಿಬುಗ್ಯೋ ವೈರಸ್ ಪ್ರಭೇದದಿಂದ ಉಂಟಾಗುವ ಗಂಭೀರ ವೈರಲ್ ಜ್ವರವಾಗಿದ್ದು, ಇದು ಇನ್ನೂ ಜಾಗತಿಕ ಮಟ್ಟದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿ ಮುಂದುವರಿದಿದೆ. ಈ ರೋಗವು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಇದು ಮಾನವರಲ್ಲಿ ತೀವ್ರ ಅನಾರೋಗ್ಯವನ್ನು ಉಂಟುಮಾಡುತ್ತದೆ. ಪ್ರಸ್ತುತ, ಬುಂಡಿಬುಗ್ಯೊಗೆ ನೇರವಾಗಿ ಸಂಬಂಧಿಸಿದ ಸೋಂಕುಗಳನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಯಾವುದೇ ಅನುಮೋದಿತ ಲಸಿಕೆಗಳು ಅಥವಾ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ರೋಗವನ್ನು ತಡೆಗಟ್ಟಬಹುದಾಗಿದೆ.
ಸದ್ಯ, ಭಾರತವು ತನ್ನ ಗಡಿಯೊಳಗೆ ಯಾವುದೇ ರೋಗದ ಪ್ರಕರಣಗಳನ್ನು ವರದಿ ಮಾಡಿಲ್ಲವಾದರೂ, ಆರೋಗ್ಯ ಅಧಿಕಾರಿಗಳು ಬಹಳ ಎಚ್ಚರಿಕೆಯಲ್ಲಿದ್ದಾರೆ. ಹೀಗಾಗಿ ಆಫ್ರಿಕಾದ ಈ ಮೂರು ದೇಶಗಳಿಗೆ ಕಾರಣವಿಲ್ಲದೆ ಪ್ರಯಾಣಿಸದಂತೆ ಭಾರತ ಸರ್ಕಾರ ಸಲಹೆ ನೀಡಿದೆ.